ADVERTISEMENT

‘ಕಾರಾಗೃಹ ವೀಕ್ಷಕ’ನಾದ ಎಂ.ಟೆಕ್‌ ಪದವೀಧರ!

ಎಸ್ಸೆಸ್ಸೆಲ್ಸಿ ಅರ್ಹತೆ ಹುದ್ದೆಗೆ ಆಯ್ಕೆಯಾದ ಸ್ನಾತಕೋತ್ತರ ಪದವೀಧರರು

ಸಿದ್ದು ಆರ್.ಜಿ.ಹಳ್ಳಿ
Published 25 ಮಾರ್ಚ್ 2021, 19:30 IST
Last Updated 25 ಮಾರ್ಚ್ 2021, 19:30 IST
ಹಾವೇರಿ ತಾಲ್ಲೂಕಿನ ಕೆರಿಮತ್ತಿಹಳ್ಳಿಯ ತಾತ್ಕಾಲಿಕ ಪೊಲೀಸ್‌ ತರಬೇತಿ ಶಾಲೆ ಮೈದಾನದಲ್ಲಿ ನಿರ್ಗಮನ ಪಥ ಸಂಚಲನ ನಡೆಸಿದ ‘ಕಾರಾಗೃಹ ವೀಕ್ಷಕ’ ಪ್ರಶಿಕ್ಷಣಾರ್ಥಿಗಳು –ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ
ಹಾವೇರಿ ತಾಲ್ಲೂಕಿನ ಕೆರಿಮತ್ತಿಹಳ್ಳಿಯ ತಾತ್ಕಾಲಿಕ ಪೊಲೀಸ್‌ ತರಬೇತಿ ಶಾಲೆ ಮೈದಾನದಲ್ಲಿ ನಿರ್ಗಮನ ಪಥ ಸಂಚಲನ ನಡೆಸಿದ ‘ಕಾರಾಗೃಹ ವೀಕ್ಷಕ’ ಪ್ರಶಿಕ್ಷಣಾರ್ಥಿಗಳು –ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ   

ಹಾವೇರಿ: ಎಸ್ಸೆಸ್ಸೆಲ್ಸಿ ಅರ್ಹತೆಯ ಹುದ್ದೆಯಾದ ‘ಕಾರಾಗೃಹ ವೀಕ್ಷಕ’ ನೌಕರಿಗೆ ಎಂ.ಟೆಕ್‌ ಪದವೀಧರ ಸೇರಿದಂತೆ ಸ್ನಾತಕೋತ್ತರ ಪದವೀಧರರು ಆಯ್ಕೆಯಾಗಿದ್ದಾರೆ.

ತಾಲ್ಲೂಕಿನ ಕೆರಿಮತ್ತಿಹಳ್ಳಿಯಲ್ಲಿರುವ ‘ತಾತ್ಕಾಲಿಕ ಪೊಲೀಸ್‌ ತರಬೇತಿ ಶಾಲೆ’ಯಲ್ಲಿ 9 ತಿಂಗಳು ಬುನಾದಿ ತರಬೇತಿ ಪೂರ್ಣಗೊಳಿಸಿದ 61 ‘ಕಾರಾಗೃಹ ವೀಕ್ಷಕ’ ಪ್ರಶಿಕ್ಷಣಾರ್ಥಿಗಳಲ್ಲಿ 40ಕ್ಕೂ ಅಧಿಕ ಮಂದಿ, ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದವರಿದ್ದಾರೆ. ಅಷ್ಟೇ ಅಲ್ಲ, ಐಎಎಸ್‌ ಮತ್ತು ಕೆಎಎಸ್‌ ಪರೀಕ್ಷೆಗೆ ತರಬೇತಿ ಪಡೆದವರೂ ಇದ್ದಾರೆ.

ಎಂಎಸ್ಸಿ–1, ಎಂಕಾಂ–1, ಎಂಎ–2, ಬಿಇ–15, ಬಿಸಿಎ–1,ಬಿಕಾಂ–4, ಬಿಎಸ್ಸಿ–7, ಬಿಎ–9, ಬಿಎಸ್ಸಿ ಮತ್ತು ಬಿಇಡಿ–1, ಡಿಇಡಿ–1 ಹಾಗೂ ಒಬ್ಬ ಡಿಪ್ಲೊಮಾ ಪದವೀಧರ ಇದ್ದಾರೆ. ಉಳಿದವರಲ್ಲಿ 13 ಮಂದಿ ಪಿಯು ಮುಗಿಸಿದ್ದು, 4 ಮಂದಿ ಮಾತ್ರ ಎಸ್ಸೆಸ್ಸೆಲ್ಸಿ ಓದಿದ್ದಾರೆ. ಇವರೆಲ್ಲರೂ ರಾಜ್ಯದ 18 ಜಿಲ್ಲೆಗಳಿಗೆ ಸೇರಿದವರಾಗಿದ್ದು, ವಿವಿಧ ಕಾರಾಗೃಹಗಳಲ್ಲಿ ಕರ್ತವ್ಯ ನಿರ್ವಹಿಸಲು ಸಜ್ಜಾಗಿದ್ದಾರೆ.

ADVERTISEMENT

ಖಾಸಗಿ ಕಂಪನಿಗಳಿಗೆ ಗುಡ್‌ಬೈ: ಬಿಇ ಪದವಿ ಪಡೆದಿರುವ ಬಹುತೇಕರು ಪ್ರತಿಷ್ಠಿತ ಖಾಸಗಿ ಕಂಪನಿಗಳಲ್ಲಿ ಒಂದರಿಂದ ಎರಡು ವರ್ಷಗಳವರೆಗೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ದೀರ್ಘಾವಧಿ ಕೆಲಸ,ಕಡಿಮೆ ವೇತನ, ಮಾನಸಿಕ ಒತ್ತಡ, ಹಿರಿಯ ಸಹೋದ್ಯೋಗಿಗಳ ಕಿರುಕುಳ, ಕೆಲಸದ ಅಭದ್ರತೆ ಮುಂತಾದ ಕಾರಣಗಳಿಂದ ಹಾರ್ಡ್‌ವೇರ್‌ ಮತ್ತು ಸಾಫ್ಟ್‌ವೇರ್‌ ಕಂಪನಿಗಳಿಗೆ ಗುಡ್‌ಬೈ ಹೇಳಿ, ಸರ್ಕಾರಿ ಕೆಲಸಕ್ಕೆ ಸೇರಿದ್ದೇವೆ ಎಂಬುದು ಬಿಇ ಪದವೀಧರರ ಅನಿಸಿಕೆ.

‘2018ರಲ್ಲಿ ಎಂ.ಎಸ್ಸಿ ಪೂರ್ಣಗೊಳಿಸಿ, ಬೆಂಗಳೂರಿನ ಫಾರ್ಮಾ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದೆ. 12 ಗಂಟೆ ದುಡಿಮೆಗೆ ಸಿಗುತ್ತಿದ್ದ ಸಂಬಳ ಕೇವಲ ₹14 ಸಾವಿರ. ಇದರಿಂದ ಬೇಸತ್ತು ಕೆಲಸ ತೊರೆದೆ. ‘ಕಾರಾಗೃಹ ವೀಕ್ಷಕ’ ನೌಕರಿಯಲ್ಲಿ 6 ತಾಸು ದುಡಿಮೆಗೆ ₹30 ಸಾವಿರ ಸಂಬಳ ಕೊಡುತ್ತಾರೆ’ ಎನ್ನುತ್ತಾರೆ ಬೆಂಗಳೂರಿನ ಜನಾರ್ದನ.

ಐಎಎಸ್‌ ಕನಸು: ‘2017ರಲ್ಲಿ ಎಂ.ಟೆಕ್‌ ಪದವಿ ಪಡೆದೆ. ನಂತರ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ ಒಂದು ವರ್ಷ ಕೆಲಸ ಮಾಡಿದೆ. ನಮ್ಮ ಪರಿಶ್ರಮ ಮತ್ತು ಕೌಶಲಕ್ಕೆ ತಕ್ಕ ಗೌರವ ಸಿಗಲಿಲ್ಲ. ಹೀಗಾಗಿ ನೌಕರಿ ತೊರೆದು, ಐಎಎಸ್‌ ಮಾಡಬೇಕು ಎಂದು ಅಧ್ಯಯನದಲ್ಲಿ ನಿರತನಾದೆ. ಈ ಮಧ್ಯೆಕೆಪಿಟಿಸಿಎಲ್‌, ಕೆಪಿಎಸ್‌ಸಿ, ಪಿಎಸ್‌ಐ ಪರೀಕ್ಷೆಗಳನ್ನೂ ಬರೆದಿದ್ದೆ. ‘ಕಾರಾಗೃಹ ವೀಕ್ಷಕ’ ಹುದ್ದೆ ಒಲಿಯಿತು. ಕೆಲಸ ಸಿಕ್ಕ ಖುಷಿ ಇದೆ. ಐಎಎಸ್‌ ಕನಸು ಕೂಡ ಜೀವಂತವಾಗಿದೆ’ ಎನ್ನುತ್ತಾರೆ ಕಲಬುರ್ಗಿಯ ಸಂತೋಷ್‌ ಮೋದಿ.

‘ಹೆಣ್ಣು ಕೊಡುವವರು ಹುಡುಗ ಹೇಗಿದ್ದಾನೆ, ಅವನ ನಡವಳಿಕೆ ಹೇಗಿದೆ, ಏನು ಓದಿದ್ದಾನೆ ಎಂಬುದಕ್ಕಿಂತ ಸರ್ಕಾರಿ ನೌಕರಿ ಇದೆಯಾ? ಎಂದು ಕೇಳುತ್ತಾರೆ. ಹೀಗಾಗಿ ನಮಗಲ್ಲದಿದ್ದರೂ ‘ಮದುವೆಗಾಗಿ ಸರ್ಕಾರಿ ನೌಕರಿ’ ಹಿಡಿಯಬೇಕಿದೆ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಬೆಳಗಾವಿಯ ಬಿ.ಇ ಪದವೀಧರ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.