ADVERTISEMENT

ಸವಣೂರು: ಲೋಕಾಯುಕ್ತಕ್ಕೆ ದೂರುಗಳ ಸುರಿಮಳೆ!

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 3:57 IST
Last Updated 13 ನವೆಂಬರ್ 2025, 3:57 IST
<div class="paragraphs"><p>ಸವಣೂರು ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಾವೇರಿ ಲೋಕಾಯುಕ್ತ ಉಪ ಅಧಿಕ್ಷಕರ ನೇತೃತ್ವದಲ್ಲಿ ಬುಧವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಯಿತು</p></div>

ಸವಣೂರು ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಾವೇರಿ ಲೋಕಾಯುಕ್ತ ಉಪ ಅಧಿಕ್ಷಕರ ನೇತೃತ್ವದಲ್ಲಿ ಬುಧವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಯಿತು

   

ಸವಣೂರು: ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಾವೇರಿ ಲೋಕಾಯುಕ್ತ ಉಪ ಅಧೀಕ್ಷಕರ ನೇತೃತ್ವದಲ್ಲಿ ಬುಧವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಸಭೆ ನಡೆಯಿತು. ದೂರುದಾರರು ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದರು.

ಪ್ರಮುಖವಾಗಿ 13 ದೂರುಗಳು ಸಲ್ಲಿಕೆಯಾದವು. ಆರೋಗ್ಯ, ಶಿಕ್ಷಣ ಇಲಾಖೆ, ಹೆಸ್ಕಾಂ, ಕಾರ್ಮಿಕ ಇಲಾಖೆ, ಅಬಕಾರಿ, ನಾಡಕಚೇರಿ ಹತ್ತಿಮತ್ತೂರು ಸಂಬಂಧಿಸಿದ ತಲಾ ಒಂದು ದೂರು, ಆರ್‌ಡಬ್ಲೂಎಸ್ ಮತ್ತು ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿ ತಲಾ ಎರಡು ದೂರು ಹಾಗೂ ಪೊಲೀಸ್‌ ಇಲಾಖೆಗೆ ಸಂಬಂಧಿಸಿದ ಮೂರು ದೂರುಗಳು ಸಲ್ಲಿಕೆಯಾದವು.

ADVERTISEMENT

ದೂರುಗಳೇನು: ಶಿಗ್ಗಾವಿ ರಸ್ತೆಯಲ್ಲಿ ಸ್ಮಶಾನಕ್ಕೆ ಮೀಸಲಿರಿಸಿದ ಜಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆ ನೀಡಿದ್ದಾರೆ ಎನ್ನುವುದು ಗಂಭೀರ ಆರೋಪದ ದೂರು ಸಲ್ಲಿಕೆ ಆಗಿದ್ದು, ಚರ್ಚೆಗೀಡು ಮಾಡಿತು.

ಸ್ಮಶಾನ ಭೂಮಿಯನ್ನು ಅಂಜುಮನ್‌ ಸಂಸ್ಥೆಯು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿದೆ. ನಿಯಮಬಾಹಿರ ವಾಣಿಜ್ಯ ಮಳಿಗೆಗೆ ಹೆಸ್ಕಾಂ ವಿದ್ಯುತ್ ಸಂಪರ್ಕ ಕಲ್ಪಿಸಿದೆ. ಈ ಬಗ್ಗೆ ತನಿಖೆ ಕೈಗೊಳ್ಳಬೇಕು. ಲೋಕೋಪಯೋಗ ಇಲಾಖೆಯಲ್ಲಿಯೇ ಭ್ರಷ್ಟಚಾರ ತಾಂಡವವಾಡುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಮಾರುತಿ ಬಣಕಾರ ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆಗಳ ತುರ್ತು ದುರಸ್ತಿ ಕಾಮಗಾರಿ ಸಮರ್ಪಕವಾಗಿ ಮಾಡಿಲ್ಲ. ಡಾಂಬರೀಕರಣದ ಬದಲು ಮಣ್ಣು ತಂದು ಸುರಿಯಲಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ದೂರು ಸಲ್ಲಿಕೆ ಆಯಿತು.

ತೆವರಮರಳ್ಳಿಹಳ್ಳಿ ಗ್ರಾಮ ರಿ.ಸ.ನಂ. 28ರಲ್ಲಿ ಆರ್‌ಟಿಸಿಯಲ್ಲಿ ಸುಮಾರು ವರ್ಷಗಳಿಂದ ಒಟ್ಟುಗೂಡಿಸಿ, ಅಧಿಕಾರಿಗಳು ಮಾಡಿರುವ ತಪ್ಪಿನಿಂದಾಗಿ ನಾವು ಇಲಾಖೆಗೆ ಅಲೆದಾಡುತ್ತಿದ್ದೇವೆ ಎಂದು ಅಹವಾಲು ಸಲ್ಲಿಕೆ ಆಯಿತು. ಈ ವೇಳೆ ತಹಶೀಲ್ಧಾರ್‌ ರವಿಕುಮಾರ ಕೊರವರ ಮಾತನಾಡಿ, ‘ಇದು ನನ್ನ ಗಮನಕ್ಕೆ ಬಂದಿರುವದಿಲ್ಲ. ತ್ವರಿತವಾಗಿ ಆಗಿರುವ ಸಮಸ್ಯೆ ಪರಿಶೀಲಿಸಿ ಸರಿಪಡಿಸಲಾಗುವುದು’ ಭರವಸೆ ನೀಡಿದರು.

ಕಳಸೂರ ಗ್ರಾ.ಪಂ ವ್ಯಾಪ್ತಿಯಲ್ಲಿ ಅನುದಾನ ದುರ್ಬಳಕೆ ಮೇಲ್ನೋಟಕ್ಕೆ ಕಂಡು ಬಂದರೂ ಅಧಿಕಾರಿಗಳು ಶಾಮೀಲಾಗಿ ಬಿಲ್ ತೆಗೆಯುತ್ತಿದ್ದಾರೆ ಎಂದು ಆರೋಪಿಸಲಾಯಿತು.

ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ನೀರು ಮತ್ತು ನೈರ್ಮಲ್ಯ ವಿಭಾಗದ ಅಭಿಯಂತರರು ಮೃತ್ಯುಂಜಯ ಹಿರೇಮಠ ಅವರು ತಮ್ಮ ಆಪ್ತರಿಗೆ ಗುತ್ತಿಗೆ ನೀಡುತ್ತಿದ್ದಾರೆ. ಈ ಮೂಲಕ ಭ್ರಷ್ಟಾಚಾರ ಎಸಗುತ್ತಿದ್ದಾರೆ ಎನ್ನುವ ದೂರು ಸಲ್ಲಿಕೆ ಆಯಿತು.

ಆರೋಗ್ಯ ಇಲಾಖೆಯ ಅಧಿಕಾರಿಗಳು ತಂಬಾಕು ಉತ್ಪಗಳ ಮಾರಾಟದ ಮೇಲೆ ನಿಗಾ ವಹಿಸಬೇಕು ಹಾಗೂ ಕಡಕೋಳ ಪ್ರಾಥಮಿಕ ಆರೋಗ್ಯ ಕೇಂದ್ರವು ಸದಾ ಮುಚ್ಚಿರುತ್ತದೆ ಎಂಬ ಆರೋಪ ಕೇಳಿಬಂದಿದೆ. ಆರೋಗ್ಯ ಅಧಿಕಾರಿಗಳು ಕೂಡಲೇ ಸಿಬ್ಬಂದಿಯನ್ನು ನೇಮಿಸಿ ಸಾರ್ವಜನಿಕರ ಆರೋಗ್ಯ ಕಾಪಾಡಬೇಕು ಎಂದು ಲೋಕಾಯುಕ್ತ ಅಧಿಕಾರಿಗಳು ಸೂಚಿಸಿದರು.

ಪುರಸಭೆಯ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಈ ಹಿಂದೆ ಗುತ್ತಿಗೆ ಆದಾರದ ಮೇಲೆ ಕಾರ್ಯನಿರ್ವಹಿಸಿದ ಕಾರ್ಮಿಕರಿಗೆ ಕೆಲಸ ನೀಡದೆ ಅನಧಿಕೃತವಾಗಿ ಎಂಟು ಜನ ಅನನುಭವಿ ಕಾರ್ಮಿಕರನ್ನು ನೇಮಿಸಿಕೊಂಡು ಮತ್ತೆ ಕೆಲಸ ಕೊಡುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ಪುರಸಭೆಯ ಗುತ್ತಿಗೆ ಕಾರ್ಮಿಕರು ಲೋಕಾಯುಕ್ತ ಉಪ ಅಧಿಕ್ಷಕರ ಎದುರು ಅಳಲು ತೋಡಿಕೊಂಡರು.

ಈ ವೇಳೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ‘ನಿಮ್ಮ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಬಂದು ಹಾವೇರಿ ಕಚೇರಿಗೆ ಬಂದು ದೂರ ಸಲ್ಲಿಸಿದಲ್ಲಿ ಈ ಕುರಿತು ತನಿಖೆ ಕೈಗೊಳ್ಳಲು ಮೇಲಧಿಕಾರಿಗಳಿಗೆ ಸೂಚಿಸಲಾಗುವದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.