ADVERTISEMENT

ಪ್ರಜಾವಾಣಿ ವರದಿ ಫಲಶ್ರುತಿ: ‘ಪಶು ಸಂಜೀವಿನಿ’ ಆಂಬುಲೆನ್ಸ್‌ಗಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2023, 14:08 IST
Last Updated 14 ಸೆಪ್ಟೆಂಬರ್ 2023, 14:08 IST
   

ಹಾವೇರಿ: ರೈತರ ಮನೆ ಬಾಗಿಲಿಗೆ ತೆರಳಿ, ಪಶುಗಳಿಗೆ ಸಕಾಲದಲ್ಲಿ ತುರ್ತು ಚಿಕಿತ್ಸೆ ನೀಡುವ ‘ಪಶು ಸಂಜೀವಿನಿ’ ಯೋಜನೆಯ ಹೊಸ ಆಂಬುಲೆನ್ಸ್‌ಗಳಿಗೆ ರಾಜ್ಯದ ವಿವಿಧೆಡೆ ಹಂತ–ಹಂತವಾಗಿ ಚಾಲನೆ ನೀಡಲಾಗುತ್ತಿದೆ.

ಕೇಂದ್ರ ಸರ್ಕಾರದಿಂದ ₹ 44 ಕೋಟಿ ಅನುದಾನದಲ್ಲಿ ರಾಜ್ಯಕ್ಕೆ ಒಟ್ಟು 290 ಪಶು ಸಂಜೀವಿನಿ ಆಂಬುಲೆನ್ಸ್‌ಗಳು ಮಂಜೂರಾಗಿದ್ದವು. 2022ರ ಜುಲೈನಲ್ಲಿ ರಾಜ್ಯ ಸರ್ಕಾರ ಪ್ರತಿ ತಾಲ್ಲೂಕಿಗೆ ಒಂದು ಆಂಬುಲೆನ್ಸ್‌ ಸೌಲಭ್ಯ ನೀಡಿತ್ತು.

‘ಪಶುಗಳಲ್ಲಿ ಕಾಣಿಸಿಕೊಳ್ಳುವ ಕೆಚ್ಚಲಬಾವು, ಪ್ರಸವ ಚಿಕಿತ್ಸೆ ಮತ್ತು ಗರ್ಭಪಾತ, ಹೊಟ್ಟೆ ಉಬ್ಬರ, ಅಪಘಾತ, ವಿಷಪೂರಿತ ಮೇವು ಸೇವನೆ, ಜೇನು ಹುಳುಗಳ ಕಡಿತ, ಗಂಟಲು ಬೇನೆ, ಚಪ್ಪೆ ರೋಗ, ಮೂಳೆ ಮುರಿತ, ಉಣ್ಣೆ ಜ್ವರ ಸೇರಿದಂತೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾನುವಾರುಗಳಿಗೆ ತುರ್ತು ಚಿಕಿತ್ಸೆ ಕೊಡಿಸಬಹುದು’ ಎಂದು ಹಾವೇರಿಯ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಎಸ್‌.ವಿ.ಸಂತಿ ತಿಳಿಸಿದ್ದಾರೆ.

ADVERTISEMENT

ಈ ಸಂಚಾರಿ ಪಶು ಚಿಕಿತ್ಸಾ ವಾಹನದಲ್ಲಿ ಆಧುನಿಕ ಶಸ್ತ್ರಚಿಕಿತ್ಸಾ ಘಟಕ, ಪ್ರಯೋಗಶಾಲೆ ಮತ್ತು ಸ್ಕ್ಯಾನಿಂಗ್‌ ಉಪಕರಣಗಳನ್ನು ಅಳವಡಿಸಲಾಗಿದೆ. ಆಂಬುಲೆನ್ಸ್‌ಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಮುಂಬೈ ಮೂಲದ ಎಜುಸ್ಪಾರ್ಕ್ ಇಂಟರ್‌ನ್ಯಾಷನಲ್‌ ಖಾಸಗಿ ಸಂಸ್ಥೆಗೆ ಟೆಂಡರ್‌ ನೀಡಲಾಗಿದೆ. ರೈತರು 1962 ಸಂಖ್ಯೆಗೆ ಕರೆ ಮಾಡಿದರೆ ಪಶು ಆಂಬುಲೆನ್ಸ್‌ಗಳು ಮನೆ ಬಾಗಿಲಿಗೆ ಬಂದು ಚಿಕಿತ್ಸೆ ಒದಗಿಸಲಿವೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ಆಂಬುಲೆನ್ಸ್‌ಗಳು ಒಂದು ವರ್ಷದಿಂದಲೂ ಸಂಚರಿಸದೆ ಅನುಪಯುಕ್ತವಾಗಿರುವ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಜುಲೈ 17ರಂದು ‘ರಾಸುಗಳ ಚಿಕಿತ್ಸೆಗೆ ಬಾರದ ಆಂಬುಲೆನ್ಸ್‌’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.