ADVERTISEMENT

ಪರರ ಎದುರು ಮಕ್ಕಳ ನಿಂದಿಸದಿರಿ: ನಿರಂಜನಾನಂದಪುರಿ ಸ್ವಾಮೀಜಿ

ಕನಕ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರ ಸಮಾರಂಭ: ನಿರಂಜನಾನಂದಪುರಿ ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 2:46 IST
Last Updated 13 ಅಕ್ಟೋಬರ್ 2025, 2:46 IST
ಹಾವೇರಿ ತಾಲ್ಲೂಕು ಶ್ರೀ ಕನಕ ನೌಕರರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ‘ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ–2025’ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು
ಹಾವೇರಿ ತಾಲ್ಲೂಕು ಶ್ರೀ ಕನಕ ನೌಕರರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ‘ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ–2025’ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು   

ಹಾವೇರಿ: ‘ಸಾಮಾಜಿಕ ಮಾಧ್ಯಮ ಕಾಲದಲ್ಲಿ ಮಕ್ಕಳು ಬಹಳ ಸೂಕ್ಷ್ಮವಾಗಿದ್ದಾರೆ. ಪೋಷಕರು ಮಕ್ಕಳನ್ನು ಬೇರೊಬ್ಬರ ಮುಂದೆ ನಿಂದಿಸಬಾರದು. ಪರರ ಮಕ್ಕಳ ಜೊತೆ ಹೋಲಿಕೆ ಮಾಡಿ ಅಗೌರವದಿಂದ ವರ್ತಿಸಬಾರದು’ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಅವರು ಪೋಷಕರಿಗೆ ಕಿವಿಮಾತು ಹೇಳಿದರು.

ಇಲ್ಲಿಯ ಕ.ವಿ.ಪ್ರ.ನಿ. ನೌಕರರ ಸಂಘದ (ಕೆ.ಇ.ಬಿ) ಸಭಾಭವನದಲ್ಲಿ ಹಾವೇರಿ ತಾಲ್ಲೂಕು ಶ್ರೀ ಕನಕ ನೌಕರರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ‘ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ–2025’ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಬೇಕೆಂದು ಎಲ್ಲರೂ ಹೇಳುತ್ತಾರೆ. ಆದರೆ, ಅದನ್ನು ಮಾಡುವವರು ಯಾರು?. ಪೋಷಕರ ಉತ್ತಮ ಮಾತುಗಳೇ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುತ್ತದೆ. ಮಕ್ಕಳ ಎದುರು ಪೋಷಕರು ಕೆಟ್ಟ ಶಬ್ದ ಬಳಸಬಾರದು. ನಿತ್ಯವೂ ಸಕಾರಾತ್ಮಕ ಮಾತುಗಳಿರಬೇಕು. ಆಗ, ಬದುಕು ಸಹ ಸಕಾರಾತ್ಮಕವಾಗಿರುತ್ತದೆ.’

ADVERTISEMENT

‘ತಿನ್ನುವ ಆಹಾರದಿಂದಲೇ ಸಂಸ್ಕಾರ ಬರುತ್ತದೆ. ಟಿ.ವಿ. ಧಾರಾವಾಹಿ ನೋಡುತ್ತ ಅಡುಗೆ ಮಾಡಿದರೆ, ಮಕ್ಕಳಲ್ಲಿ ಸಂಸ್ಕಾರ ಬರುವುದಿಲ್ಲ. ಟಿ.ವಿ. ಬಂದ್ ಮಾಡಿ, ದೇವರನ್ನು ನೆನೆಸುತ್ತ ಅಡುಗೆ ಮಾಡಿದರೆ ಅದು ಭಕ್ತಿಭಾವದ ಪ್ರಸಾದವಾಗುತ್ತದೆ. ಅಂಥ ಪ್ರಸಾದ ತಿನ್ನುವ ಮಕ್ಕಳು, ಸಂಸ್ಕಾರವಂತರಾಗುತ್ತಾರೆ. ಮಕ್ಕಳು ಸಹ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು’ ಎಂದು ಸ್ವಾಮೀಜಿ ಹೇಳಿದರು.

ಬಾಯಿ ಚಪಲದ ಹಬ್ಬ ಕೈಬಿಡಿ: ‘ನಮ್ಮ ಸಮಾಜ ದುಡಿದು ತಿನ್ನುವ ಶ್ರಮಿಕ ಸಮಾಜ. ದುಡಿದಿದ್ದನ್ನು ಹೇಗೆ ಖರ್ಚು ಮಾಡಬೇಕೆಂಬ ಜ್ಞಾನ ಕಡಿಮೆಯಿದೆ. ಬಲಿ ನೀಡುವ ಹಾಗೂ ಬಾಯಿ ಚಪಲದ ಹಬ್ಬಕ್ಕೆ ಕಡಿವಾಣ ಹಾಕುವವರೆಗೂ ಸಮಾಜವು ಆರ್ಥಿಕವಾಗಿ ಬದಲಾವಣೆ ಆಗುವುದಿಲ್ಲ’ ಎಂದು ಸ್ವಾಮೀಜಿ ತಿಳಿಸಿದರು.

‘ಹಾವನೂರಿನಲ್ಲಿ ಪ್ರತಿ ವರ್ಷ ದುರ್ಗಮ್ಮ ದೇವಿ ಜಾತ್ರೆಯಾಗುತ್ತದೆ. ಬ್ರಾಹ್ಮಣ್ಮರು ಹಾಗೂ ಮೇಲ್ಮರ್ಗದ ಯಾರೊಬ್ಬರೂ ಈ ಹಬ್ಬ ಆಚರಿಸುವುದಿಲ್ಲ. ಹಿಂದುಳಿದ ಶೋಷಿತ ಸಮಾಜದವರೇ ಜಾತ್ರೆ ಮಾಡುತ್ತಾರೆ. ಅಲ್ಲಿಯ ಬಲಿ ಹಾಗೂ ಬಾಯಿ ಚಪಲದ ಆಚರಣೆ ನೋಡಿದರೆ, ಇಂಥ ಜಾತ್ರೆ ಬೇಕಾ ಎಂದೆನಿಸುತ್ತದೆ. ಬಲಿ ಕೇಳುವ ದೇವರು ದೇವರಲ್ಲ. ಪತ್ರೆ ಸಮರ್ಪಿಸಿದರೂ ದೇವರು ಸ್ವೀಕರಿಸುತ್ತಾರೆ. ಮೌಢ್ಯದ ಆಚರಣೆಗೆ ಮಾಡುವ ಖರ್ಚನ್ನು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡಿ. ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಮಾಜ ಬೆಳೆಯುತ್ತದೆ’ ಎಂದರು.

‘ಸರ್ಕಾರಿ ನೌಕರರು, ಸಮಾಜದ ಮೀಸಲಾತಿಯಡಿ ಕೆಲಸ ಪಡೆದಿದ್ದಾರೆ. ಸಮಾಜದ ಋಣ ತೀರಿಸಬೇಕು. ಮಲತಾಯಿ ಧೋರಣೆ ಮಾಡಬಾರದು’ ಎಂದರು.

ಬೆಂಗಳೂರಿನ ಇನ್‌ಸೈಟ್ಸ್ ಐಎಎಸ್ ತರಬೇತಿ ಸಂಸ್ಥೆಯ ಸಂಸ್ಥಾಪಕ ವಿನಯಕುಮಾರ ಜಿ.ಬಿ. ಅವರು ಉಪನ್ಯಾಸ ನೀಡಿದರು.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಶಾಸಕರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಹಾವೇರಿ ತಾಲ್ಲೂಕು ಶ್ರೀ ಕನಕ ನೌಕರರ ಸಂಘದ ಅಧ್ಯಕ್ಷ ಎಸ್.ಎನ್. ಕಂಬಳಿ, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಎಫ್‌.ಎನ್. ಗಾಜೀಗೌಡ್ರ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ನಿಂಗನಗೌಡ ಪಾಟೀಲ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ. ಮಲ್ಲಿಕಾರ್ಜುನ, ವೈದ್ಯ ಡಾ. ರಾಘವೇಂದ್ರ ಜಿಗಳಿಕೊಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲೇಶ ಕರಿಗಾರ, ತಹಶೀಲ್ದಾರ್‌ ಕೆ. ಶರಣಮ್ಮ, ರೇಣುಕಾ ಎಸ್‌.ಕೆ., ವಿಜಯಕುಮಾರ ಮುದಕಣ್ಣನವರ ಇದ್ದರು.

ಕಾಗಿನೆಲೆಯಲ್ಲಿ ನವೆಂಬರ್ 8ರಂದು ಕನಕ ರಥೋತ್ಸವ ಹಾಗೂ ಕನಕದಾಸರ ಜಯಂತಿ ಆಚರಿಸಲಾಗುತ್ತಿದ್ದು ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು
ನಿರಂಜನಾನಂದಪುರಿ ಸ್ವಾಮೀಜಿ ಕಾಗಿನೆಲೆ ಕನಕ ಗುರುಪೀಠ
ಹಾವೇರಿ ಹೃದಯ ಭಾಗದಲ್ಲಿ ಕನಕ ಗುರುಪೀಠದ ಶಾಖಾ ಮಠದ ಅಗತ್ಯವಿದೆ. ಮಠ ಸ್ಥಾಪನೆಗೆ ಸ್ವಾಮೀಜಿ ಹಾಗೂ ಸಮಾಜದವರು ಯೋಚಿಸಬೇಕು
ಮಲ್ಲೇಶ ಕರಿಗಾರ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.