
ಭ್ರೂಣ
ಹಾವೇರಿ: ಜಿಲ್ಲೆಯ ಹಾನಗಲ್ ತಾಲ್ಲೂಕಿನ ಹಸನಾಬಾದಿ ಗ್ರಾಮದಲ್ಲಿ ಗರ್ಭಿಣಿಯಾಗಿದ್ದ ಮಹಿಳೆಯ ಮೇಲೆ ಅವರ ಪತಿಯೇ ಹಲ್ಲೆ ಮಾಡಿದ್ದು, ಇದರಿಂದಾಗಿ ಹೊಟ್ಟೆಯಲ್ಲಿಯೇ ಭ್ರೂಣ ಮೃತಪಟ್ಟಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಪ್ರೀತಿಸಿ ಮದುವೆಯಾಗಿದ್ದ ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು. ಪತಿಯ ತೀವ್ರ ಹಲ್ಲೆಯಿಂದಾಗಿ ಪತ್ನಿಯ ಹೊಟ್ಟೆಯಲ್ಲಿದ್ದ ಭ್ರೂಣ ಮೃತಪಟ್ಟಿರುವುದಾಗಿ ಸಂಬಂಧಿಕರು ದೂರು ನೀಡಿದ್ದಾರೆ. ಅದರನ್ವಯ ಪತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಹಾನಗಲ್ ಠಾಣೆ ಪೊಲೀಸರು ತಿಳಿಸಿದರು.
‘ಸಂತ್ರಸ್ತ ಮಹಿಳೆ, ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನವರು. ಹಾನಗಲ್ ತಾಲ್ಲೂಕಿನ ಹಸನಾಬಾದಿ ಗ್ರಾಮದ ಆರೋಪಿಯನ್ನು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರೂ ಸಲುಗೆಯಿಂದ ಇದ್ದರು. ಕೆಲ ತಿಂಗಳ ಹಿಂದೆಯಷ್ಟೇ ಸಂತ್ರಸ್ತ ಮಹಿಳೆ ಗರ್ಭಿಣಿಯಾಗಿದ್ದರು. ಈ ವಿಷಯ ತಿಳಿದ ಮನೆಯವರು, ಆರೋಪಿಯ ಮನೆಯವರಿಗೆ ವಿಚಾರ ತಿಳಿಸಿದ್ದರು. ನಂತರ, ಎರಡೂ ಕುಟುಂಬದವರು ಪರಸ್ಪರ ಒಪ್ಪಿ ಮದುವೆ ಮಾಡಿಸಿದ್ದರು. ಆದರೆ, ಮದುವೆ ನಂತರ ಮಹಿಳೆ ಮೇಲೆ ಆರೋಪಿ ನಿರಂತರವಾಗಿ ಹಲ್ಲೆ ಮಾಡುತ್ತಿದ್ದ. ಲಾಠಿ ಮತ್ತು ಕೊಡಲಿಯಿಂದ ಹೊಡೆಯುತ್ತಿದ್ದನೆಂದು ಸಂತ್ರಸ್ತೆ ಆರೋಪಿಸುತ್ತಿದ್ದಾರೆ’ ಎಂದು ಹೇಳಿದರು.
‘ಪತಿಯ ಹಲ್ಲೆಯಿಂದ ಹೊಟ್ಟೆಯಲ್ಲಿದ್ದ ಭ್ರೂಣ ಮೃತಪಟ್ಟಿದೆ. ಗಂಡ ಮತ್ತು ಆತನ ಮನೆಯವರೇ ಇದಕ್ಕೆ ಕಾರಣ ಎಂಬುದಾಗಿ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಹಲ್ಲೆಯ ವಿಷಯವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾರೆ ಎಂದೂ ಆರೋಪಿಸಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.