
ಹಾವೇರಿ: ‘ಸಾಕಷ್ಟು ಕಷ್ಟಗಳನ್ನು ಅನುಭವಿಸಿ ತ್ಯಾಗದ ಮೂಲಕ ನಮ್ಮ ಹಿರಿಯರು ಸಹಕಾರ ಸಂಘಗಳನ್ನು ಕಟ್ಟಿದ್ದಾರೆ. ಆದರೆ, ಇಂದು ಸಹಕಾರ ಕ್ಷೇತ್ರಕ್ಕೆ ರಾಜಕೀಯದ ಹಸ್ತಕ್ಷೇಪವಾಗಿದೆ. ಚುನಾವಣೆಗಳಲ್ಲಿ ಲಕ್ಷ ಹಾಗೂ ಕೋಟಿಗಟ್ಟಲೇ ಖರ್ಚು ಮಾಡಿ ಮತಗಳನ್ನು ಖರೀದಿಸುವ ಕೆಲಸ ನಡೆಯುತ್ತಿದೆ. ಈ ವರ್ತನೆ ಸಹಕಾರ ಸಂಘಗಳಿಗೆ ಮಾರಕವಾಗಿದೆ’ ಎಂದು ರಾಜ್ಯ ಸಹಕಾರ ಮಹಾಮಂಡಳ ನಿಯಮಿತದ ಅಧ್ಯಕ್ಷರೂ ಆಗಿರುವ ಶಾಸಕ ಜಿ.ಟಿ. ದೇವೇಗೌಡ ಅವರು ಕಳವಳ ವ್ಯಕ್ತಪಡಿಸಿದರು.
ಇಲ್ಲಿಯ ರಜನಿ ಸಭಾಂಗಣದಲ್ಲಿ ‘72ನೇ ಅಖಿಲ ಭಾರತ ಸಹಕಾರ ಸಪ್ತಾಹ’ದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ‘ಬೆಳಗಾವಿ ವಿಭಾಗ ಮಟ್ಟದ ಸಮಾವೇಶ’ದಲ್ಲಿ ಅವರು ಮಾತನಾಡಿದರು.
‘ಜನರ ಠೇವಣಿಯಿಂದಲೇ ಸಂಘಗಳು ನಡೆಯುತ್ತಿವೆ. ಸಂಘಗಳ ಅಧ್ಯಕ್ಷ ಹಾಗೂ ಅಧಿಕಾರಿಗಳ ಮೇಲೆ ನಂಬಿಕೆ ಇಟ್ಟು ಜನರು ಠೇವಣಿ ಇರಿಸುತ್ತಾರೆ. ಜನರ ನಂಬಿಕೆ ಉಳಿಸಿಕೊಂಡು ಸಂಘಗಳನ್ನು ಬೆಳೆಸುವ ಜವಾಬ್ದಾರಿ ಅಧ್ಯಕ್ಷ–ಅಧಿಕಾರಿಗಳ ಮೇಲಿದೆ. ಸಾಲ ಕೊಟ್ಟು ಅದನ್ನು ಸಮರ್ಪಕವಾಗಿ ವಸೂಲಿ ಮಾಡಿ, ಠೇವಣಿದಾರರಿಗೂ ಲಾಭ ನೀಡಿ ಸಂಘಗಳನ್ನು ಬೆಳೆಸಬೇಕು. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ದೇವರು ಒಳ್ಳೆಯದು ಮಾಡುತ್ತಾರೆ. ಜನರ ಹಣವನ್ನು ದುರುಪಯೋಗಪಡಿಸಿಕೊಂಡರೆ ಸರ್ವನಾಶವಾಗುತ್ತಾರೆ’ ಎಂದರು.
‘ಜಾತ್ಯಾತೀತ, ಪಕ್ಷಾತೀತವಾದ ಸಹಕಾರ ಸಂಘಗಳಲ್ಲಿ ಸ್ವಾಯತ್ತತೆ ಹಾಗೂ ಸ್ವಾತಂತ್ರ್ಯ ಇರಬೇಕು. ಆದರೆ, ಈಗ ರಾಜಕೀಯ ಹಾಗೂ ಸರ್ಕಾರದ ಹಸ್ತಕ್ಷೇಪವಾಗುತ್ತಿದೆ. ಸಹಕಾರ ಸಂಘಗಳ ಚುನಾವಣೆಗೆ ನಿಲ್ಲುತ್ತಿರುವ ರಾಜಕೀಯ ಹಿನ್ನೆಲೆಯುಳ್ಳವರು, ಸಾವಿರದಿಂದ ಕೋಟಿಗಟ್ಟಲೇ ಖರ್ಚು ಮಾಡಿ ಮತಗಳನ್ನು ಖರೀದಿಸುತ್ತಿದ್ದಾರೆ. ಅಷ್ಟು ಖರ್ಚು ಮಾಡಿ ಚುನಾಯಿತವಾಗುವ ಸದಸ್ಯ, ಸಂಘವನ್ನು ಹೇಗೆತಾನೇ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಾನೆ. ಅಂಥ ಸದಸ್ಯರ ವೈಯಕ್ತಿಕ ಹಿತಾಸಕ್ತಿಗಳಿಂದಾಗಿ ಸಂಘಗಳು ಅವನತಿಯತ್ತ ಸಾಗುತ್ತವೆ’ ಎಂದು ಹೇಳಿದರು.
‘ಕಣಗಿನಹಾಳದಲ್ಲಿ ಸಿದ್ದನಗೌಡ ಪಾಟೀಲ ಅವರು ಸ್ಥಾಪಿಸಿದ್ದ ಸಹಕಾರ ಸಂಘದಿಂದಾಗಿ ಇಂದು ದೇಶದಾದ್ಯಂತ ಸಹಕಾರ ಕ್ಷೇತ್ರವು ಆಲದ ಮರವಾಗಿ ಹಬ್ಬಿದೆ. ಜನರು ನಂಬಿಕೆ ಇಟ್ಟು ಠೇವಣಿ ಇರಿಸುತ್ತಿದ್ದಾರೆ. ಮಂಗಳೂರಿನಲ್ಲಿ ಒಂದೇ ಸಂಘದಲ್ಲಿ ₹ 500 ಕೋಟಿ ಠೇವಣಿ ಇರುವುದನ್ನು ಕೇಳಿ ಆಶ್ಚರ್ಯವಾಯಿತು. ಅಲ್ಲಿಯ ಪ್ರತಿಯೊಂದು ಮನೆಯ ಸದಸ್ಯರು, ಸಹಕಾರ ಸಂಘದಲ್ಲಿದ್ದಾರೆ. ಸದಸ್ಯರ ಬೆಳವಣಿಗೆ ಜೊತೆಯಲ್ಲಿ ಸಂಘವೂ ಬೆಳೆಯುತ್ತಿದೆ. ಇಂದಿನ ಕಾಲದಲ್ಲಿ ನಾವೆಲ್ಲರೂ ಪಕ್ಷಾತೀತವಾಗಿ ಸಂಘಗಳನ್ನು ಉಳಿಸಿ ಬೆಳೆಸಬೇಕು’ ಎಂದು ಕೋರಿದರು.
ಸಮಾವೇಶ ಉದ್ಘಾಟಿಸಿದ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ‘ಸಹಕಾರಿ ಸಂಸ್ಥೆಗಳು ಪ್ರಜಾಪಭುತ್ವದ ಶಾಲೆಗಳಿದ್ದಂತೆ. ನೈಜ ಪ್ರಜಾಪ್ರಭುತ್ವ ವ್ಯವಸ್ಥೆ ಸಹಕಾರಿ ಸಂಸ್ಥೆಯಲ್ಲಿದೆ. ಕಣಗಿನಹಾಳದ ಶಿದ್ದನಗೌಡ ಪಾಟೀಲ ಅವರು ಮುಂಬೈ ಪ್ರಾಂತ್ಯದಲ್ಲಿ ಸಹಕಾರ ಚಳವಳಿ ಆರಂಭಿಸಿದರು. ದೇಶಕ್ಕೆ ಸಹಕಾರ ಸಂಸ್ಥೆಗಳ ಮಹತ್ವ ತೋರಿಸಿಕೊಟ್ಟಿದ್ದಾರೆ’ ಎಂದರು.
ರಾಜ್ಯಮಟ್ಟದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಉತ್ತಮ ಸಹಕಾರಿ ಸಂಘಗಳನ್ನು ಗುರುತಿಸಿ ಆಡಳಿತ ಮಂಡಳಿಯವರನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ಇ-ಫ್ಯಾಕ್ಸ್ ಪ್ರಮಾಣಪತ್ರ ವಿತರಿಸಲಾಯಿತು. ಪಟ್ಟಣ ಬ್ಯಾಂಕ್‌ಗಳ ಮಹಾಮಂಡಳದ ವಾರಪತ್ರಿಕೆ ಅನಾವರಣಗೊಳಿಸಲಾಯಿತು.
ಶಾಸಕ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಬಸವರಾಜ ಶಿವಣ್ಣನವರ, ಪ್ರಸಾದ್ ಅಬ್ಬಯ್ಯ, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಹಾವೆಮುಲ್ ಅಧ್ಯಕ್ಷ ಮಂಜನಗೌಡ ಪಾಟೀಲ, ಹಾವೇರಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶಿವಾನಂದ ಸಂಗಾಪುರ, ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಬಸವರಾಜ ಅರಬಗೊಂಡ, ಬೆಳಗಾವಿ ವಿಭಾಗದ ಸಹಕಾರ ಸಂಘಗಳ ಸಂಯುಕ್ತ ನಿಬಂಧಕ ಕಲ್ಲಪ್ಪ ಓಬಣ್ಣಗೋಳ ಇದ್ದರು.
ಸಹಕಾರ ಕ್ಷೇತ್ರದಲ್ಲಿ ಸಂಘಗಳ ಆಡಳಿತ ಮಂಡಳಿಯವರು ವೈಯಕ್ತಿಕ ಸ್ವಾರ್ಥ ಬಿಟ್ಟು ಕೆಲಸ ಮಾಡಬೇಕು. ಅಂದಾಗ ಮಾತ್ರ ಸಂಘಗಳು ಬೆಳೆಯುತ್ತವೆಬಸವರಾಜ ಹೊರಟ್ಟಿ ವಿಧಾನಪರಿಷತ್ ಸಭಾಪತಿ
ಸಹಕಾರ ಕ್ಷೇತ್ರದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ನ. 14ರಿಂದ ಸಪ್ತಾಹ ಹಮ್ಮಿಕೊಳ್ಳಲಾಗಿದ್ದು ನ. 20ರಂದು ಸಮಾರೋಪ ಸಮಾರಂಭ ಜರುಗಲಿದೆಜಿ.ಟಿ. ದೇವೇಗೌಡ ರಾಜ್ಯ ಸಹಕಾರ ಮಹಾಮಂಡಳ ನಿಯಮಿತದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.