ADVERTISEMENT

ಹಂದಿ ಸ್ಥಳಾಂತರಕ್ಕೆ ಮುಂದಾದ ಮಾಲೀಕರು

ಜುಲೈ 10ರವರೆಗೆ ನಗರಸಭೆಯಿಂದ ಕಾಲಾವಕಾಶ: ಗೋಶಾಲೆಗೆ ಬಿಡಾಡಿ ದನ ಸಾಗಿಸಲು ಕ್ರಮ

​ಪ್ರಜಾವಾಣಿ ವಾರ್ತೆ
Published 8 ಜುಲೈ 2022, 14:11 IST
Last Updated 8 ಜುಲೈ 2022, 14:11 IST
ಹಾವೇರಿ ನಗರದಲ್ಲಿ ಶುಕ್ರವಾರ ಹಂದಿಗಳನ್ನು ಹಿಡಿದ ಮಾಲೀಕರು ನಗರದ ಹೊರಗಡೆ ಸಾಗಿಸಿದರು. ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಇದ್ದಾರೆ   –ಪ್ರಜಾವಾಣಿ ಚಿತ್ರ 
ಹಾವೇರಿ ನಗರದಲ್ಲಿ ಶುಕ್ರವಾರ ಹಂದಿಗಳನ್ನು ಹಿಡಿದ ಮಾಲೀಕರು ನಗರದ ಹೊರಗಡೆ ಸಾಗಿಸಿದರು. ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಇದ್ದಾರೆ   –ಪ್ರಜಾವಾಣಿ ಚಿತ್ರ    

ಹಾವೇರಿ: ನಗಸಭೆ ಗಡುವು ನೀಡಿದ ಪರಿಣಾಮ ಶುಕ್ರವಾರ ಹಂದಿ ಮಾಲೀಕರು ನಗರದ ವಿವಿಧೆಡೆ ಇದ್ದ ಸುಮಾರು 70 ಹಂದಿಗಳನ್ನು ಹಿಡಿದು ನಾಗೇಂದ್ರನಮಟ್ಟಿ ದೊಡ್ಡಿಗೆ ಸಾಗಿಸಿದರು.

ಹಾಸನದಲ್ಲಿ ಸೋಮವಾರ ಹಂದಿ ಮಾರುಕಟ್ಟೆ ಇರುವುದರಿಂದ ಹಿಡಿದ ಹಂದಿಗಳನ್ನು ಮಾಲೀಕರು ಮಾರುಕಟ್ಟೆಗೆ ಸಾಗಿಸಿ, ಮಾರಾಟ ಮಾಡಲಿದ್ದಾರೆ ಎಂದು ನಗರಸಭೆ ಸಿಬ್ಬಂದಿ ತಿಳಿಸಿದರು.

ನಗರದೊಳಗೆ ಇರುವ ಹಂದಿಗಳನ್ನು ಜುಲೈ 10ರೊಳಗೆ ಹಿಡಿದು ನಗರದ ಹೊರಗಡೆ ಸಾಗಿಸದಿದ್ದರೆ, ಜುಲೈ 11ರಿಂದ ಹಂದಿ ಕಾರ್ಯಾಚರಣೆಯನ್ನು ನಗರಸಭೆಯಿಂದಲೇ ಕೈಗೊಳ್ಳಲಾಗುವುದು ಎಂದು ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮತ್ತು ಪೌರಾಯುಕ್ತ ವಿರೂಪಾಕ್ಷಪ್ಪ ಪೂಜಾರ ಎಚ್ಚರಿಕೆ ನೀಡಿದ್ದರು.

ADVERTISEMENT

ನಗರದಲ್ಲಿ ಹಂದಿಗಳ ಹಾವಳಿ ವಿಪರೀತವಾಗಿದೆ. ಚರಂಡಿ ತ್ಯಾಜ್ಯವನ್ನು ರಸ್ತೆಗೆ ಹರಡುತ್ತಾ, ಕಸವನ್ನು ಕೆದರುತ್ತಾ, ಅನೈರ್ಮಲ್ಯ ವಾತಾವರಣ ಸೃಷ್ಟಿಸುತ್ತಿರುವ ಹಂದಿಗಳಿಂದ ನಾಗರಿಕರು ರೋಸಿ ಹೋಗಿ ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಗುರುವಾರ ನಗರಸಭೆಯಲ್ಲಿ ಹಂದಿ ಮಾಲೀಕರ ಸಭೆ ನಡೆಸಿ, ಹಂದಿಗಳನ್ನು ಹೊರಗಡೆ ಸಾಗಿಸಲು ತಾಕೀತು ಮಾಡಲಾಗಿತ್ತು.

ಜಾಗ ನೀಡಲು ಕೋರಿಕೆ:

‘ಯತ್ತಿನಹಳ್ಳಿ ಸಮೀಪ ಸರ್ಕಾರಿ ಜಾಗವಿದ್ದು, ಅಲ್ಲಿ ಹಂದಿಗಳ ಸಾಕಣೆಗೆ ಅನುಕೂಲ ಕಲ್ಪಿಸಲು 5ರಿಂದ 10 ಎಕರೆ ಜಾಗವನ್ನು ಕೊಡಲು ಜಿಲ್ಲಾಧಿಕಾರಿ ಅವರಲ್ಲಿ ಮನವಿ ಮಾಡುತ್ತೇವೆ. ಕಲ್ಯಾಣ ಮಂಟಪ ಮತ್ತು ಮನೆಗಳಲ್ಲಿ ದೊರಕುವ ಮುಸುರೆಯನ್ನು ಹಂದಿ ದೊಡ್ಡಿಗೆ ಸಾಗಿಸಲು ನಗರಸಭೆಯಿಂದ ಒಂದು ವಾಹನ ಮೀಸಲಿಡುವ ಚಿಂತನೆಯೂ ಇದೆ’ ಎಂದು ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ತಿಳಿಸಿದರು.

ಮಂಗಗಳ ಸೆರೆಗೆ ಮನವಿ:

‘ಜುಲೈ 11ರಿಂದ ಬಿಡಾಡಿ ದನಗಳನ್ನು ಗೋಶಾಲೆಗೆ ಸಾಗಿಸಲು ಕ್ರಮ ಕೈಗೊಳ್ಳಲಾಗಿದೆ.ಜತೆಗೆ ಮಂಗಗಳ ಹಾವಳಿ ವಿಪರೀತವಾಗಿದ್ದು, ಅವುಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಗೆ ಮನವಿ ಮಾಡಲಾಗಿದೆ. ಮಂಗಗಳ ಕಾಟಕ್ಕೆ ಬೇಸತ್ತ ನಾಗರಿಕರಿಂದ ಹಲವಾರು ದೂರುಗಳು ಕೇಳಿಬಂದಿವೆ’ ಎಂದು ಸಂಜೀವಕುಮಾರ ನೀರಲಗಿ ತಿಳಿಸಿದರು.

ಹಂದಿಗಳ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಸೋಮವಾರದ ನಂತರವೂ ನಗರದಲ್ಲಿ ಹಂದಿಗಳಿದ್ದರೆ ನಗರಸಭೆಯಿಂದಲೇ ಕಾರ್ಯಾಚರಣೆ ಕೈಗೊಳ್ಳುತ್ತೇವೆ.
– ಸಂಜೀವಕುಮಾರ ನೀರಲಗಿ, ನಗರಸಭೆ ಅಧ್ಯಕ್ಷ, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.