ADVERTISEMENT

ಚಂದ್ರಯಾನಕ್ಕಿಂತ ‘ಮೋದಿ ಯಾನ’ವೇ ದುಬಾರಿ: ‘ಮುಖ್ಯಮಂತ್ರಿ’ ಚಂದ್ರು ಲೇವಡಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 11:28 IST
Last Updated 17 ಏಪ್ರಿಲ್ 2019, 11:28 IST
ಹಾವೇರಿಯಲ್ಲಿ ಬುಧವಾರ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್.ಪಾಟೀಲ ಪರವಾಗಿ ಸಿನಿಮಾ ನಟ ಮುಖ್ಯಮಂತ್ರಿ ಚಂದ್ರು ಪ್ರಚಾರ ನಡೆಸಿದರು
ಹಾವೇರಿಯಲ್ಲಿ ಬುಧವಾರ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್.ಪಾಟೀಲ ಪರವಾಗಿ ಸಿನಿಮಾ ನಟ ಮುಖ್ಯಮಂತ್ರಿ ಚಂದ್ರು ಪ್ರಚಾರ ನಡೆಸಿದರು   

ಹಾವೇರಿ:ಕಾಂಗ್ರೆಸ್ ಸರ್ಕಾರವು ₹450 ಕೋಟಿ ವೆಚ್ಚದಲ್ಲಿ ವಿಜ್ಞಾನಿಗಳನ್ನು ಚಂದ್ರಯಾನಕ್ಕೆ ಕಳುಹಿಸಿದ್ದರೆ, ಪ್ರಧಾನಿ ನರೇಂದ್ರ ಮೋದಿ ₹2 ಸಾವಿರ ಕೋಟಿ ಖರ್ಚು ಮಾಡಿ ‘ವಿದೇಶ ಯಾನ’ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ‘ಮುಖ್ಯಮಂತ್ರಿ’ ಚಂದ್ರು ಹೇಳಿದರು.

ಮೋದಿ ಸಂಸತ್ತು ಅಧಿವೇಶನದಲ್ಲಿ ಪಾಲ್ಗೊಂಡದ್ದು 19 ದಿನಗಳು ಮಾತ್ರ. ಸಂಸತ್ತಿಗೂ ಗೌರವವೂ ನೀಡಲಿಲ್ಲ. ಐದು ವರ್ಷಗಳಲ್ಲಿ ನೇರವಾಗಿ ಒಂದೇ ಒಂದು ಪತ್ರಿಕಾಗೋಷ್ಠಿಯನ್ನೂ ಎದುರಿಸಿಲ್ಲ. ಬರೀ ಮಾತು, ಮಾತು, ಮಾತು ಎಂದು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಮುಂದೆ, ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಷಿ ಸ್ಥಿತಿ ಮೋದಿಗೂ ಬರಬಹುದು. ಇಲ್ಲವೇ, ಮೋದಿಯೇ ಆರ್‌ಎಸ್‌ಎಸ್‌ ಮುಖಂಡರನ್ನು ಅಡ್ವಾಣಿಯಂತೆ ಮೂಲೆಗೆ ಇಡಬಹುದು. ಒಟ್ಟಾರೆ, ಸರ್ವಾಧಿಕಾರ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ, ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ದೇಶ ಉಳಿಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದರು.

ADVERTISEMENT

ಕಾಂಗ್ರೆಸ್ 60 ವರ್ಷಗಳಲ್ಲಿ ಏನೂ ಮಾಡಿಲ್ಲ ಎನ್ನುತ್ತಾರೆ. ಏನೂ ಮಾಡಿದ್ದರೆ, ಈ ದೇಶ ಇರ್ತಿತ್ತಾ? ಮೋದಿ ಪ್ರಧಾನಿ ಆಗಲು ಸಾಧ್ಯವಿತ್ತಾ? ಎಂದು ಪ್ರಶ್ನಿಸಿದ ಅವರು,ರಾಮನ ಹೆಸರಲ್ಲಿ ಜನರಿಗೆ ನಾಮ ಹಾಕುವುದೇ ಬಿಜೆಪಿ ಕೆಲಸವಾಗಿದೆ. ಕಳೆದ ಐದು ವರ್ಷಗಳಲ್ಲಿ ರಾಮಮಂದಿರ ಏಕೆ ಕಟ್ಟಲಿಲ್ಲ? ಎಂದು ಪ್ರಶ್ನಿಸಿದರು.

ಸಾಹಿತಿ ಪ್ರೊ. ಜಿ.ಎಸ್. ಸಿದ್ದರಾಮಯ್ಯ ಮಾತನಾಡಿ, ‘ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಕೇಂದ್ರ ಸಚಿವರೊಬ್ಬರು ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿದ್ದಾರೆ’ ಎಂದರು.

ಬ್ಯಾಂಕಿಂಗ್ ಹಾಗೂ ಪ್ರಮುಖ ಪರೀಕ್ಷೆಗಳನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಮಾತ್ರ ನಡೆಸುವ ಮೂಲಕ, ಕನ್ನಡಿಗರಿಗೆ ಬ್ಯಾಂಕ್ ಕೆಲಸವೂ ಸಿಗಬಾರದು, ವ್ಯವಹಾರವೂ ನಡೆಸಬಾರದು ಎಂಬ ಹುನ್ನಾರ ಮಾಡಿದ್ದಾರೆ. ಈ ಬಗ್ಗೆ ಯುವಜನತೆ ಎಚ್ಚೆತ್ತುಕೊಳ್ಳಬೇಕು ಎಂದರು. ಮುಖಂಡರಾದ ರುದ್ರಪ್ಪ, ಸಂಜೀವಕುಮಾರ್‌ ನೀರಲಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.