ADVERTISEMENT

ಬ್ಯಾಡಗಿ: ನಿಸರ್ಗ ನಗರ, ಸಮಸ್ಯೆಗಳ ಆಗರ

ಶುದ್ಧ ನೀರಿನ ಘಟಕ ಸ್ಥಾಪಿಸಿ, ರಸ್ತೆ–ಚರಂಡಿ ಸರಿಪಡಿಸಲು ನಿವಾಸಿಗಳ ಆಗ್ರಹ

ಪ್ರಮೀಳಾ ಹುನಗುಂದ
Published 15 ಜೂನ್ 2021, 19:30 IST
Last Updated 15 ಜೂನ್ 2021, 19:30 IST
ಬ್ಯಾಡಗಿ ಪಟ್ಟಣದ ನಿಸರ್ಗ ನಗರದಲ್ಲಿ ವಾಸದ ಮನೆಗಳ ಸುತ್ತ ಬೆಳೆದಿರುವ ಗಿಡಗಂಟಿ
ಬ್ಯಾಡಗಿ ಪಟ್ಟಣದ ನಿಸರ್ಗ ನಗರದಲ್ಲಿ ವಾಸದ ಮನೆಗಳ ಸುತ್ತ ಬೆಳೆದಿರುವ ಗಿಡಗಂಟಿ   

ಬ್ಯಾಡಗಿ: ಹಾಳಾದ ರಸ್ತೆಗಳು, ಸ್ವಚ್ಛತೆ ಕಾಣದ ಚರಂಡಿಗಳು, ಖಾಲಿ ನಿವೇಶನದಲ್ಲಿ ಬೆಳೆದ ಗಿಡಗಂಟಿಗಳಿಂದ ವಿಷ ಜಂತುಗಳ ಅಪಾಯ, ಕೊಳಚೆಯಲ್ಲಿ ಹೊರಳಾಡುವ ಹಂದಿಗಳು... ಇವು ಪಟ್ಟಣದ ನಿಸರ್ಗ ನಗರದಲ್ಲಿ ಕಂಡು ಬರುವ ಪ್ರಮುಖ ಸಮಸ್ಯೆಗಳು.

ಪಟ್ಟಣದ ಕದರಮಂಡಲಗಿ ರಸ್ತೆಗೆ ಹೊಂದಿಕೊಂಡಿರುವ ಈ ಬಡಾವಣೆಯಲ್ಲಿ ಸಾಕಷ್ಟು ಮನೆಗಳು ನಿರ್ಮಾಣವಾಗಿವೆ. ಆದರೆ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ ಎಂದು ಅಲ್ಲಿಯ ನಿವಾಸಿಗಳ ಗೋಳಾಗಿದೆ.

‘ನಾಲ್ಕು ತಿಂಗಳಿಗೊಮ್ಮೆ ಚರಂಡಿಗಳ ಸ್ವಚ್ಛತೆ ನಡೆದರೆ ನಮ್ಮ ಪುಣ್ಯ, ಹೀಗಾಗಿ ಚರಂಡಿಗಳಲ್ಲಿ ನೀರು ಹರಿಯದೆ ದುರ್ವಾಸನೆ ಬೀರುತ್ತಿದೆ. ಖಾಲಿ ನಿವೇಶನಗಳಲ್ಲಿ ಕಸ ತೆಗೆಯದೆ ಪಾಳು ಬಿದ್ದಿದ್ದು, ಆಳೆತ್ತರದ ಗಿಡಗಂಟಿಗಳು ಬೆಳೆದಿವೆ. ಇದರಿಂದ ವಿಷ ಜಂತುಗಳ ಅಪಾಯ ಹೆಚ್ಚಿದೆ. ಹೀಗಾಗಿ ಮಕ್ಕಳು ಆಟವಾಡುವುದು ದುಸ್ತರವಾಗಿದೆ. ಪುರಸಭೆ ಖಾಲಿ ನಿವೇಶನಕ್ಕೆ ತೆರಿಗೆ ತುಂಬಿಸಿಕೊಳ್ಳುತ್ತಿದ್ದು ಅವುಗಳ ಸ್ವಚ್ಛತೆಗೆ ಮುಂದಾಗಬೇಕು’ ಎನ್ನುವುದು ನಿವಾಸಿ ಎಚ್‌.ಎಫ್‌ ಭಜಂತ್ರಿ ಅವರ ಒತ್ತಾಯ.

ADVERTISEMENT

ಕುಡಿಯುವ ನೀರಿನ ಸಮಸ್ಯೆ: ಬಡಾವಣೆಗೆ ನದಿ ನೀರು ಪೂರೈಕೆಯಾಗುತ್ತಿದ್ದು, ಮಳೆಗಾಲದಲ್ಲಿ ಮಣ್ಣು ಮಿಶ್ರಿತ ಇರುವುದರಿಂದ ಕುಡಿಯಲು ಯೋಗ್ಯವಾಗಿರುವುದಿಲ್ಲ. ಹೀಗಾಗಿ ಬಹಳಷ್ಟು ಜನರು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬಡಾವಣೆಯಲ್ಲಿ ಒಂದು ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಬೇಕು ಎಂದು ವರ್ತಕ ಗೋಣೆಪ್ಪ ಸಂಕಣ್ಣನವರ ಆಗ್ರಹಿಸಿದ್ದಾರೆ.

ತಿಂಗಳಿಗೊಮ್ಮೆಯಾದರೂ ಚರಂಡಿಗಳ ಸ್ವಚ್ಛತೆಗೆ ಮುಂದಾಗಬೇಕು. ಬಹಳಷ್ಟು ರಸ್ತೆಗಳ ಡಾಂಬರೀಕರಣ ಆಗಬೇಕಾಗಿದೆ. ಕಚ್ಚಾ ರಸ್ತೆಗಳಲ್ಲಿ ತಗ್ಗು ಬಿದ್ದಿದ್ದು ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ಕೆಲವು ಭಾಗಗಳಲ್ಲಿ ಪಕ್ಕಾ ಚರಂಡಿಗಳು ನಿರ್ಮಿಸಿಲ್ಲ. ಇದರಿಂದ ಕಸ ಬೆಳೆದಿದ್ದು ಅವ್ಯವ್ಯಸ್ಥೆಯ ಆಗರವಾಗಿದೆ. ಈ ಕುರಿತು ಹಲವು ಬಾರಿ ಪುರಸಭೆಯ ಗಮನಕ್ಕೆ ತಂದರೂ ದುರಸ್ತಿಗೆ ಮುಂದಾಗಿಲ್ಲ ಎಂದು ಆರ್‌.ಪಿ.ಮರಡಿ ದೂರಿದರು.

ಚರಂಡಿಗಳ ನಿರ್ಮಾಣವಿಲ್ಲದೆ ಶೌಚಾಲಯಗಳ ನೀರು ಖಾಲಿ ನಿವೇಶನಗಳಲ್ಲಿ ಸಂಗ್ರಹವಾಗುತ್ತಿದೆ. ಇಂತಹ ಕೊಳಚೆಯಲ್ಲಿ ಹಂದಿಗಳು ವಾಸವಾಗಿದ್ದು ವಾತಾವರಣವನ್ನು ಇನ್ನಷ್ಟು ಹಾಳು ಮಾಡುತ್ತಿದೆ. ಹಂದಿಗಳ ನಿಯಂತ್ರಣದ ಜೊತೆಗೆ ಚರಂಡಿ ನೀರು ಸರಾಗವಾಗಿ ಹರಿಯುವ ವ್ಯವಸ್ಥೆಯನ್ನು ಪುರಸಭೆ ಮಾಡಲು ಮುಂದಾಗುವಂತೆ ಅಲ್ಲಿಯ ನಿವಾಸಿ ಹುಸೇನಪ್ಪ ಮರ್ನೂಲ ಮನವಿ ಮಾಡಿಕೊಂಡಿದ್ದಾರೆ.

‘ನಿಸರ್ಗ ನಗರದಲ್ಲಿರುವ ಸಮಸ್ಯೆಗಳ ಕುರಿತು ಈ ಹಿಂದಿನ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಅನುದಾನದ ಕೊರತೆ ಎದುರಿಸುವಂತಾಗಿದ್ದು, ಮುಂದಿನ ಕ್ರಿಯಾ ಯೋಜನೆಯಲ್ಲಿ ಕಾಮಗಾರಿ ಹಾಕಿಕೊಳ್ಳಲಾಗುವುದು ಎಂದು
ಅಧ್ಯಕ್ಷೆ ಕವಿಕಾ ಸೊಪ್ಪಿನಮಠ ಭರವಸೆ ನೀಡಿದ್ದಾರೆ’ ಎಂದು 12ನೇ ವಾರ್ಡ್‌ ಸದಸ್ಯ ವಿನಯ ಹಿರೇಮಠ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.