ತಿಳವಳ್ಳಿ: ‘ಜನಪದ ಕಲೆ, ರಂಗಭೂಮಿ, ಜಾನಪದ ಗೀತೆಗಳು, ಕಲಾ ನೃತ್ಯಗಳು, ಸೋಬಾನೆ ಪದಗಳು, ಹರಿಕಥೆಗಳು, ಸೇರಿದಂತೆ ಮುಂತಾದ ಕಲೆಗಳನ್ನು ಇಂದಿನ ಯುವಸಮೂಹ ಕಲಿಯುವ ಮೂಲಕ ಜಾನಪದ ಸೊಗಡನ್ನು ಉಳಿಸಲು ಮುಂದಾಗಬೇಕು’ ಎಂದು ಕಿನ್ನರಿ ಜೋಗಿ ಜಾನಪದ ಕಲಾವಿದ ನಾಗರಾಜ ಜೋಗಿ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಘೋಷಣೆಯೊಂದಿಗೆ ಜಾನಪದ ಉತ್ಸವ ಕಾರ್ಯಕ್ರಮವನ್ನು ರಾಗಿ, ಭತ್ತ ಹಾಗೂ ಆಹಾರ ಧಾನ್ಯಗಳ ರಾಶಿಗೆ ಪೂಜೆ ಸಲ್ಲಿಸುವ ಮೂಲಕ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
‘ಯುವ ಪೀಳಿಗೆ ಪಾಶ್ಚಿಮಾತ್ಯ ಮೋಹಕ್ಕೆ ಒಳಗಾಗದೆ ದೇಶಿ ಸಂಸ್ಕೃತಿ ಹಾಗೂ ಜಾನಪದ ಸೊಗಡನ್ನು ಅರಿತು ಸಂಸ್ಕೃತಿಯ ಉಳಿವಿಗೆ ಮುಂದಾಗಬೇಕಿದೆ. ಜಾನಪದ ಸಾಹಿತ್ಯ, ಕಲೆಯ ಅರಿವು ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಐಕ್ಯೂಎಸಿ ಸಂಚಾಲಕ ಸಂತೋಷ.ಸಿ ಮಾತನಾಡಿ, ‘ಜಾನಪದ ಸಂಸ್ಕೃತಿ ಅಳಿದರೆ ನಮ್ಮತನವನ್ನು ನಾವು ಕಳೆದುಕೊಂಡಂತೆ, ಜಾನಪದ ಸೊಗಡಿನಲ್ಲೇ ಭಾರತೀಯ ಮೂಲ, ಪರಂಪರೆಯ ಸತ್ಯ ಅಡಗಿದೆ. ಹಾಗಾಗಿ ಜಾನಪದ ಸಂಸ್ಕೃತಿ ಉಳಿಸಿ ಪೋಷಿಸಬೇಕು’ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಂದ ಹಾಗೂ ಕಿನ್ನರಿ ಜೋಗಿ ಜಾನಪದ ಕಲಾವಿದರು ಜಾನಪದ ಗೀತೆ, ತತ್ವಪದ, ಗಿಗೀ ಪದಗಳನ್ನು ಹಾಡಿ ರಂಜಿಸಿದರು. ವಿದ್ಯಾರ್ಥಿಗಳು ಜಾನಪದ ಗೀತೆಗಳಿಗೆ ನೃತ್ಯ ಪ್ರದರ್ಶಿಸಿದರು.
ಸಂಸ್ಕೃತಿ ವಿಭಾಗದ ಸಂಚಾಲಕಿ ಶಾರದಾ, ಮಹೇಶ ಅಕ್ಕಿವಳ್ಳಿ, ಶಾಂತಪ್ಪ ಲಮಾಣಿ, ಸಿ.ಶಾರದಮ್ಮ, ರಾಜಶೇಖರ್, ಪ್ರಿಯಾಂಕ, ರಮೇಶ್.ಆರ್, ಕಲ್ಪನ.ಎಸ್.ಪಿ, ಮಹೇಶ್ ಅಕ್ಕಿವಳ್ಳಿ, ರವಿ.ಎಂ, ಪ್ರಶಾಂತ ಬಾರಾಟಕ್ಕೆ, ಹನುಮಂತಪ್ಪ ಆನ್ವೇರಿ, ಭಾರ್ಗವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.