ಹಾವೇರಿ: ಪ್ರಸಕ್ತ ಸಾಲಿನ ಸಾಲ ಯೋಜನೆಯ ಅನುಷ್ಠಾನ ಆದ್ಯತಾ ವಲಯವಾರು ಹಾಗೂ ಬ್ಯಾಂಕ್ ಶಾಖಾವಾರು ಅನುಷ್ಠಾನಗೊಳ್ಳಬೇಕು. ಬ್ಯಾಂಕ್‍ವಾರು ಪ್ರಗತಿಯ ಮಾಹಿತಿಯನ್ನು ಕಾಲಕಾಲಕ್ಕೆ ಸಲ್ಲಿಸುವಂತೆ ಸಂಸದ ಶಿವಕುಮಾರ ಉದಾಸಿ ಅವರು ಬ್ಯಾಂಕರ್ಸ್‍ಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ 2021-22ನೇ ಸಾಲಿನಲ್ಲಿ ಜಿಲ್ಲಾ ಸಾಲ ಯೋಜನಾ ಪತ್ರವನ್ನು ಬಿಡುಗಡೆಗೊಳಿಸಿ, ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ (ಡಿ.ಎಲ್.ಆರ್.ಸಿ) ಹಾಗೂ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಸಾಲ ಯೋಜನೆ ಗುರಿ ‘ಮೈಕ್ರೋ ಲೆವಲ್’ನಲ್ಲಿ ಅನುಷ್ಠಾನಗೊಳ್ಳಬೇಕು. ಬ್ರಾಂಚ್‌ವಾರು ಸಂಪರ್ಕ ಹೊಂದಬೇಕು. ಪ್ರತಿ ಶಾಖೆಗಳು ಯೋಜನೆಯ ನಿರ್ದಿಷ್ಟ ಗುರಿಯಂತೆ ಕೆಳಹಂತದಲ್ಲಿ ಅನುಷ್ಠಾನಗೊಳಿಸಬೇಕು. ಸಾಲ ಯೋಜನೆಯಲ್ಲಿ ಕೋಲ್ಡ್ ಸ್ಟೋರೇಜ್, ಕೃಷಿ ಮೂಲ ಸೌಕರ್ಯಗಳು, ಒಂದು ಪ್ರದೇಶ ಒಂದು ಬೆಳೆ ಗುರುತಿಸಿ ಹೋಬಳಿವಾರು ರೇಷ್ಮೆ, ತೋಟಗಾರಿಕೆ ಹಾಗೂ ಕೃಷಿ ಬೆಳೆಗಳ ಉತ್ತೇಜನ, ಮಾರುಕಟ್ಟೆಗಳಿಗೆ ಪ್ರೋತ್ಸಾಹಿಸಲು ರೈತ ಗುಂಪುಗಳಿಗೆ ಬ್ಯಾಂಕಿನ ನೆರವು ನೀಡಬೇಕು ಎಂದು ಸೂಚನೆ ನೀಡಿದರು.
ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಘೋಷಿಸಿರುವ ಮೂರನೇ ಪ್ಯಾಕೇಜ್ ಸಣ್ಣ ಹಣಕಾಸು ಸಂಸ್ಥೆಗಳಿಗೆ ನೆರವು ಸೇರಿದಂತೆ ಜಿಲ್ಲೆಯಲ್ಲಿ ಎಷ್ಟು ಹಣಕಾಸು ಸಂಸ್ಥೆಗಳಿವೆ ಎಂದು ಮಾಹಿತಿ ಸಂಗ್ರಹಿಸಬೇಕು. ಕೇಂದ್ರದ ಪ್ಯಾಕೇಜ್ ಸೌಲಭ್ಯವನ್ನು ದೊರಕಿಸಿಕೊಡಲು ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.
ಉದ್ಯೋಗಿನಿ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ವರ್ಗದವರಿಗೆ ವಲಯವಾರು ನೀಡಿರುವ ಸಾಲದ ವಿವರ, ಫಲಾನುಭವಿಗಳ ಮಾಹಿತಿಯನ್ನು ನೀಡಬೇಕು. ಬೀದಿಬದಿ ವ್ಯಾಪಾರಿಗಳಿಗೆ ಸಾಲ ನೀಡಿಕೆಯಲ್ಲಿ ಸಿಬಿಲ್ ಸ್ಕೋರ್ ಪರಿಗಣಿಸದೇ ಸಾಲ ನೀಡಲು ಬ್ಯಾಂಕರ್ಸ್‌ಗಳಿಗೆ ಸೂಚಿಸಿದರು.
ಆನ್‍ಲೈನ್ ವಂಚನೆ ತಡೆ: ಇತ್ತೀಚೆಗೆ ಆನ್‍ಲೈನ್ ವಂಚನೆ ಪ್ರಕರಣಗಳು, ಡಿಜಿಟಿಲ್ ಫ್ರಾಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಹಣಕಾಸಿನ ಸಾಕ್ಷರತೆ ಗೊತ್ತಿಲದ ಬಹಳಷ್ಟು ಜನ ಆನ್‍ಲೈನ್ ವಂಚನೆಗೆ ಒಳಗಾಗುತ್ತಿದ್ದಾರೆ. ಈ ಕುರಿತಂತೆ ಜಾಗೃತಿ ಮೂಡಿಸಬೇಕು. ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡುವ ವಂಚನೆ ಪ್ರಕರಣಗಳನ್ನು ತಡೆಯಬೇಕು. ಈ ಕುರಿತಂತೆ ಆನ್‍ಲೈನ್ ಸಾಕ್ಷರತೆಗೆ ಕೌನ್ಸಿಲರ್‌ಗಳನ್ನು ನೇಮಕ ಮಾಡಿಕೊಂಡು ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಲು ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ರೋಶನ್ ಮಾತನಾಡಿ, ಸಾಲ ಯೋಜನೆಯನ್ನು ಬ್ಯಾಂಕ್‍ವಾರು, ಶಾಖಾವಾರು ಆದ್ಯತಾ ವಲಯಗಳನ್ನು ಗುರುತಿಸಿ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದರು.
ಲೀಡ್ ಬ್ಯಾಂಕ್ ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ಮುಖ್ಯಸ್ಥ ಆರ್.ವಿ.ಎಸ್.ವಿ. ಶ್ರೀಧರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ಕೆ.ವಿ.ಜಿ. ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ನಾರಾಯಣ ಯಾಜಿ, ನಬಾಡ್ ಬ್ಯಾಂಕಿನ ಉಪನಿರ್ದೇಶಕ ಮಹದೇವ ಕೀರ್ತಿ ಇದ್ದರು. ಬೆಂಗಳೂರು ಆರ್.ಬಿ.ಐ ಎಲ್.ಡಿ.ಒ ಎ.ವಿ. ಬಾಲಚಂದರ ವೆಬಿನಾರ್ ಮೂಲಕ ಭಾಗವಹಿಸಿದ್ದರು.
₹3,390 ಕೋಟಿ ಸಾಲ ಯೋಜನೆ
ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ ಅವರು ಜಿಲ್ಲಾ ಸಾಲ ಯೋಜನೆಯ ಮಾಹಿತಿ ನೀಡಿ, ಆದ್ಯತಾ ವಲಯಕ್ಕೆ ₹3,144 ಕೋಟಿ, ಆದ್ಯತೇತರ ವಲಯಕ್ಕೆ ₹245 ಕೋಟಿ ಸೇರಿ ₹3,390 ಕೋಟಿ ಸಾಲ ಯೋಜನೆ 2021-22ಕ್ಕೆ ಯೋಜಿಸಲಾಗಿದೆ. ₹1,284 ಕೋಟಿಯನ್ನು ದುರ್ಬಲ ವರ್ಗದವರ ಏಳಿಗೆಗಾಗಿ ಮೀಸಲಿರಿಸಲಾಗಿದೆ. ಕೃಷಿಗಾಗಿ ₹1946 ಕೋಟಿ ಕಾಯ್ದಿರಿಸಲಾಗಿದೆ ಎಂದರು.
ವಿವರದಂತೆ ಬೆಳೆಸಾಲಕ್ಕೆ ₹1,449 ಕೋಟಿ, ಕೃಷಿ ಅವಧಿ ಸಾಲಕ್ಕೆ ₹292 ಕೋಟಿ, ಕೃಷಿ ಮೂಲ ಸೌಕರ್ಯ ಕಲ್ಪಿಸಲು ₹101 ಕೋಟಿ, ಕೃಷಿ ಪೂರಕ ಚಟುವಟಿಕೆಗಳಿಗೆ ₹102 ಕೋಟಿ ಸೇರಿದಂತೆ ಕೃಷಿ ಸಾಲ ಕ್ಷೇತ್ರಕ್ಕೆ ₹1,946 ಕೋಟಿ ಕಾಯ್ದಿರಿಸಲಾಗಿದೆ ಎಂದರು.
*
ಬೀದಿಬದಿ ವ್ಯಾಪಾರಿಗಳಿಗೆ ಸಾಲ ನೀಡಿಕೆಯಲ್ಲಿ ಸಿಬಿಲ್ ಸ್ಕೋರ್ ಪರಿಗಣಿಸದೇ ಬ್ಯಾಂಕರ್ಸ್‌ಗಳು ಸಾಲ ನೀಡಬೇಕು
–ಶಿವಕುಮಾರ ಉದಾಸಿ, ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.