ADVERTISEMENT

ಮುಂಬೈ ಕೇಂದ್ರಡಾಳಿತ ಪ್ರದೇಶವಾಗಲಿ: ಪ್ರವೀಣಕುಮಾರ ಶೆಟ್ಟಿ ಹೇಳಿಕೆ

ಕರವೇ ರಾಜ್ಯ ಘಟಕದ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 16:24 IST
Last Updated 17 ಮಾರ್ಚ್ 2021, 16:24 IST
ಪ್ರವೀಣಕುಮಾರ್‌ ಶೆಟ್ಟಿ
ಪ್ರವೀಣಕುಮಾರ್‌ ಶೆಟ್ಟಿ   

ಹಾವೇರಿ: ‘ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲು ಬಿಡುವುದಿಲ್ಲ. ಮಾಡುವುದಾದರೆ ಮುಂಬೈ ಅನ್ನು ಮಾಡಬೇಕು. ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ಸೂಕ್ತ ರಕ್ಷಣೆ ನೀಡಬೇಕು’ ಎಂದು ಕರವೇ ಅಧ್ಯಕ್ಷ ಪ್ರವೀಣಕುಮಾರ‌ ಶೆಟ್ಟಿ ಆಗ್ರಹಿಸಿದರು.

ನಗರದಲ್ಲಿ ಬುಧವಾರ ‘ಪ್ರಜಾವಾಣಿ’ಯೊಂದಿಗೆ ಅವರು ಮಾತನಾಡಿ, ‘ಹಳದಿ, ಕೆಂಪು ಬಣ್ಣದ ಶಾಲು ಹಾಕಿಕೊಂಡು ಓಡಾಡುವವರನ್ನು ಕಂಡ ಕಂಡಲ್ಲಿ ಥಳಿಸುತ್ತೇವೆ’ ಎಂದು ಎಂಇಎಸ್‌ನವರು ನೀಡಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಕರ್ನಾಟಕದಲ್ಲಿ ಗಂಡುಮಕ್ಕಳೇ ಇಲ್ಲ ಎಂದು ತಿಳಿದಿರುವ ಅವರಿಗೆ, ಕನ್ನಡಿಗರ ಸ್ವಾಭಿಮಾನವನ್ನು ತೋರಿಸಲು ನಿರ್ಧರಿಸಿದ್ದೇವೆ ಎಂದರು.

ಮಾರ್ಚ್‌ 18ರಂದು ‘ಸ್ವಾಭಿಮಾನಿ ಕನ್ನಡಿಗರ ಜಾಥಾ’ವನ್ನು ಹಮ್ಮಿಕೊಂಡಿದ್ದು, ಬೆಳಗಾವಿಯ ಕಿತ್ತೂರು ಚನ್ನಮ್ಮ ಸರ್ಕಲ್‌ನಿಂದ ವಾಹನಗಳ ಮೂಲಕ ಹೊರಟು ಮಹಾರಾಷ್ಟ್ರದ ಗಡಿ ಪ್ರದೇಶಗಳಿಗೆ ಹೋಗಿ ಅಲ್ಲಿ ಕನ್ನಡದ ಬಾವುಟವನ್ನು ಹಾರಿಸುತ್ತೇವೆ. ಕನ್ನಡಿಗರ ಸ್ವಾಭಿಮಾನವನ್ನು ಎತ್ತಿ ಹಿಡಿಯುತ್ತೇವೆ.ಭಾಷೆ ಹೆಸರಿನಲ್ಲಿ ಪದೇ ಪದೇ ಕನ್ನಡಿಗರ ಮೇಲೆ ದೌರ್ಜನ್ಯ ಮಾಡುವವರಿಗೆ ಸರಿಯಾದ ಪಾಠ ಕಲಿಸುತ್ತೇವೆ ಎಂದರು.

ADVERTISEMENT

‘ಕನ್ನಡಿಗರ ಪರ ಹೋರಾಟ ಮಾಡಿದಾಗಲೆಲ್ಲ ನಮಗೆ ಲಾಠಿ ಏಟು, ಜೈಲು ವಾಸದ ಶಿಕ್ಷೆ ಸಿಕ್ಕಿದೆ. ಮೂರೂ ಪಕ್ಷದವರಿಗೆ (ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌) ಮರಾಠಿಗರ ಮತಗಳು ಬೇಕಾಗಿವೆಯೇ ಹೊರತು, ಕನ್ನಡಿಗರ ಹಿತ ಬೇಕಿಲ್ಲ. ಅದೇ ರೀತಿ ಶಿವಸೇನೆಯವರು ಹಿಂದುತ್ವವನ್ನು ಬಿಟ್ಟು, ಭಾಷಾ ವಿಷಯದಲ್ಲಿ ಕನ್ನಡಿಗರ ಜತೆ ಚೆಲ್ಲಾಟವಾಡುವುದು ಸಲ್ಲದು ಎಂದು ಕಿಡಿಕಾರಿದರು.

‘ನಮ್ಮ ಸಂಸದರು ಲೋಕಸಭೆಯಲ್ಲಿ ಧ್ವನಿ ಎತ್ತಬೇಕು ಮತ್ತು ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡುವ ಮೂಲಕ ಉದ್ಧವ್‌ ಠಾಕ್ರೆ ಅವರನ್ನು ಅಧಿಕಾರದಿಂದ ಕಿತ್ತೊಗೆಯಬೇಕಿದೆ. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಬೆಂಬಲ ನೀಡಿರುವ ಕಾಂಗ್ರೆಸ್‌ನವರು ಕೂಡಲೇ ಬೆಂಬಲ ವಾಪಸ್‌ ಪಡೆಯುವಂತೆ ಸೋನಿಯಾ ಗಾಂಧಿಯವರಲ್ಲಿ ಒತ್ತಾಯಿಸುತ್ತೇವೆ’ ಎಂದರು.

ಮಹಾರಾಷ್ಟ್ರಕ್ಕೆ ಸೇರಿರುವ ಸೊಲ್ಲಾಪುರದವರು ನಮ್ಮನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳಿ ಎಂದು ಈ ಹಿಂದೆ ಮನವಿ ಮಾಡಿದ್ದರು. ಅವರು ನೋವನ್ನು ಇದುವರೆಗೂ ನಮ್ಮ ರಾಜ್ಯ ಸರ್ಕಾರದ ಯಾವ ಸಚಿವರೂ ಕೇಳಿಲ್ಲ. ಹೀಗಾಗಿ ರಾಷ್ಟ್ರೀಯ ಪಕ್ಷಗಳನ್ನು ನಂಬಿ ಕೈಕಟ್ಟಿ ಕೂರಲು ಸಾಧ್ಯವಿಲ್ಲ. ಕನ್ನಡಿಗರ ಸ್ವಾಭಿಮಾನದ ರಕ್ಷಣೆ ನಮ್ಮ ಹೊಣೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.