ADVERTISEMENT

ಕಳಪೆ ಬೀಜ ನಾಟಿ ಮಾಡಿದ ರೈತರಿಗೆ ಹಾನಿ: ಪರಿಹಾರದ ಭರವಸೆ ನೀಡಲು 25ರ ಗಡುವು

​ಪ್ರಜಾವಾಣಿ ವಾರ್ತೆ
Published 23 ಮೇ 2025, 16:07 IST
Last Updated 23 ಮೇ 2025, 16:07 IST
ಬ್ಯಾಡಗಿಯಲ್ಲಿರುವ ಶಾಸಕ ಬಸವರಾಜ ಶಿವಣ್ಣನವರ ಜನಸಂಪರ್ಕ ಕಾರ್ಯಾಲಯದ ಎದುರು  ರೈತರು ಶುಕ್ರವಾರವೂ ಧರಣಿ ನಡೆಸಿದರು
ಬ್ಯಾಡಗಿಯಲ್ಲಿರುವ ಶಾಸಕ ಬಸವರಾಜ ಶಿವಣ್ಣನವರ ಜನಸಂಪರ್ಕ ಕಾರ್ಯಾಲಯದ ಎದುರು  ರೈತರು ಶುಕ್ರವಾರವೂ ಧರಣಿ ನಡೆಸಿದರು   

ಬ್ಯಾಡಗಿ: ಮೆಣಸಿನಕಾಯಿ ಕಳಪೆ ಬೀಜ ನಾಟಿ ಮಾಡಿ ಹಾನಿಗೀಡಾದ ರೈತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಶಾಸಕ ಬಸವರಾಜ ಶಿವಣ್ಣನವರ ಪಟ್ಟಣದ ಜನಸಂಪರ್ಕ ಕಾರ್ಯಾಲಯದ ಎದುರು ಕೈಗೊಂಡ ಧರಣಿ ಶುಕ್ರವಾರವೂ ಮುಂದುವರಿಯಿತು.

ಧರಣಿ ಸ್ಥಳಕ್ಕೆ ಜಿಲ್ಲಾಡಳಿತ, ತಾಲ್ಲೂಕು ಆಡಳಿತದ ಯಾವ ಪ್ರತಿನಿಧಿಯೂ ಭೇಟಿ ನೀಡಿದ್ದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದರು. ಮೇ 25ರ ಸಂಜೆಯೊಳಗೆ ಪರಿಹಾರದ ಭರವಸೆ ನೀಡುವಂತೆ ಗುಡುವು ನೀಡಿದರು.

‘ಮುಂಗಾರು ಪೂರ್ವ ಮಳೆ ಆರಂಭವಾಗಿದ್ದು, ಹೊಲಗಳನ್ನು ಬಿತ್ತನೆಗೆ ಸಿದ್ಧಗೊಳಿಸಬೇಕಾದ ನಾವು ಮೂರು ದಿನಗಳಿಂದ ಧರಣಿ ನಡೆಸುತ್ತಿದ್ದೇವೆ. ಜನಪ್ರತಿನಿಧಿಗಳು ಸೌಜನ್ಯಕ್ಕಾದರೂ ನಮ್ಮನ್ನು ಭೇಟಿ ಮಾಡಿಲ್ಲ’ ಎಂದು ರೈತ ಕೆ.ವಿ. ದೊಡ್ಡಗೌಡ್ರ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಅನ್ಯಾಯದ ವಿರುದ್ಧ ಹೋರಾಟ ನಡೆಯುತ್ತಿದ್ದು, ಪರಿಹಾರದ ಭರವಸೆ ಸಿಗುವವರೆಗೂ ಮುಂದುವರಿಯಲಿದೆ’ ಎಂದರು.

ಪರಮೇಶಯ್ಯ ಹಿರೇಮಠ, ಶೇಖಪ್ಪ ತೋಟದ, ವಿರೂಪಾಕ್ಷಪ್ಪ ಅಗಡಿ, ಜಯಪ್ಪ ದಿಡಗೂರ, ಮಲ್ಲೇಶಪ್ಪ ಗೌರಾಪುರ, ವೀರೇಶ ದೇಸೂರ, ಪರಸಪ್ಪ ಪರವತ್ತೇರ, ರಾಮಣ್ಣ ಅಗಸಿಬಾಗಿಲ, ಶಿವರುದ್ರಪ್ಪ ಮೂಡೇರ, ಚಂದ್ರಪ್ಪ ಕೇಲೂರ, ಮಂಜುನಾಥ ದಿಡಗೂರ ಪಾಲ್ಗೊಂಡಿದ್ದರು.

‘ಜನಪ್ರತಿನಿಧಿಗಳಿಗೆ ಬಹಿಷ್ಕಾರ’

‘ಮೇ 25ರ ಸಂಜೆಯೊಳಗೆ ಪರಿಹಾರದ ಭರವಸೆ ದೊರೆಯದಿದ್ದರೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಯಾವ ಜನಪ್ರತಿನಿಧಿಯೂ ಭಾಗವಹಿಸದಂತೆ ಬಹಿಷ್ಕಾರ ಹಾಕಲು ರೈತ ಸಂಘ ನಿರ್ಧರಿಸಿದೆ’ ಎಂದು ‌ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು. ‘ಕಳಪೆ ಗುಣಮಟ್ಟದ ಮೆಣಸಿನಕಾಯಿ ಕೋಸು ಬಿತ್ತನೆ ಬೀಜಗಳನ್ನು ಮಾರಾಟ ಮಾಡಿ ರೈತರಿಗೆ ಮೋಸ ಮಾಡಿದ ಹೈದರಾಬಾದ್‌ ಮೂಲದ ಧನಕ್ರಾಫ್‌ ಪ್ರೈ.ಲಿ. ಬೀಜೋತ್ಪಾದಕ ಕಂಪನಿಯ ಉತ್ಪನ್ನಗಳನ್ನು ಖರೀದಿಸದಂತೆ ಜಿಲ್ಲೆಯ ಎಲ್ಲಾ ರೈತರಲ್ಲಿ ಮನವಿ ಮಾಡಲಾಗಿದೆ. ಇದರಿಂದ ಆ ಕಂಪನಿ ರಾಜ್ಯದಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.