
ಬ್ಯಾಡಗಿ: ಪಾಲಕರು ಇಂಗ್ಲೀಷ್ ವ್ಯಾಮೋಹ ಬಿಟ್ಟು ಮಕ್ಕಳನ್ನು ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಸೇರಿಸಿದರೆ ಮಕ್ಕಳು ಅದನ್ನು ಸರಳವಾಗಿ ಅರ್ಥೈಸಿಕೊಳ್ಳಲು ಸಾಧ್ಯವಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಪಟ್ಟಣದ ಎಸ್‌ಜೆಜೆಎಸಂ ತಾಲ್ಲೂಕು ಕ್ರೀಡಾಂಗಣದಲ್ಲಿ ಶನಿವಾರ 70ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಭಾಷೆ ಎಲ್ಲಾ ಭಾಷೆಗಳಿಗಿಂತ ಶ್ರೇಷ್ಠವಾಗಿದ್ದು, 8 ಜ್ಞಾನಪೀಠ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ನಾಡಿನ ನೆಲ, ಜಲ ಹಾಗೂ ಸಂಸ್ಕೃತಿಯ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ.ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಜನಸಾಮಾನ್ಯರ ಆರ್ಥಿಕ ಮಟ್ಟ ಹೆಚ್ಚಿಸಿದೆ. ಅಲ್ಲದೆ ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ ₹700 ಕೋಟಿಗೂ ಹೆಚ್ಚಿನ ಅನುದಾನ ಬಳಕೆಯಾಗಿದೆ. ಇಲ್ಲಿಯ ಜನರಿಗೆ ಆಶ್ರಯ ಯೋಜನೆಯಡಿ ವಿವೇಶನ ಸೇರಿದಂತೆ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಂಕಲ್ಪ ಮಾಡಲಾಗಿದೆ ಎಂದರು.
ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ಚಂದ್ರಶೇಖರ ನಾಯಕ ಮಾತನಾಡಿ ರಾಜ್ಯೋತ್ಸವ ಆಚರಿಸುವುದು ಕನ್ನಡಾಭಿಮಾನದ ಸಂಕೇತವಾಗಿದೆ ಎಂದರು.
ಗಮನಸೆಳೆದ ಮಕ್ಕಳ ನೃತ್ಯ: ಎನ್‌ಬಿಬಿ ಲಾಯನ್ಸ್ ಹಿರಿಯ ಪ್ರಾಥಮಿಕ ಶಾಲೆ, ಮಹಾಶಯ ಧರ್ಮಫಾಲ್ ಪ್ರೌಢ ಶಾಲೆ, ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಹಾಗೂ ಎಸ್‌ಎಸ್‌ಪಿಎನ್ ಪ್ರೌಢ ಶಾಲೆಯ ವಿದ್ಯಾರ್ಥಿಗಳು ನಾಡು ನುಡಿ ಕುರಿತು ನೃತ್ಯ ರೂಪಕಗಳನ್ನು ಪ್ರದರ್ಶಿಸಿದರು. ಉತ್ತಮ ಪ್ರದರ್ಶನ ನೀಡಿದ ಮಕ್ಕಳನ್ನು ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಈ ವೇಳೆ ಪುರಸಭೆ ಉಪಾಧ್ಯಕ್ಷ ಸುಭಾಷ ಮಾಳಗಿ, ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಫಕ್ಕೀರಮ್ಮ ಛಲವಾದಿ, ಸರೋಜಾ ಉಳ್ಳಾಗಡ್ಡಿ, ಈರಣ್ಣ ಬಣಕಾರ, ಗಾಯತ್ರಿ ರಾಯ್ಕರ, ನಗರ ಆಶ್ರಯ ಸಮತಿ ಅಧ್ಯಕ್ಷ ಅಬ್ದುಲ್ ಮುನ್ನಾಫ್ ಎರೆಸೀಮೆ, ಸದಸ್ಯರಾದ ಗಿರೀಶಸ್ವಾಮಿ ಇಂಡಿಮಠ, ದುರ್ಗೆಶ ಗೋಣೆಮ್ಮನವರ, ಮಜೀದ್ ಮುಲ್ಲಾ, ತಾ.ಪಂ.ಇಒ ಕೆ.ಎಂ.ಮಲ್ಲಿಕಾರ್ಜುನ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ.ಕೋಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಆಕರ್ಷಣೆಗೊಂಡ ನೆಹರು ವೃತ್ತ: ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಪಟ್ಟಣದ ನೆಹರೂ ವೃತ್ತವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಕನ್ನಡ ಪರ ಸಂಘಟನೆ ಕಾರ್ಯಕರ್ತರು ರಾತ್ರಿಯಿಂದ ಕೇಸರಿ ಹಾಗೂ ಹಳದಿ ಬ್ಯಾನರ್‌ಗಳುಹಾಕುವ ಮೂಲಕ ಕನ್ನಡದ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು. ಅಟೊ ಹಾಗೂ ಮತ್ತಿತರ ವಾಹನಗಳಲ್ಲಿ ಕನ್ನಡದ ಬಾವುಟಗಳು ರಾರಾಜಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.