
ರಾಣೆಬೆನ್ನೂರು: ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಕೊಡುವ ಉದ್ದೇಶದಿಂದ ತಾಲ್ಲೂಕಿನಲ್ಲಿ ಸರ್ಕಾರದಿಂದ ನಿರ್ಮಿಸಿದ್ದ 175ಕ್ಕೂ ಹೆಚ್ಚು ಶುದ್ಧ ನೀರಿನ ಘಟಕಗಳು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ದುರಸ್ತಿಗೊಳ್ಳದೇ ತುಕ್ಕು ಹಿಡಿಯುತ್ತಿವೆ.
ನಿರ್ವಹಣೆ ಕೊರತೆಯಿಂದ 175ಕ್ಕೂ ಹೆಚ್ಚು ಘಟಕಗಳ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಇದರಿಂದ ಶುದ್ಧ ನೀರು ಲಭ್ಯವಾಗದೇ ಜನರು ಖಾಸಗಿ ಘಟಕಗಳತ್ತ ಮುಖ ಮಾಡುತ್ತಿದ್ದಾರೆ. ಇದಕ್ಕಾಗಿ ಕಿ.ಮೀ.ಗಟ್ಟಲೇ ಸಂಚರಿಸಬೇಕಾದ ಸ್ಥಿತಿ ಬಂದೊದಗಿದೆ.
ಕೆಲ ಘಟಕಗಳಲ್ಲಿ ಹಾವು, ವಿಷ ಜಂತುಗಳು ವಾಸಿಸುತ್ತಿದ್ದು, ಇದರಿಂದ ಸುತ್ತಮುತ್ತಲಿನ ಜನತೆಗೆ ಭಯದ ವಾತಾವರಣ ಉಂಟಾಗಿದೆ.
ಘಟಕಗಳನ್ನು ಏಜೆನ್ಸಿಯವರು ನಿರ್ವಹಣೆ ಮಾಡುತ್ತಿದ್ದರು. ಈಗ ಅವರ ಅವಧಿ ಮುಗಿದಿದ್ದರಿಂದ ಅನೇಕ ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಗೆ ಕಾದಿವೆ. ಕೆಲವು ಕಡೆ ಘಟಕಗಳ ದುರಸ್ತಿಗೆ ಬಿಡಿಭಾಗಗಳು ಸಿಗುತ್ತಿಲ್ಲ. ದುರಸ್ತಿ ಮಾಡುವ ತಾಂತ್ರಿಕ ವರ್ಗದವರ ಕೊರತೆ ಇದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ನೆಪ ಹೇಳುತ್ತಿದ್ದಾರೆ. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಶುದ್ಧ ನೀರಿನ ಘಟಕ ದುರಸ್ತಿಗೊಳಿಸಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.
ತಾಲ್ಲೂಕಿನ ದೇವರಗುಡ್ಡದ ಮಾಲತೇಶ ದೇವಸ್ಥಾನಕ್ಕೆ ಪ್ರತಿ ಭಾನುವಾರ, ಹುಣ್ಣಿಮೆ ಹಾಗೂ ದಸರಾ ಮಹೋತ್ಸವಕ್ಕೆ ರಾಜ್ಯದ ಹಲವು ಕಡೆಗಳಿಂದ ಭಕ್ತರು ಬಂದು ಹೋಗುತ್ತಾರೆ. ಗ್ರಾಮ ಪಂಚಾಯಿತಿ ಹಾಗೂ ತಾಂಡಾ ಬಳಿ ಇರುವ ಘಟಕ ಕೆಟ್ಟಿದ್ದು, ಜನರಿಗೆ ಶುದ್ಧ ನೀರು ಸಿಗುತ್ತಿಲ್ಲ. ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ ಮಾಡಿ ನೀರು ಸಿಗುವಂತೆ ಮಾಡಬೇಕು ಎಂದು ದೇವರಗುಡ್ಡ, ಇಟಗಿ, ಮುಷ್ಟೂರು, ಕೊಡಿಯಾಲ ಹೊಸಪೇಟೆ ನಿವಾಸಿಗಳು ಆಗ್ರಹಿಸುತ್ತಿದ್ದಾರೆ.
ತಾಲ್ಲೂಕಿನಲ್ಲಿ ಹೆಚ್ಚು ಫ್ಲೋರೈಡ್‌ಯುಕ್ತ ನೀರು ಸೇವಿಸುವುದರಿಂದ ಮಕ್ಕಳು, ವೃದ್ಧರು, ಗರ್ಭಿಣಿಯರು ಕಾಯಿಲೆಗೆ ತುತ್ತಾಗಿದ್ದಾರೆ. ಹಾಗಾಗಿ, ಸಾರ್ವಜನಿಕರ ಅನುಕೂಲಕ್ಕಾಗಿ ಶುದ್ಧ ನೀರಿನ ಘಟಕ ಸ್ಥಾಪಿಸಲಾಗಿದೆ. ಆದರೆ ನಿರ್ವಹಣೆ ಮಾಡುವಲ್ಲಿ ಗ್ರಾಮ ಪಂಚಾಯಿತಿ ಹಾಗೂ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಯೋಜನೆ ಅಧಿಕಾರಿಗಳು ವಿಫಲವಾಗಿದ್ದಾರೆ.
ನಗರದ ಬಸ್ ನಿಲ್ದಾಣದ ಶುದ್ಧ ಕುಡಿಯುವ ನೀರಿನ ಘಟಕ ಬಂದಾಗಿದೆ. ಪ್ರಯಾಣಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಕುಡಿಯುವ ನೀರಿಗಾಗಿ ಬಸ್ ನಿಲ್ದಾಣದ ಹೊಟೇಲ್‌ಗೆ ಹೋಗುತ್ತಿದ್ದಾರೆ. ಇದರಿಂದ ಹೊಟೇಲ್ ಮಾಲೀಕರು ದಿನಾಲು ವಿದ್ಯಾರ್ಥಿಗಳಿಗೆ ಬೈದು ಕಳಿಸುತ್ತಾರೆ.
ತಾಲ್ಲೂಕಿನ ಕೊಡಿಯಾಲ ಹೊಸಪೇಟೆಯಲ್ಲಿ ಗ್ರಾಮ ಪಂಚಾಯಿತಿ ಮತ್ತು ಸಹಕಾರ ಸಂಘದಿಂದ ಐದು ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಅದರಲ್ಲಿ ಮೂರು ಘಟಕಗಳು ದುರಸ್ತಿ ಕಂಡಿಲ್ಲ. ನಿರ್ವಹಣೆ ಗುತ್ತಿಗೆ ಮುಗಿದಿದ್ದು, ಏಜೆನ್ಸಿಯವರೂ ಮೌನವಾಗಿದ್ದಾರೆ. ಗ್ರಾಮ ಪಂಚಾಯಿತಿ ಅವರನ್ನು ಕೇಳಿದರೆ, ಘಟಕ ದುರಸ್ತಿ ಬಗ್ಗೆ ಪ್ರತಿಕ್ರಿಯಿಸುತ್ತಿಲ್ಲವೆಂದು ಜನರು ದೂರಿದರು.
ಹರನಗಿರಿ ಗ್ರಾಮದಲ್ಲಿ 2015-16 ನೇ ಸಾಲಿನ ಹಣಕಾಸು ಯೋಜನೆಯಲ್ಲಿ ₹3.50 ಲಕ್ಷ ಖರ್ಚು ಮಾಡಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಅನೇಕ ವರ್ಷಗಳಾಗಿವೆ. ಮೊದಲು ಕೊಳವೆಬಾವಿ ನೀರು ಕುಡಿಯುತ್ತಿದ್ದೆವು. ನಂತರ ಶುದ್ಧ ನೀರು ಕುಡಿಯಲು ಪ್ರಾರಂಭಿಸಿದೆವು. ಈಗ ಘಟಕಗಳು ಕೆಟ್ಟಿವೆ. ಕೊಳವೆಬಾವಿ ನೀರೇ ಗತಿಯಾಗಿದೆ ಎಂದು ಹರನಗಿರಿಯ ಪ್ರಕಾಶ ಜೋತಿ ಹೇಳಿದರು.
ತುಂಗಭದ್ರಾ ನದಿ ಹರಿದರೂ ಶುದ್ದ ಕುಡಿಯುವ ನೀರು ಇಲ್ಲದಂತಾಗಿದೆ. ನೇರವಾಗಿ ನದಿ ನೀರು ಮತ್ತು ಕೊಳವೆಬಾವಿ ನೀರನ್ನು ಕುಡಿಯಲು ಬಳಕೆ ಮಾಡುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅಲ್ಲದೇ ಅನೇಕರು ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ ಎಂದು ತಿಳಿಸಿದರು.
ತಾಲ್ಲೂಕಿನ ಹರನಗಿರಿ, ಕೂನಬೇವು, ಚಳಗೇರಿ, ಹೊನ್ನತ್ತಿ, ಕೆರಿಮಲ್ಲಾಪುರ, ಮೇಡ್ಲೇರಿ, ಹಲಗೇರಿ, ಮುಷ್ಟೂರು, ಕೊಡಿಯಾಲ ಹೊಸಪೇಟೆ, ಮೇಡ್ಲೇರಿ ತಾಂಡಾ, ರಾಹುತನಕಟ್ಟಿ, ಹಿರೇಬಿದರಿ, ಬೇಲೂರು, ಐರಣಿ, ನದೀಹರಳಹಳ್ಳಿ, ಹುಲಿಕಟ್ಟಿ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಘಟಕಗಳು ಕೆಟ್ಟಿದ್ದು, ದುರಸ್ತಿಗಾಗಿ ಜನರು ಆಗ್ರಹಿಸುತ್ತಿದ್ದಾರೆ.
ಘಟಕಗಳನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲು ಸರ್ಕಾರ ಆದೇಶ ಮಾಡಿದೆ. 69 ಘಟಕ ಹಸ್ತಾಂತರಿಸಲಾಗಿದೆ. ಉಳಿದ ಘಟಕಗಳ ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿದೆರಾಮಕೃಷ್ಣ ಎಇಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪವಿಭಾಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.