ADVERTISEMENT

ಸಾಹಿತ್ಯ ಭವನ ನಿರ್ಮಾಣಕ್ಕೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 16:06 IST
Last Updated 17 ಏಪ್ರಿಲ್ 2021, 16:06 IST
ವೆಂಕಟೇಶ ಈಡಿಗರ
ವೆಂಕಟೇಶ ಈಡಿಗರ   

ಹಾವೇರಿ: ಸರ್ಕಾರದ ಅನುದಾನದ ಜೊತೆಗೆ ಕಸಾಪ ಸದಸ್ಯರು ಮತ್ತು ಕನ್ನಡಾಭಿಮಾನಿಗಳಿಂದ ದೇಣಿಗೆ ಸಂಗ್ರಹಿಸಿ ಹಾವೇರಿ ಜಿಲ್ಲಾ ಕೇಂದ್ರದಲ್ಲಿ ‘ಕನ್ನಡ ಸಾಹಿತ್ಯ ಭವನ’ ನಿರ್ಮಾಣಕ್ಕೆ ಆದ್ಯತೆ ನೀಡುತ್ತೇನೆ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ವೆಂಕಟೇಶ ಈಡಿಗರ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಎಲ್ಲ ತಾಲ್ಲೂಕು ಕೇಂದ್ರಗಳಲ್ಲು ಸಾಹಿತ್ಯ ಭವನ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದೇನೆ. ಕವಿಗಳು ಮತ್ತು ಸಾಹಿತಿಗಳಿಗೆ ‘ಕಮ್ಮಟ’ ಆಯೋಜಿಸಿ, ನಿರಂತರವಾಗಿ ಸಾಹಿತ್ಯಿಕ ಚಟುವಟಿಕೆ ನಡೆಸಲಾಗುವುದು. ಹೊಸ ಪೀಳಿಗೆ ಮತ್ತು ಹಳೆ ತಲೆಮಾರಿನ ಎಲೆ ಮರೆಯ ಕಾಯಿಯಂತಿರುವ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕೆಲಸ ಮಾಡುತ್ತೇನೆ ಎಂದರು.

ಹಾವೇರಿ ಜಿಲ್ಲೆಯಲ್ಲಿರುವ ಕಸಾಪ ಸದಸ್ಯತ್ವವನ್ನು 8,900ರಿಂದ 40 ಸಾವಿರಕ್ಕೆ ಏರಿಕೆ ಮಾಡಲು ಶ್ರಮಿಸುತ್ತೇನೆ. ಚುನಾವಣೆಯ ನಂತರ ಹಳ್ಳಿ–ಹಳ್ಳಿಗೂ ಭೇಟಿ ನೀಡಿ, ‘ಸದಸ್ಯತ್ವ ಅಭಿಯಾನ’ ಹಮ್ಮಿಕೊಳ್ಳುತ್ತೇನೆ. ಜಿಲ್ಲೆಯ ವೈವಿಧ್ಯಮಯ ಕಲೆ ಮತ್ತು ಸಾಹಿತ್ಯಿಕ ಪರಂಪರೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವುದು ಹಾಗೂ ಗ್ರಾಮೀಣ ಭಾಗದಲ್ಲಿ ‘ಗ್ರಂಥಾಲಯ’ ನಿರ್ಮಿಸುವ ಗುರಿ ಹೊಂದಿದ್ದೇನೆ ಎಂದು ಹೇಳಿದರು.

ADVERTISEMENT

ಸಾಹಿತ್ಯ ಕ್ಷೇತ್ರದಲ್ಲಿ 1994ರಿಂದಇಲ್ಲಿಯವರೆಗೆ 36 ಪುಸ್ತಕಗಳನ್ನು ರಚಿಸಿದ್ದೇನೆ. ನಟ, ನಿರ್ದೇಶಕ, ಸಂಗೀತಗಾರ ಹಾಗೂ ಸಮಾಜ ಸೇವಕನಾಗಿ ಗುರುತಿಸಿಕೊಂಡಿದ್ದೇನೆ. ಕನ್ನಡ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಶಿವಾನಂದ ಸಂಡೂರ, ಚಂದ್ರಪ್ಪ ಬಾರಂಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.