ADVERTISEMENT

ಅಕ್ಕಿಆಲೂರ: ಪಶುಭಾಗ್ಯಕ್ಕಿಲ್ಲ ಅನುದಾನ; ರೈತರಿಗೆ ಅಸಮಾಧಾನ

ಆರ್ಥಿಕ ಸಬಲತೆಗೆ ದಾರಿಯಾಗಿತ್ತು: ಫಲಾನುಭವಿಗಳಿಗೆ ತೊಂದರೆ

ಸುರೇಖಾ ಪೂಜಾರ
Published 8 ಅಕ್ಟೋಬರ್ 2020, 3:49 IST
Last Updated 8 ಅಕ್ಟೋಬರ್ 2020, 3:49 IST
ಹಸುಗಳು
ಹಸುಗಳು   

ಅಕ್ಕಿಆಲೂರ: ಕೃಷಿ ಜತೆ ರೈತರಿಗೆ ಇನ್ನಷ್ಟು ಅನುಕೂಲ ಆಗಲಿ ಎನ್ನುವ ಉದ್ದೇಶದಿಂದ ರಾಜ್ಯದಲ್ಲಿ ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಮಹತ್ವಾಕಾಂಕ್ಷಿ ‘ಪಶುಭಾಗ್ಯ’ ಯೋಜನೆಗೆ ಇದುವರೆಗೆ ಅನುದಾನ ಬಿಡುಗಡೆಯಾಗದ ಕಾರಣ ಹೈನುಗಾರಿಕೆ ಮಾಡುವ ರೈತರಿಗೆ ನಿರಾಸೆ ಉಂಟಾಗಿದೆ.

ಸಣ್ಣ ರೈತರು, ಕೂಲಿಕಾರರು, ಮಹಿಳೆಯರು ಹಾಗೂ ಇತರರು ಹೈನುಗಾರಿಕೆಯ ಮೂಲಕ ತಮ್ಮ ಬದುಕು ಕಟ್ಟಿಕೊಂಡು ಆರ್ಥಿಕವಾಗಿ ಸಶಕ್ತರಾಗಲಿ ಎನ್ನುವ ಸದುದ್ದೇಶದಿಂದ ಸರ್ಕಾರ ಪಶುಭಾಗ್ಯ ಯೋಜನೆ ಜಾರಿಗೊಳಿಸಿ, ಹಸು ಕೊಳ್ಳಲು ಸಬ್ಸಿಡಿ ಒದಗಿಸುತ್ತಿತ್ತು. ಯೋಜನೆಯ ಪ್ರಯೋಜನ ಪಡೆದ ಅನೇಕ ರೈತರು ಆರ್ಥಿಕ ಸಬಲತೆಯ ದಾರಿ ಕಂಡುಕೊಂಡಿದ್ದರು.

ಹಿಂದಿನ ವರ್ಷ ಹಾಗೂ ಈ ವರ್ಷ ಸರ್ಕಾರ ಪಶು ಇಲಾಖೆಗೆ ಅನುದಾನ ನೀಡದ ಕಾರಣ ಪಶುಭಾಗ್ಯ ಯೋಜನೆಗೆ ಒಳಪಡುವ ಫಲಾನುಭವಿಗಳಿಗೆ ತೊಂದರೆ ಉಂಟಾಗಿದೆ.

ADVERTISEMENT

ಹೈನುಗಾರಿಕೆಯಲ್ಲಿ ಆಸಕ್ತಿ ಹೊಂದಿರುವ ರೈತರು ಪಶುಭಾಗ್ಯ ಯೋಜನೆಯಡಿ ಹಸುಗಳನ್ನು ಕೊಂಡುಕೊಳ್ಳಲು ಸಂಬಂಧಿಸಿದ ಪಶುಸಂಗೋಪನೆ ಇಲಾಖೆಗೆ ಅರ್ಜಿ ಹಿಡಿದು ಅಲೆದಾಡುವಂತಾಗಿದೆ. ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಯೋಜನೆಗೆ ಅನುದಾನ ದೊರೆತಿಲ್ಲ. ಹಾಗಾಗಿ ಅಧಿಕಾರಿಗಳು ಅರ್ಜಿ ಸ್ವೀಕರಿಸದ ಕಾರಣ ರೈತರು ಬಂದ ದಾರಿಗೆ ಸುಂಕವಿಲ್ಲ ಎಂದು ಮರಳುತ್ತಿದ್ದಾರೆ.

ಹೀಗಿತ್ತು ಸಬ್ಸಿಡಿ:

ಹೈನುಗಾರಿಕೆಯಲ್ಲಿ ತೊಡಗುವ ರೈತರಿಗೆ ಪಶುಭಾಗ್ಯ ಯೋಜನೆಯಡಿ ಹಸುಗಳನ್ನು ಕೊಳ್ಳಲು ₹1.20 ಲಕ್ಷ , ಕುರಿ ಹಾಗೂ ಮೇಕೆ ಖರೀದಿ ಮಾಡಲು ₹67 ಸಾವಿರ ನಿಗದಿ ಪಡಿಸಲಾಗಿತ್ತು.

ಪರಿಶಿಷ್ಟ ಜಾತಿ ಹಾಗೂ ಪಂಗಡದ ಫಲಾನುಭವಿಗಳಿಗೆ ಶೇ 50ರಷ್ಟು ಹಾಗೂ ಸಾಮಾನ್ಯ ವರ್ಗಕ್ಕೆ ಶೇ. 25 ರಷ್ಟು ಸಬ್ಸಿಡಿ ನೀಡಲಾಗುತ್ತಿತ್ತು. ಉಳಿದ ಹಣವನ್ನು ಬ್ಯಾಂಕ್‌ಗಳಿಂದ ಸಾಲದ ರೂಪದಲ್ಲಿ ನೀಡಲಾಗುತ್ತಿತ್ತು. ಕಳೆದ ವರ್ಷದ ಪ್ರವಾಹ ಹಾಗೂ ಈ ವರ್ಷದ ಕೊರೊನಾ ಕಾರಣಗಳಿಂದ ಮಹತ್ವಾಕಾಂಕ್ಷಿ ಯೋಜನೆಗೆ ಅನುದಾನ ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.