ADVERTISEMENT

‘ನೆರೆ’ ಅವ್ಯವಹಾರ: ತನಿಖೆ ಹೊಣೆ ಎಸ್ಪಿಗೆ

ಇಂದು ಎಫ್‌ಐಆರ್‌ ದಾಖಲು: ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 5:40 IST
Last Updated 17 ಫೆಬ್ರುವರಿ 2020, 5:40 IST
ಅವ್ಯವಹಾರದ ತನಿಖೆ ನಡೆಸಲು ಗೃಹಸಚಿವರು ಆದೇಶ ನೀಡಿರುವ ಬಗ್ಗೆ ಜ.5ರಂದು ಪ್ರಕಟವಾದ ವರದಿ
ಅವ್ಯವಹಾರದ ತನಿಖೆ ನಡೆಸಲು ಗೃಹಸಚಿವರು ಆದೇಶ ನೀಡಿರುವ ಬಗ್ಗೆ ಜ.5ರಂದು ಪ್ರಕಟವಾದ ವರದಿ   

ಹಾವೇರಿ: ಜಿಲ್ಲೆಯ ನೆರೆ ಪರಿಹಾರ ವಿತರಣೆಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಲು ಫೆ.17ರಂದು ಎಫ್‌ಐಆರ್‌ ದಾಖಲು ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಹೇಳಿದರು.

‘ಪ್ರಜಾವಾಣಿ’ಯೊಂದಿಗೆ ಭಾನುವಾರ ಅವರು ಮಾತನಾಡಿ, ನಾವು ಈಗಾಗಲೇ ತನಿಖೆ ನಡೆಸಿದ್ದೇವೆ. ಮೇಲ್ನೋಟಕ್ಕೆ ಅವ್ಯವಹಾರಗಳು ನಡೆದಿರುವುದು ಪತ್ತೆಯಾಗಿದೆ. ಹಾಗಾಗಿ ಎಲ್ಲ ದೃಷ್ಟಿಕೋನಗಳಿಂದ ನಿಖರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಉದ್ದೇಶದಿಂದ ಪ್ರಕರಣವನ್ನು ಪೊಲೀಸರಿಗೆ ವಹಿಸಲಾಗುವುದು. ಅವ್ಯವಹಾರ ಖಚಿತವಾದರೆ, ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಾಗಲಿದೆ’ ಎಂದು ಅವರು ತಿಳಿಸಿದರು.

ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ನೆರೆ ಪರಿಹಾರ ವಿತರಣೆಯಲ್ಲಿ ಯಾವ ರೀತಿ ಅಕ್ರಮ ಅಥವಾ ಅವ್ಯವಹಾರ ನಡೆದಿದೆ, ಮಾಹಿತಿ ದಾಖಲಿಸುವಾಗ ಯಾವ ರೀತಿ ತಪ್ಪುಗಳು ನುಸುಳಿವೆ, ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಎಂಬ ಬಗ್ಗೆಯ ತನಿಖೆ ಬೆಳಕು ಚೆಲ್ಲಲಿದೆ. ಇದರಲ್ಲಿ ‘ಮಾಸ್ಟರ್‌ ಮೈಂಡ್‌’ ಆಗಿ ಕೆಲವರು ವ್ಯವಸ್ಥಿತವಾಗಿ ಕಾನೂನು ದುರ್ಬಳಕೆ ಮಾಡಿಕೊಂಡು, ನೆರೆ ಪರಿಹಾರಕ್ಕೆ ಕನ್ನ ಹಾಕಿದ್ದಾರೆ. ಸೈಬರ್‌ ಕ್ರೈಮ್‌ ದೃಷ್ಟಿಕೋನದಿಂದಲೂ ತನಿಖೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಡಾಟಾ ಎಂಟ್ರಿ ಮಾಡುವವರು, ಮಧ್ಯವರ್ತಿಗಳು, ಅನರ್ಹ ಫಲಾನುಭವಿಗಳು ಸೇರಿದಂತೆ ಯಾರ‍್ಯಾರು ಗುಂಪಾಗಿ ಶಾಮೀಲಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕಿದೆ. ಅರ್ಜಿ ಹಾಕದೇ ಇರುವವರ ಅಕೌಂಟ್‌ಗೂ ದುಡ್ಡು ಹೋಗಿರುವ ಸಾಧ್ಯತೆ ಇದೆ. ಕೆಲವು ಪ್ರಕರಣಗಳಲ್ಲಿ ಆಧಾರ್‌ ಕಾರ್ಡ್‌ ಹೆಸರು ಮತ್ತು ಪಹಣಿಯಲ್ಲಿರುವವರ ಹೆಸರು ಹೊಂದಾಣಿಕೆ ಆಗುತ್ತಿಲ್ಲ. ಅನರ್ಹರಿಂದ ಹಣ ವಾಪಸ್‌ ಪಡೆಯಲು ಅವಕಾಶವಿದೆ. ಅಧಿಕಾರಿಗಳು ಅಕ್ರಮ ಎಸಗಿರುವುದು ಸಾಬೀತಾದರೆ, ಅಂಥವರ ವಿರುದ್ಧ ಕ್ರಮಕ್ಕೆ ಕಂದಾಯ ಇಲಾಖೆ ಆಯುಕ್ತರಿಗೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.

ಗೃಹಸಚಿವರ ಆದೇಶ:

‘ಒಂದೇ ಕುಟುಂಬಕ್ಕೆ ಅಪ್ಪ–ಮಗ, ಸೊಸೆ ಹೆಸರಿನಲ್ಲಿ ಎರಡು ಮೂರು ಬಾರಿ ಬೆಳೆ ಹಾನಿ ಪರಿಹಾರ ವಿತರಣೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹಾಗಾಗಿ ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ಸಮಿತಿ ಕರೆಸಿ, ತನಿಖೆ ನಡೆಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರುಹಾವೇರಿಯ ಜಿಲ್ಲಾ ಪಂಚಾಯಿತಿಯಲ್ಲಿಜ.4ರಂದು ನಡೆದ ಕೆಡಿಪಿ ಸಭೆಯಲ್ಲಿ ಕಟ್ಟುನಿಟ್ಟಿನ ಆದೇಶ ನೀಡಿದ್ದರು.

‘ನಮಗೆ ತನಿಖೆ ನಡೆಸುವ ಅಧಿಕಾರ ಇಲ್ಲ. ಆದ್ದರಿಂದ ನಮ್ಮ ಕಚೇರಿ ಅಧಿಕಾರಿಗಳ ತಂಡದ ಸಮಗ್ರ ವರದಿ ಪರಿಶೀಲನೆ ನಡೆಸಿ ಪೊಲೀಸರ ಮೂಲಕ ವರದಿ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಅವರಿಗೆಬೆಳಗಾವಿ ಪ್ರಾದೇಶಿಕ ಆಯುಕ್ತ ಆಮ್ಲಾನ್‌ ಆದಿತ್ಯ ಬಿಸ್ವಾಸ್‌ ಅವರು ಸೂಚನೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.