ADVERTISEMENT

ಅಸ್ಪೃಶ್ಯತೆ ನಿವಾರಣೆಗೆ ‘ವಿನಯ ಸಾಮರಸ್ಯ’ ಜಾರಿ: ಕೋಟ ಶ್ರೀನಿವಾಸ ಪೂಜಾರಿ

ಬಾಲಕಿಯರ ವಿದ್ಯಾರ್ಥಿ ನಿಲಯ ಉದ್ಘಾಟನೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಮೇ 2022, 15:10 IST
Last Updated 6 ಮೇ 2022, 15:10 IST
ಹಿರೇಕೆರೂರು ಪಟ್ಟಣದಲ್ಲಿ ಶುಕ್ರವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡದ ಉದ್ಘಾಟನೆ ನೆರವೇರಿತು. ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಬಿ.ಸಿ.ಪಾಟೀಲ್‌, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಸಿದ್ದರಾಜ ಕಲಕೋಟಿ ಇದ್ದಾರೆ 
ಹಿರೇಕೆರೂರು ಪಟ್ಟಣದಲ್ಲಿ ಶುಕ್ರವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡದ ಉದ್ಘಾಟನೆ ನೆರವೇರಿತು. ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಬಿ.ಸಿ.ಪಾಟೀಲ್‌, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಸಿದ್ದರಾಜ ಕಲಕೋಟಿ ಇದ್ದಾರೆ    

ಹಿರೇಕೆರೂರು (ಹಂಸಭಾವಿ): ‘ಸಮಾಜದಲ್ಲಿ ಅಸ್ಪೃಶ್ಯತೆ ನಿವಾರಣೆಯಾಗಲೇಬೇಕಾದ ಅನಿವಾರ್ಯತೆ ಇದೆ. ಸಮಾಜದಲ್ಲಿ ಸಾಮರಸ್ಯ ಮೂಡಿಸಬೇಕು ಎಂಬ ದಿಸೆಯಲ್ಲಿ ರಾಜ್ಯದ 6,020 ಗ್ರಾಮ ಪಂಚಾಯಿತಿಗಳಲ್ಲಿ ‘ವಿನಯ ಸಾಮರಸ್ಯ’ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ’ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಹಿರೇಕೆರೂರು ಪಟ್ಟಣದಲ್ಲಿ ಶುಕ್ರವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಕೊಪ್ಪಳ ಜಿಲ್ಲೆಯಲ್ಲಿ ಅಸ್ಪೃಶ್ಯತೆಗೆ ಒಳಗಾದ ಎರಡು ವರ್ಷದ ಮಗುವನ್ನು ದತ್ತು ಪಡೆದಿರುವ ಸರ್ಕಾರ ಈ ಮಗುವಿನ ಹೆಸರಿನಲ್ಲಿ ‘ವಿನಯ ಸಾಮರಸ್ಯ’ ಎಂಬ ಹೆಸರಿನ ಯೋಜನೆಯನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ ಎಂದು ಹೇಳಿದರು.

ADVERTISEMENT

₹2.64 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಬಡ ಮಕ್ಕಳು ನೆಮ್ಮದಿಯಿಂದ ವಿದ್ಯಾಭ್ಯಾಸ ಮುಂದುವರಿಸಬೇಕು. ಸಮಾಜದಲ್ಲಿ ಉನ್ನತ ಸ್ಥರಕ್ಕೆ ಏರಬೇಕು ಎಂದು ಆಶಿಸಿದರು.

ರಾಜ್ಯದಲ್ಲಿ 50 ಕನಕದಾಸ ವಸತಿ ನಿಲಯಗಳನ್ನು ಹಾಗೂ 100 ಅಂಬೇಡ್ಕರ್ ವಸತಿ ನಿಲಯಗಳನ್ನು ನಿರ್ಮಾಣ ಮಾಡಲು ಬಜೆಟ್‍ನಲ್ಲಿ ಅನುಮೋದನೆ ನೀಡಲಾಗಿದೆ. ಅದೇ ರೀತಿ ನಾರಾಯಣ ಗುರು ಹೆಸರಿನಲ್ಲಿ ರಾಜ್ಯದ ನಾಲ್ಕು ಸ್ಥಳದಲ್ಲಿ ₹29 ಕೋಟಿ ವೆಚ್ಚದಲ್ಲಿ ವಸತಿ ಶಾಲೆ ನಿರ್ಮಿಸಲಾಗುವುದು. ರಾಜ್ಯದ ಐದು ಕಡೆ ದೀನದಯಾಳ್‌ ಹೆಸರಿನಲ್ಲಿ ಒಂದು ಸಾವಿರ ವಿದ್ಯಾರ್ಥಿಗಳ ಸಾಮರ್ಥ್ಯದ ವಸತಿ ನಿಲಯಗಳ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಬಜೆಟ್‍ನಲ್ಲಿ ₹250 ಕೋಟಿ ಮೀಸಲಿಡಲಾಗಿದೆ ಎಂದರು.

ಕೃಷಿ ಸಚಿವ ಬಿ.ಸಿ.ಪಾಟೀಲ ಅವರು, ಹಿರೇಕೆರೂರು ಮತ್ತು ರಟ್ಟಿಹಳ್ಳಿ ತಾಲ್ಲೂಕಿಗೆ 12 ವಸತಿ ಶಾಲೆಗಳನ್ನು ಆರಂಭಿಸಲು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಸರ್ಕಾರದ ವತಿಯಿಂದ ನಡೆಸಲಾಗುತ್ತಿರುವ ಹಿಂದುಳಿದ, ಅಲ್ಪಸಂಖ್ಯಾತರ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಸತಿ ಶಾಲೆಗಳಲ್ಲಿ ಅತ್ಯಂತ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಯಾವುದೇ ಖಾಸಗಿ ಶಾಲೆಗಳಿಗೂ ಈ ವಸತಿ ಶಾಲೆಗಳು ಕಡಿಮೆ ಇಲ್ಲದಂತೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದರು.

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಬೇಟಿ ಬಚಾವೋ ಬೇಟಿ ಪಡಾವೋ’ ಯೋಜನೆ ಜಾರಿಗೆ ತರುವ ಮೂಲಕ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದರು.

ಕರಾಟೆ ಸಮವಸ್ತ್ರ ವಿತರಣೆಗೆ ಕ್ರಮ:

ರಾಜ್ಯದಲ್ಲಿ 1705 ವಸತಿ ಶಾಲೆಗಳಿವೆ, ಈ ಶಾಲೆಗಳಲ್ಲಿ ಕಲಿಯುತ್ತಿರುವ 1.5 ಲಕ್ಷ ಹೆಣ್ಣು ಮಕ್ಕಳಿಗೆ ‘ಓಬವ್ವ ಆತ್ಮ ರಕ್ಷಣೆ’ ಯೋಜನೆಯಡಿ ವಿದ್ಯಾರ್ಥಿನಿಯರ ಆತ್ಮ ರಕ್ಷಣೆಗಾಗಿ ಕರಾಟೆ ತರಬೇತಿ ನೀಡಲಾಗುತ್ತಿದೆ. ಶಾಲೆಗಳು ಆರಂಭವಾದ ನಂತರ 6ನೇ ತರಗತಿ ಮೇಲ್ಪಟ್ಟ ಎಲ್ಲ ವಿದ್ಯಾರ್ಥಿನಿಯರಿಗೆ 836 ವಸತಿ ಶಾಲೆಗಳಲ್ಲಿ ಕರಾಟೆ ಸಮವಸ್ತ್ರ ನೀಡಿ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ವಸತಿ ರಹಿತರ ಸಮೀಕ್ಷೆ:

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಶೇ 10 ರಷ್ಟು ಜನರಿಗೆ ಸ್ವಂತ ಮನೆಗಳಿಲ್ಲ. ಈ ಹಿನ್ನಲೆಯಲ್ಲಿ ಹಾವೇರಿ, ಚಿತ್ರದುರ್ಗ, ಕಲಬುರ್ಗಿ ಹಾಗೂ ಚಾಮರಾಜನಗರಗಳನ್ನು ದತ್ತು ಪಡೆದು ವಸತಿ ರಹಿತರ ಸಮೀಕ್ಷೆ ನಡೆಸಿ ವಸತಿ ಕಲ್ಪಿಸುವ ಆಶಯವನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಕಂಠಾಧರ ಅಂಗಡಿ, ಉಪಾಧ್ಯಕ್ಷೆ ಕುಸುಮಾ ಬಣಕಾರ, ಸದಸ್ಯರಾದ ಹನುಮಂತಪ್ಪ ಕೋರವರ, ರಜೀಯಾ, ರಮೇಶ ಕೋಡಿಹಳ್ಳಿ, ಕವಿತಾ ಹಾಲನಹಳ್ಳಿ, ಗುರುಶಾಂತ, ಹೊನ್ನಪ್ಪ ಸಾಲಿ, ಸಿದ್ದರಾಜ ಕಲಕೋಟಿ, ಜಿಲ್ಲಾ ಹಿಂದುಳಿದ ಕಲ್ಯಾಣಾಧಿಕಾರಿ ಜಿ.ಸತೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.