ADVERTISEMENT

‘ಕೊಲೆಗಾರರಿಗೆ ಗಲ್ಲು ಶಿಕ್ಷೆ ನೀಡಿ’

ಕನ್ಹಯ್ಯ ಲಾಲ್‌ ಹತ್ಯೆ ಖಂಡಿಸಿ ವಿಎಚ್‌ಪಿ ಮತ್ತು ಬಜರಂಗದಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 14:02 IST
Last Updated 1 ಜುಲೈ 2022, 14:02 IST
ರಾಜಸ್ಥಾನದ ಉದಯಪುರದ ಟೈಲರ್ ಕನ್ಹಯ್ಯಾ ಲಾಲ್‍ ಹತ್ಯೆ ಖಂಡಿಸಿ ಹಾಗೂ ಕೊಲೆಗಾರರನ್ನು ಶೀಘ್ರ ಗಲ್ಲು ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ವತಿಯಿಂದ ಶುಕ್ರವಾರ ಹಾವೇರಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು
ರಾಜಸ್ಥಾನದ ಉದಯಪುರದ ಟೈಲರ್ ಕನ್ಹಯ್ಯಾ ಲಾಲ್‍ ಹತ್ಯೆ ಖಂಡಿಸಿ ಹಾಗೂ ಕೊಲೆಗಾರರನ್ನು ಶೀಘ್ರ ಗಲ್ಲು ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ವತಿಯಿಂದ ಶುಕ್ರವಾರ ಹಾವೇರಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು   

ಹಾವೇರಿ:ರಾಜಸ್ಥಾನದ ಉದಯಪುರದ ಟೈಲರ್ ಕನ್ಹಯ್ಯಾ ಲಾಲ್‍ ಹತ್ಯೆ ಖಂಡಿಸಿ ಹಾಗೂ ಕೊಲೆಗಾರರನ್ನು ಶೀಘ್ರ ಗಲ್ಲು ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ವತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಜಮಾಯಿಸಿದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ, ಕೆಲಕಾಲ ರಸ್ತೆ ಬಂದ್ ಮಾಡಿದರು. ಇದರಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಯಿತು.ಕನ್ಹಯ್ಯಲಾಲ್‌ ಶಿರಚ್ಛೇದ ಮಾಡಿದ ಹತ್ಯೆಕೋರರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಶ್ವ ಹಿಂದೂ ಪರಿಷತ್ ಪ್ರಮುಖ ಎಸ್.ಆರ್.ಹೆಗಡೆ ಮಾತನಾಡಿ, ರಾಜಸ್ಥಾನದ ಉದಯಪುರದ ಕನ್ಹಯ್ಯ ಲಾಲ್ ಟೈಲರ್ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದ ಮಹಮ್ಮದ್ ರಿಯಾಜ್ ಹಾಗೂ ಮಹಮ್ಮದ್ ಗೌಸ್ ಈ ಇಬ್ಬರು ಹಂತಕರು ಬಟ್ಟೆ ಅಳತೆ ಕೊಡುವ ನಾಟಕವಾಡಿ ಕತ್ತಿಯನ್ನು ತೆಗೆದು ಅಮಾನುಷವಾಗಿ ಕನ್ಹಯ್ಯ ಲಾಲ್ ಅವರ ಕತ್ತಿಗೆ ಇರಿದು ಅದನ್ನು ವಿಡಿಯೊ ಮಾಡಿ ವಿಕೃತಿ ಮೆರೆದಿದ್ದಾರೆ.

ADVERTISEMENT

ಗಲ್ಲು ಶಿಕ್ಷೆಗೆ ಗುರಿಪಡಿಸಿ:

ಕನ್ಹಯ್ಯ ಲಾಲ್ ಹತ್ಯೆ ಮಾಡಿ ವಿಡಿಯೊ ಮಾಡುವ ಮೂಲಕ ಸಾರ್ವಜನಿಕವಾಗಿ ಹೇಳಿಕೆ ನೀಡಿರುವುದು ಖಂಡನೀಯ. ಅಲ್ಲದೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಸಹಾ ಇದೇ ಕತ್ತಿಯಿಂದ ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿರುವುದು ಇಡೀ ದೇಶವೇ ಖಂಡಿಸುತ್ತದೆ. ಕೂಡಲೇ ಈ ಹಂತಕರನ್ನು ಸಾರ್ವಜನಿಕ ಸ್ಥಳದಲ್ಲಿ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

ಘಟನೆ ಮರುಕಳಿಸದಿರಲಿ:

ಭೋಜರಾಜ ಕರೂದಿ ಮಾತನಾಡಿ, ದೇಶದ್ರೋಹದ ಶಿಕ್ಷಣ ನೀಡುವ ಮದರಸಾಗಳನ್ನು ಮೊದಲು ಬಂದ್ ಮಾಡಬೇಕು. ಪಾಕಿಸ್ತಾನಕ್ಕೆ ಹೋಗುವವರು ಹಾಗೂ ಮರಳಿ ದೇಶಕ್ಕೆ ಬರುವವರ ಮೇಲೆ ನಿಗಾ ಇಡಬೇಕು. ದೇಶದಲ್ಲಿ ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರಗಳು ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಇಂತಹ ಭಯೋತ್ಪಾದಕರಿಗೆ ಬಿಸಿ ಮುಟ್ಟಿಸಬೇಕು ಎಂದು ಒತ್ತಾಯಿಸಿದರು.

ಆರ್‌ಎಸ್‌ಎಸ್‌ ಪ್ರಮುಖ ಗುರುರಾಜ ಕುಲಕರ್ಣಿ ಮಾತನಾಡಿ, ಕನ್ಹಯ್ಯ ಲಾಲ್ ಅವರನ್ನು ಹತ್ಯೆಗೈದು ವಿಡಿಯೊ ಮಾಡಿ ಅವರೇ ಒಪ್ಪಿಕೊಂಡಿದ್ದಾರೆ. ತಕ್ಷಣವೇ ಅವರಿಗೆ ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ವಿಧಿಸಬೇಕು. ಇಂತಹ ಕೃತ್ಯ ಎಸಗುವ ಮೂಲಕ ದೇಶದಲ್ಲಿ ಶಾಂತಿ ಸುವ್ಯವಸ್ಥೆ ಹಾಳು ಮಾಡುವ ಭಯೋತ್ಪಾದಕರನ್ನು ದೇಶದಿಂದ ಹೊರಹಾಕುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಶಶಿಧರ ಹೊಸಳ್ಳಿ, ಈಶ್ವರ ಹಾವನೂರು, ಡಾ.ಬಸವರಾಜ ಕೇಲಗಾರ, ಪ್ರದೀಪ ಮುಳ್ಳೂರ, ಪ್ರಭು ಹಿಟ್ನಳ್ಳಿ, ಅನಿಲ ಹಲವಾಗಿಲ, ವರುಣ ಆನವಟ್ಟಿ, ಡಾ.ಸಂತೋಷ ಆಲದಕಟ್ಟಿ, ಅಭಿಷೇಕ ಉಪ್ಪಿನ್, ಕೊಟ್ರೇಶ ಮಂಜಲಾಪುರ, ಗಿರೀಶ ತುಪ್ಪದ, ಶಿವಾನಂದ ಮ್ಯಾಗೇರಿ, ಹಾಲೇಶ ಜಾಧವ, ನಿಂಗಪ್ಪ ಗೊಬ್ಬೇರ, ಮನು ಕರಿಯಪ್ಪನವರ, ಗೋವಿಂದ ಕಂಡೇಲ್‍ವಾಲ್, ಗಂಗಾಧರ ಮಾಮಲೇಪಟ್ಟಣಶೆಟ್ಟಿ, ಚೇತನ್ ಬೆಂಡಿಗೇರಿ, ಕೃಷ್ಣ ಈಳಗೇರ, ಪ್ರವೀಣ ಗಾಣಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.