ADVERTISEMENT

ಪರಿಹಾರ ನೀಡಲು ಹೆಸ್ಕಾಂಗೆ ಆದೇಶ

ಶಾರ್ಟ್‌ ಸರ್ಕಿಟ್‌: ಕಬ್ಬಿನ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 15:27 IST
Last Updated 24 ನವೆಂಬರ್ 2021, 15:27 IST
ಹಾವೇರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಟ್ಟಡ 
ಹಾವೇರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಟ್ಟಡ    

ಹಾವೇರಿ: ಶಾರ್ಟ್‌ ಸರ್ಕಿಟ್‌ನಿಂದ ಉಂಟಾದ ಕಬ್ಬಿನ ಬೆಳೆ ಹಾನಿ ಪರಿಹಾರ ಮೊತ್ತ ನೀಡಲು ಹೆಸ್ಕಾಂಗೆ ಹಾವೇರಿ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.

ಬ್ಯಾಡಗಿ ತಾಲ್ಲೂಕಿನ ಸಿದ್ದಾಪುರ ಗ್ರಾಮದ ರೈತರಾದ ಆಂಜನೇಯ ಮಲ್ಲಪ್ಪ ಕಚವಿ ಹಾಗೂ ಮೂಕಪ್ಪ ಮಲ್ಲಪ್ಪ ಕಚವಿ ಅವರು ತಮ್ಮ ಜಮೀನಿನಲ್ಲಿ ಕಬ್ಬು ಬೆಳೆದಿದ್ದರು. ಈ ಜಮೀನಲ್ಲಿ ಹಾದು ಹೋಗಿರುವಂತಹ ವಿದ್ಯುತ್ ಕಂಬದ ತಂತಿಗಳು ಬಹಳ ಸಡಿಲವಾಗಿ ಜೋತಾಡುತ್ತಿದ್ದು, ಸರಿಪಡಿಸುವಂತೆ ರೈತರು ಮೌಖಿಕವಾಗಿ ಹೆಸ್ಕಾಂನ ಬ್ಯಾಡಗಿ ಶಾಖೆ ಸಹಾಯಕ ಎಂಜಿನಿಯರ್‌ ಹಾಗೂ ಕಾಗಿನೆಲೆ ಶಾಖಾ ಅಧಿಕಾರಿಗಳಿಗೆ ತಿಳಿಸಿದ್ದರು.

ಆದರೆ, ತಂತಿಗಳನ್ನು ಸರಿಪಡದೇ ನಿರ್ಲಕ್ಷ್ಯ ತೋರಿದ ಕಾರಣ ಡಿ.15, 2020ರಂದು ಜೋರಾಗಿ ಬೀಸಿದ ಗಾಳಿಯಿಂದಾಗಿ ಸದರಿ ತಂತಿಗಳು ಒಂದಕ್ಕೊಂದು ತಾಗಿ ವಿದ್ಯುತ್ ಶಾರ್ಟ್‌ ಸರ್ಕಿಟ್‌ ಸಂಭವಿಸಿದ ಕಾರಣ ಕಟಾವಿಗೆ ಬಂದ ಕಬ್ಬಿನ ಬೆಳೆಗೆ ಬೆಂಕಿ ವ್ಯಾಪಿಸಿ ಕಬ್ಬು ಸಂಪೂರ್ಣ ಸುಟ್ಟು ಕರಕಲಾದ ಬಗ್ಗೆ ಕಾಗಿನೆಲೆ ಪೊಲೀಸ್‍ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಈ ಕುರಿತಂತೆ ಹೆಸ್ಕಾಂ ಯಾವುದೇ ಕ್ರಮವಹಿಸಿದ ಕಾರಣ ರೈತರು ಪರಿಹಾರ ಹಣಕ್ಕಾಗಿ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿದ್ದರು.

ADVERTISEMENT

ಪ್ರಕರಣದ ವಿಚಾರಣೆಯನ್ನು ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಸುನಂದಾ ಹಾಗೂ ಸದಸ್ಯೆ ಮಹೇಶ್ವರಿ ಬಿ.ಎಸ್. ಅವರು ರೈತರಾದ ಆಂಜನೇಯ ಮಲ್ಲಪ್ಪ ಕಚವಿ ಹಾಗೂ ಮೂಕಪ್ಪ ಮಲ್ಲಪ್ಪ ಕಚವಿ ₹85 ಸಾವಿರ ಪರಿಹಾರ ಹಣ ಹಾಗೂ ಮಾನಸಿಕ ವ್ಯಥೆಗಾಗಿ ತಲಾ ಒಂದು ಸಾವಿರವನ್ನು 30 ದಿನದೊಳಗಾಗಿ ನೀಡಲು ಹೆಸ್ಕಾಂ ಶಾಖೆಗಳಿಗೆ ಆದೇಶ ಪ್ರಕಟಿಸಿದ್ದಾರೆ. ವಿಳಂಬ ಮಾಡಿದರೆ ವಾರ್ಷಿಕ ಶೇ 9ರ ಬಡ್ಡಿ ಸಮೇತ ಪಾವತಿಸಬೇಕು ಎಂದು ಆಯೋಗ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.