ADVERTISEMENT

ಪಲ್ಸ್‌ ಪೋಲಿಯೊ ಲಸಿಕೆ ಜ.17ರಂದು

200 ಮಕ್ಕಳಿಗೆ ಒಂದು ಬೂತ್‍ ತೆರೆಯಿರಿ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 12:32 IST
Last Updated 6 ಜನವರಿ 2021, 12:32 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ಹಾವೇರಿ: ರಾಷ್ಟ್ರೀಯ ಪಲ್ಸ್ ಪೋಲಿಯೊಲಸಿಕಾ ಕಾರ್ಯಕ್ರಮದಡಿ ಜ.17ರಂದು ಜಿಲ್ಲೆಯಾದ್ಯಂತ ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೂ ಪಲ್ಸ್ ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರ ಸಹಭಾಗಿತ್ವ ಹಾಗೂ ವಿಶ್ವಾಸದಿಂದ ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಪಲ್ಸ್ ಪೋಲಿಯೊ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋವಿಡ್ ಹಿನ್ನೆಲೆಯಲ್ಲಿ ಗರಿಷ್ಠ 200 ಮಕ್ಕಳಿಗೆ ಒಂದು ಬೂತ್‍ನಂತೆ ವ್ಯವಸ್ಥೆ ಮಾಡಿ ಲಸಿಕೆ ಹಾಕಬೇಕು. ಮಕ್ಕಳಿಗೆ ಅನುಗುಣವಾಗಿ ಬೂತ್‍ಗಳ ಸಂಖ್ಯೆಗಳನ್ನು ಹೆಚ್ಚಳ ಮಾಡಿಕೊಳ್ಳಬೇಕು. ವಿವಿಧ ಇಲಾಖೆಗಳ ಸಮನ್ವಯ ಹಾಗೂ ವ್ಯಾಪಕ ಪ್ರಚಾರದ ಮೂಲಕ ನಿಗದಿತ ಗುರಿಯಂತೆ ನೂರಕ್ಕೆ ನೂರರಷ್ಟು ಅರ್ಹ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವಂತೆ ಸಲಹೆ ನೀಡಿದರು.

ADVERTISEMENT

‘1.67 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ’

ಜಿಲ್ಲೆಯಲ್ಲಿ 0-5 ವಯೋಮಾನದ 1,67,740 ಮಕ್ಕಳಿದ್ದಾರೆ. 3,48,219 ಮನೆಗಳಿವೆ. ಮೊದಲ ದಿನ ಬೂತ್ ಮಟ್ಟದಲ್ಲಿ ಗರಿಷ್ಠ ಮಟ್ಟದ ಲಸಿಕೆ ಹಾಕಲಾಗುವುದು. ಇಲ್ಲಿ ಕೈಬಿಟ್ಟುಹೋದ ಮಕ್ಕಳಿಗೆ ಲಸಿಕೆ ಹಾಕಲು ಜನವರಿ 18ರಿಂದ ಮೂರು ದಿನ ಮನೆ–ಮನೆಗೆ ತೆರಳಿ ಶೇ 100ರಷ್ಟು ಮಕ್ಕಳಿಗೆ ಲಸಿಕೆ ಹಾಕಲು ಯೋಜಿಸಲಾಗಿದೆ ಎಂದುಪಲ್ಸ್ ಪೋಲಿಯೊ ನೋಡಲ್ ಅಧಿಕಾರಿ ಡಾ.ಜಯಾನಂದ ತಿಳಿಸಿದರು.

ಜಿಲ್ಲೆಯಲ್ಲಿ 1860 ವ್ಯಾಕ್ಸಿನೇಟರ್, 186 ಮೇಲುಸ್ತುವಾರಿ ಅಧಿಕಾರಿಗಳು, 1466 ಆಶಾ ಕಾರ್ಯಕರ್ತರು, 1918 ಅಂಗನವಾಡಿ ಕಾರ್ಯಕರ್ತರು ಪೋಲಿಯೊ ಕಾರ್ಯಕ್ರಮಕ್ಕೆ ನಿಯೋಜಿಸಲಾಗುವುದು ಎಂದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್. ಹಾವನೂರ, ಡಿ.ಎಂ.ಡಬ್ಲ್ಯೂ ಡಾ.ದೇವರಾಜ ಎಸ್., ಡಿಟಿಒ ಡಾ.ನೀಲೇಶ ಎಂ.ಎನ್., ಡಿ.ಎಸ್.ಒ ಡಾ.ಜಗದೀಶ ಪಾಟೀಲ, ಡಿ.ಎಂ.ಒ ಡಾ.ಪ್ರಭಾಕರ ಕುಂದೂರ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಪಿ.ವೈ. ಶೆಟ್ಟೆಪ್ಪನವರ, ವಾರ್ತಾಧಿಕಾರಿ ಬಿ.ಆರ್.ರಂಗನಾಥ್, ಡಿ.ಯು.ಡಿ.ಸಿ ಯೋಜನಾಧಿಕಾರಿ ವಿರಕ್ತಿಮಠ, ವಿವಿಧ ಇಲಾಖಾ ಅಧಿಕಾರಿಗಳು, ತಾಲೂಕಾ ವೈದ್ಯಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.