ADVERTISEMENT

ಕೇಸ್‌ ಇರೋದ್ರಿಂದ ಮುನಿರತ್ನಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ: ಎಂ.ಟಿ.ಬಿ. ನಾಗರಾಜ್‌

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 10:04 IST
Last Updated 15 ಜನವರಿ 2021, 10:04 IST
ಸಚಿವ ಎಂ.ಟಿ.ಬಿ. ನಾಗರಾಜ್‌
ಸಚಿವ ಎಂ.ಟಿ.ಬಿ. ನಾಗರಾಜ್‌    

ಹಾವೇರಿ: ‘ಶಾಸಕ‌ ಮುನಿರತ್ನ ಅವರಿಗೆ ಸಚಿವ ಸ್ಥಾನ ಕೊಡದಿದ್ದಕ್ಕೆ ಬೇರೆ ಬೇರೆ ಕಾರಣಗಳಿವೆ. ನ್ಯಾಯಾಲಯದಲ್ಲಿ ಅವರ ವಿರುದ್ಧ ಪ್ರಕರಣಗಳಿವೆ. ಹೀಗಾಗಿ ಅವರಿಗೆ ಮಂತ್ರಿ ಸ್ಥಾನ ಕೊಟ್ಟಿಲ್ಲ. ಎಲ್ಲವೂ ಬಗೆಹರಿದ ಮೇಲೆ ಮುಂದಿನ ದಿನಗಳಲ್ಲಿ ಅವರು ಮಂತ್ರಿ ಆಗುತ್ತಾರೆ’ ಎಂದು ಸಚಿವ ಎಂ.ಟಿ.ಬಿ. ನಾಗರಾಜ್‌ ಹೇಳಿದರು.

ಕಾಗಿನೆಲೆಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಮಂತ್ರಿ ಸ್ಥಾನ ಪಡೆಯಲು ಯಾರೂ ಬ್ಲಾಕ್‌ಮೇಲ್‌ ಮಾಡಿಲ್ಲ. ವಿಶ್ವನಾಥ್‌ ಅವರು ಮುಖ್ಯಮಂತ್ರಿಗೆ ಸಂಬಂಧಪಟ್ಟ ಸಿ.ಡಿ. ಇದೆ ಅಂತಿದ್ದಾರೆ. ಆ ಬಗ್ಗೆ ನನಗೇನೂ ಗೊತ್ತಿಲ್ಲ. ನ್ಯಾಯಾಲಯದಿಂದ ತೀರ್ಪು ಬಂದ ಹಿನ್ನೆಲೆಯಲ್ಲಿ ವಿಶ್ವನಾಥ್‌ ಅವರು ವಿಧಾನಸಭೆಗೆ ‘ನಾಮಿನಿ’ ಆಗಿಲ್ಲ. ಮುಂದಿನ ದಿನಗಳಲ್ಲಿ ಅವರಿಗೂ ಅವಕಾಶ ಸಿಗುತ್ತೆ ಎಂದರು.

ಸಚಿವ ಸಿ.ಪಿ.ಯೋಗೇಶ್ವರ 420 ಎಂಬ ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಯಾವ ಪ್ರಕರಣಗಳಿವೆಯೋ ಅವು ನ್ಯಾಯಾಲಯದಲ್ಲಿ ಇತ್ಯರ್ಥ ಆಗಬೇಕು. ಮುಖ್ಯಮಂತ್ರಿ ಮತ್ತು ವರಿಷ್ಠರು ತಿರ್ಮಾನ ಮಾಡಿಯೇ ಸಚಿವ ಸ್ಥಾನ ಕೊಟ್ಟಿದ್ದಾರೆ’ ಎಂದು ಸಮರ್ಥಿಸಿಕೊಂಡರು.

ADVERTISEMENT

ಕುರುಬ ಸಮುದಾಯದ ಎಸ್ಟಿ ಮೀಸಲಾತಿ ಹೋರಾಟಕ್ಕೆ ಸಿದ್ದರಾಮಯ್ಯ ಏಕೆ ಬರುತ್ತಿಲ್ಲ ಎಂಬ ಪ್ರಶ್ನೆಗೆ, ನಮ್ಮ ಸಮಾಜದ ಸಚಿವರು, ಸ್ವಾಮೀಜಿಗಳು ಆಹ್ವಾನ ಕೊಟ್ಟಿದ್ದಾರೆ. ಆದರೂ ಇಂದು ಅವರು ಬಂದಿಲ್ಲ. ಏಕೆ ಬಂದಿಲ್ಲ ಎಂದು ಸಿದ್ದರಾಮಯ್ಯ ಅವರನ್ನೇ ಕೇಳಿ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.