ADVERTISEMENT

ರಾಣೆಬೆನ್ನೂರು | ಅಣಬೆ ಬೇಸಾಯದಿಂದ ಉತ್ತಮ ಆದಾಯ

ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಣಬೆ ಬೇಸಾಯದ ತರಬೇತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 2:19 IST
Last Updated 30 ಜುಲೈ 2025, 2:19 IST
ರಾಣೆಬೆನ್ನೂರು ತಾಲ್ಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಿದ್ದ ಅಣಬೆ ಬೇಸಾಯದ ತರಬೇತಿ ಕಾರ್ಯಕ್ರಮವನ್ನು ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಎ.ಎಚ್‌. ಬೀರಾದಾರ ಉದ್ಘಾಟಿಸಿದರು
ರಾಣೆಬೆನ್ನೂರು ತಾಲ್ಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಿದ್ದ ಅಣಬೆ ಬೇಸಾಯದ ತರಬೇತಿ ಕಾರ್ಯಕ್ರಮವನ್ನು ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಎ.ಎಚ್‌. ಬೀರಾದಾರ ಉದ್ಘಾಟಿಸಿದರು   

ರಾಣೆಬೆನ್ನೂರು: ‘ಅಣಬೆ ಬೇಸಾಯವು, ರೈತರಿಗೆ ಹೆಚ್ಚಿನ ಆದಾಯ ತರಬಲ್ಲ ಉಪಕಸುಬಾಗಿದೆ. ರೈತರು ಅಣಬೆ ಬೇಸಾಯದಂತಹ ಉಪಕಸುಬುಗಳನ್ನು ಕೈಗೊಳ್ಳಬೇಕು. ಕೇವಲ ಬೆಳೆಗಳನ್ನು ನಂಬಿಕೊಂಡರೆ ವರ್ಷಪೂರ್ತಿ ಆದಾಯ ಪಡೆಯಲು ಸಾಧ್ಯವಿಲ್ಲ’ ಎಂದು  ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಎ.ಎಚ್‌. ಬೀರಾದಾರ ಹೇಳಿದರು.

ತಾಲ್ಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಏರ್ಪಡಿಸಿದ್ದ ಅಣಬೆ ಬೇಸಾಯದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಕೃಷಿಯ ತ್ಯಾಜ್ಯವನ್ನು ಉಪಯೋಗಿಸಿಕೊಳ್ಳಲು ಅಣಬೆ ಬೇಸಾಯವನ್ನು ಮಾಡಬಹುದು’ ಎಂದರು.

‘ಗೃಹಿಣಿಯರು ಈ ಬೆಳೆಯನ್ನು ಕಡಿಮೆ ಜಾಗದಲ್ಲಿ ಬೆಳೆದು ಉತ್ತಮ ಆದಾಯ ಗಳಿಸಬಹುದು. ಅತೀ ಕಡಿಮೆ ವೆಚ್ಚದಲ್ಲಿ 20 ರಿಂದ 25 ದಿನಗಳಲ್ಲಿ ಆದಾಯ ಪಡೆಯುವಂತಹ ಸುಲಭದ ಕೆಲಸ ಈ ಅಣಬೆ ಬೇಸಾಯವಾಗಿರುತ್ತದೆ’ ಎಂದರು.

ADVERTISEMENT

ಸೂಕ್ಷ್ಮ ಜೀವಶಾಸ್ತ್ರ ಸಹಾಯಕ ಪ್ರಾಧ್ಯಾಪಕ ನೂರ್‌ನವಾಜ್ ಎ. ಎಸ್ ಅವರು ಮಾತನಾಡಿ, ‘ಬಿಳಿ ಗೋಡು (ಆಗ್ಯಾರಿಕಸ್) ಹಾಲ ಅಣಬೆ, ಭತ್ತದ ಹುಲ್ಲಿನ ಅಣಬೆ ಮತ್ತು ಚಿಪ್ಪಣಬೆ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಚಿಪ್ಪಣಬೆಯನ್ನು ಮನೆಯಲ್ಲಿಯೇ ಬೆಳೆಯಬಹುದು. ಬೀಜ ಬಿತ್ತನೆ ಮಾಡಿದ 23ರಿಂದ 25 ದಿನಗಳಲ್ಲಿ ಮೊದಲ ಕೊಯ್ಲು ಮಾಡಬಹುದು. ಈ ಅಣಬೆಗೆ ಭತ್ತದ ಹುಲ್ಲು ಮತ್ತು ಗೋಧಿಹುಲ್ಲು ಸೂಕ್ತ’ ಎಂದರು.

ತೋಟಗಾರಿಕೆ ಪ್ರಾಧ್ಯಾಪಕ ಸಂತೋಷ್ ಎಚ್.ಎಂ ಮಾತನಾಡಿ, ‘ಅಣಬೆ ಬೆಳೆ ಶುದ್ಧ ಸಸ್ಯಹಾರಿಯಾಗಿದ್ದು, ತಿನ್ನುವ ಅಣಬೆಗಳು ಇತರೆ ತರಕಾರಿಗಳಿಗೆ ಹೋಲಿಸಿದರೆ ಹೆಚ್ಚು ಪೌಷ್ಠಿಕಾಂಶಗಳನ್ನು ಹೊಂದಿರುತ್ತವೆ. ಅಣಬೆಗಳಲ್ಲಿ ಪ್ರೋಟೀನ್, ಜೀವಸತ್ವಗಳು, ಹೆಚ್ಚು ಸಾರಜನಕ, ಅನ್ನಾಂಗಗಳು ಮತ್ತು ಖನಿಜಗಳು ಹೇರಳವಾಗಿವೆ. ತಿನ್ನುವ ಅಣಬೆಗಳಲ್ಲಿ ಸಕ್ಕರೆ ಅಂಶ ಮತ್ತು ಕೊಬ್ಬಿನ ಅಂಶ ಕಡಿಮೆ ಇರುವುದರಿಂದ ಮದುಮೇಹ ಮತ್ತು ಹೃದಯ ಸಂಬಂಧ ರೋಗಿಗಳಿಗೆ ಒಂದು ಉತ್ತಮ ಆಹಾರವಾಗಿದೆ’ ಎಂದರು.

‌ಅಕ್ಷತಾ ರಾಮಣ್ಣನವರ, ಕೃಷಿ ವಿಜ್ಞಾನ ಕೇಂದ್ರ ಸಿಬ್ಬಂದಿ ಮತ್ತು 4 ಕ್ಕೂ ಹೆಚ್ಚು ಜನ ರೈತರು ಹಾಗೂ ರೈತ ಮಹಿಳೆಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.