ಹಾವೇರಿ: ‘ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬ್ಯಾಗವಾದಿ ಗ್ರಾಮದಲ್ಲಿ ಬಾಲಕಿ ಕೂಡಿಟ್ಟು ಹಿಂಸಿಸಿದ್ದ ಪ್ರಕರಣದ ತನಿಖೆ ಮಾಡುತ್ತಿರುವ ಪೊಲೀಸರು, ಮತ್ತಷ್ಟು ಸಂತ್ರಸ್ತ ಬಾಲಕಿಯರ ಪ್ರಕರಣಗಳನ್ನು ಮುಚ್ಚಿಹಾಕಲು ಹುನ್ನಾರ ನಡೆಸುತ್ತಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಆರೋಪಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಮಾಯಕ ಬಾಲಕಿಯರು ಹಾಗೂ ಯುವತಿಯರನ್ನು ಆಮಿಷವೊಡ್ಡಿ ಕರೆತಂದು ಮಾರಾಟ ಮಾಡುವ ಜಾಲ ಸಕ್ರಿಯವಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು’ ಎಂದರು.
‘ಬಾಲಕಿಯ ಅಕ್ರಮ ಬಂಧನ ಪ್ರಕರಣದಲ್ಲಿ ಆರೋಪಿ ಲಕ್ಕವ್ವ ಬೆಟಗೇರಿ ಅವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆದರೆ, ಅವರ ಸಹೋದರ ಹಾಗೂ ಪುತ್ರಿ ಸಹ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಅವರೆಲ್ಲರನ್ನೂ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಬೇಕು’ ಎಂದು ಆಗ್ರಹಿಸಿದರು.
‘ಬ್ಯಾಗವಾದಿ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲಾಗಿದೆ. ಆರೋಪಿ ಲಕ್ಕವ್ವ ಹಾಗೂ ಸಂಬಂಧಿಕರು, ಹಲವು ವರ್ಷಗಳಿಂದ ಯುವತಿಯರ ಮಾರಾಟದಲ್ಲಿ ತೊಡಗಿದ್ದಾರೆ. ಎರಡು ವರ್ಷದಲ್ಲಿ ಆರೋಪಿಗಳ ಆಸ್ತಿಯೂ ದುಪ್ಪಟ್ಟಾಗಿದೆ. ಆರೋಪಿಯ ಕೃತ್ಯಕ್ಕೆ ತಾಲ್ಲೂಕಿನ ಪ್ರಭಾವಿಗಳು ಹಾಗೂ ಪೊಲೀಸರ ಬೆಂಬಲವಿರುವ ಆರೋಪವೂ ಇದೆ’ ಎಂದರು.
‘ಹುಬ್ಬಳ್ಳಿಯ 13 ವರ್ಷದ ಬಾಲಕಿಯ ಕೂದಲು ಕತ್ತರಿಸಿ ಕೊಠಡಿಯಲ್ಲಿ ಕೂಡಿ ಹಾಕಿದ್ದರು. ಹಲ್ಲೆ ಸಹ ಮಾಡಿದ್ದಾರೆ. ಈ ಬಾಲಕಿಗೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿದೆ. ಆದರೆ, ಚಿಕ್ಕಮಗಳೂರಿನ ಯುವತಿಯನ್ನೂ ಆರೋಪಿ ಅಕ್ರಮ ಬಂಧನದಲ್ಲಿಟ್ಟಿದ್ದರು. ಈ ವಿಷಯವನ್ನು ಪೊಲೀಸರು ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದಾರೆ. ಕೇವಲ 13 ವರ್ಷದ ಬಾಲಕಿಯ ಕೂಡಿ ಹಾಕಿದ್ದ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಉಳಿದ ಸಂತ್ರಸ್ತರ ಪ್ರಕರಣಗಳನ್ನು ಕಡೆಗಣಿಸಿದ್ದಾರೆ. ಇದನ್ನು ಪ್ರಶ್ನಿಸುವವರ ಮೇಲೆ ಹಲ್ಲೆ ನಡೆಯುತ್ತಿದೆ. ಇದರ ವಿರುದ್ಧ ಹೋರಾಟ ಮಾಡಲಾಗುವುದು’ ಎಂದು ಹೇಳಿದರು.
ಮುಖಂಡ ಶಿವರಾಜ ಸಜ್ಜನರ ಮಾತನಾಡಿ, ‘ಜಿಲ್ಲೆಯಾದ್ಯಂತ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಸರ್ಕಾರವೇ ಎಲ್ಲದಕ್ಕೂ ಕುಮ್ಮಕ್ಕು ನೀಡುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮೌನವಾಗಿದ್ದಾರೆ’ ಎಂದು ದೂರಿದರು.
‘ಜಿಲ್ಲೆಯಲ್ಲಿ ಅಪರಾಧಗಳು ಹೆಚ್ಚಾಗಿ, ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟರೂ ಕಾಂಗ್ರೆಸ್‌ನ ಆರು ಶಾಸಕರು ಮಾತನಾಡುತ್ತಿಲ್ಲ. ಜಿಲ್ಲೆಯಲ್ಲಿ ಜೂಜಾಟ, ಮಟ್ಕಾ, ಮದ್ಯ ಅಕ್ರಮ ಮಾರಾಟ ಹೆಚ್ಚಾಗಿದೆ. ಪ್ರತಿ ತಿಂಗಳು ಜೂಜುಕೋರರಿಂದ, ಪ್ರತಿ ತಾಲ್ಲೂಕಿನಲ್ಲಿ ₹ 25 ಲಕ್ಷ ಹಫ್ತಾ ಹೋಗುತ್ತಿದೆ. ಶಾಸಕರು, ಸಚಿವರು ಕೇವಲ ಆದಾಯ ನೋಡುತ್ತಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ’ ಎಂದು ಹೇಳಿದರು.
ಮುಖಂಡರಾದ ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ, ಶೋಭಾ ನಿಸ್ಸಿಮಗೌಡ್ರ, ಬಸವರಾಜ ಅರಬಗೊಂಡ, ಪರಮೇಶ್ವರಪ್ಪ ಮೇಗಳಮನಿ, ಗವಿಸಿದ್ದಪ್ಪ ದ್ಯಾಮಣ್ಣನವರ, ಜಗದೀಶ ಬಸೇಗೆಣ್ಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.