
ಹಾವೇರಿ: ನಗರದಲ್ಲಿ ಡಿ.20, 21ರಂದು ಮುಸ್ಲಿಂ ಸಮುದಾಯದವರಿಂದ ರಾಷ್ಟ್ರಮಟ್ಟದ ‘ಸುನ್ನಿ ತರಬೇತಿ ಇಸ್ತಿಮಾ’ ಧರ್ಮಸಭೆ ಹಾಗೂ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಇದಕ್ಕಾಗಿ ಸಿದ್ಧತೆ ನಡೆಯುತ್ತಿದೆ.
ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಖುಲ್ಲಾ ಜಾಗದಲ್ಲಿ (ಹುಬ್ಬಳ್ಳಿ ಮಾರ್ಗ) ಭವ್ಯ ವೇದಿಕೆ ನಿರ್ಮಿಸಲಾಗುತ್ತಿದೆ. ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ಮುಸ್ಲಿಂ ಸಮುದಾಯದ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಅವರೆಲ್ಲರ ಅನುಕೂಲಕ್ಕಾಗಿ ತಾತ್ಕಾಲಿಕವಾಗಿ ಮೂಲ ಸೌಕರ್ಯ ಕಲ್ಪಿಸುವ ಕೆಲಸವೂ ನಡೆಯುತ್ತಿದೆ.
1999ರಲ್ಲಿ ಹುಬ್ಬಳ್ಳಿಯಲ್ಲಿ ‘ಸುನ್ನಿ ತರಬೇತಿ ಇಸ್ತಿಮಾ’ ಕಾರ್ಯಕ್ರಮ ನಡೆದಿತ್ತು. ಇದಾದ ನಂತರ, ರಾಜ್ಯದ ಯಾವುದೇ ಭಾಗದಲ್ಲೂ ಕಾರ್ಯಕ್ರಮ ನಡೆದಿರಲಿಲ್ಲ. 25 ವರ್ಷಗಳ ಬಳಿಕ ಇದೀಗ ಹಾವೇರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಸಮುದಾಯದ ಮುಖಂಡರು ತಯಾರಿ ನಡೆಸುತ್ತಿದ್ದಾರೆ.
1500 ವರ್ಷಗಳ ಇತಿಹಾಸವಿರುವ ‘ಜಶ್ನ್ ಎ ಈದ್ ಮಿಲಾದ್ ಉನ್ ನಬಿ’ ಅದ್ಧೂರಿ ಆಚರಣೆ ಪ್ರಯುಕ್ತವೂ ಈ ಧರ್ಮಸಭೆ ಹಮ್ಮಿಕೊಳ್ಳಲಾಗಿದೆ. ‘ಜಮಾತ್ ರಜಾ ಎ ಮುಸ್ತಫಾ’ ಸೊಸೈಟಿಯ ಕರ್ನಾಟಕ ಶಾಖೆಗಳ ಪದಾಧಿಕಾರಿಗಳು ಕಾರ್ಯಕ್ರಮ ಸಂಘಟನೆಯ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಡಿ. 20ರಂದು ಬೆಳಿಗ್ಗೆ 11ರಿಂದ ಸಂಜೆ 5 ಗಂಟೆಯವರೆಗೆ ಸಮುದಾಯದವರ ಹೆಣ್ಣು ಮಕ್ಕಳಿಗಾಗಿ ಹಾಗೂ ಡಿ. 21ರಂದು ಬೆಳಿಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಮುದಾಯದ ಪುರುಷರಿಗಾಗಿ ಪ್ರತ್ಯೇಕವಾಗಿ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಧರ್ಮಗುರುಗಳ ಸಾನ್ನಿಧ್ಯ: ಎರಡು ದಿನಗಳವರೆಗೆ ನಡೆಯುವ ಧರ್ಮಸಭೆ ಹಾಗೂ ಪ್ರವಚನ ಕಾರ್ಯಕ್ರಮದಲ್ಲಿ ಮುಸ್ಲಿಂ ಧರ್ಮಗುರುಗಳು ಸಾನ್ನಿಧ್ಯ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಜನರಿಗೆ ಪ್ರವಚನ ನೀಡಲಿದ್ದಾರೆ.
ಧರ್ಮಗುರುಗಳಾದ ಮುಫ್ತಿ ಮುಹಮ್ಮದ್ ಅಸ್ಜದ್ ರಜಾ, ಮುಫ್ತಿ ಜಿಯಾ ಉಲ್ ಮುಸ್ತಫಾ ಕಾದ್ರಿ, ಮುಹಮ್ಮದ್ ಹುಸ್ಸಾಮ್ ಅಹ್ಮದ್ ರಜಾ, ಮುಫ್ತಿ ಆಶಿಕ್ ಹುಸೈನ್ ಕಶ್ಮೀರಿ, ಮುಫ್ತಿ ಅಬು ಯೂಸೂಫ್ ಮುಹಮ್ಮದ್ ಕಾದ್ರಿ, ಮುಫ್ತಿ ಮುಹಮ್ಮದ್ ಶಾಹಿದ್ ರಜಾ ಸೇರಿದಂತೆ ಹಲವು ಧರ್ಮಗುರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರ ರಾಜ್ಯದಿಂದ ಸುಮಾರು 15,000 ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎರಡೂ ದಿನವೂ ಭದ್ರತೆ ಕೈಗೊಳ್ಳಲು ಪೊಲೀಸರು ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಪಾರ್ಕಿಂಗ್ ವ್ಯವಸ್ಥೆ: ಸ್ವಯಂಸೇವಕರ ಕೆಲಸ ಧರ್ಮಸಭೆ ಹಾಗೂ ಕಾರ್ಯಕ್ರಮಕ್ಕೆ ಬರುವ ಜನರಿಗೆ ಸೂಕ್ತ ವ್ಯವಸ್ಥೆ ಮಾಡಲು ಸ್ವಯಂಸೇವಕರನ್ನು ನೇಮಿಸಲಾಗಿದೆ. ಜೊತೆಗೆ ಸ್ಥಳಕ್ಕೆ ಬರುವ ಕಾರು ಹಾಗೂ ಬೈಕ್‌ಗಳ ನಿಲುಗಡೆಗೂ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ‘ಸುಮಾರು 15000 ಜನರು ಸೇರಬಹುದೆಂದು ಆಯೋಜಕರು ತಿಳಿಸಿದ್ದಾರೆ. ಅದಕ್ಕೆ ತಕ್ಕಂತೆ ಅವರೇ ಐದಾರು ಎಕರೆ ಜಾಗದಲ್ಲಿ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಪೊಲೀಸ್ ಇಲಾಖೆಯಿಂದಲೂ ಸಿಬ್ಬಂದಿಯನ್ನು ಕೆಲಸಕ್ಕೆ ನಿಯೋಜಿಸಲಾವುದು’ ಎಂದು ಜಿಲ್ಲಾ ಎಸ್‌ಪಿ ಯಶೋಧಾ ವಂಟಗೋಡಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‘ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಹೆಚ್ಚಿರುತ್ತದೆ. ಈ ಹೆದ್ದಾರಿಯಲ್ಲಿ ಹಾಗೂ ಸರ್ವೀಸ್ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು ಪೊಲೀಸರನ್ನು ನಿಯೋಜಿಸಲಾಗುವುದು. ಭದ್ರತೆಗೂ ಹೆಚ್ಚಿನ ಒತ್ತು ನೀಡಲಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.