ADVERTISEMENT

ತೀರ್ಪಿನಿಂದ ಅಸಮಾಧಾನ, ಬಿಜೆಪಿ ಸೇರುವ ಬಗ್ಗೆ ತೀರ್ಮಾನವಾಗಿಲ್ಲ: ಆರ್.ಶಂಕರ್

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2019, 11:29 IST
Last Updated 13 ನವೆಂಬರ್ 2019, 11:29 IST
ಆರ್. ಶಂಕರ್
ಆರ್. ಶಂಕರ್   

ನವದೆಹಲಿ: ನಾನು ಪ್ರತಿನಿಧಿಸುತ್ತಿದ್ದ ಕೆಪಿಜೆಪಿ ಪಕ್ಷದ ವಿಲೀನ ಪ್ರಕ್ರಿಯೆ ಅಪೂರ್ಣವಾಗಿದೆ ಎಂದು ಹೇಳಿದ್ದ ಸ್ಪೀಕರ್, ನಾನು ರಾಜೀನಾಮೆ ನೀಡದಿದ್ದರೂ ಅನರ್ಹಗೊಳಿಸಿ‌ ನೀಡಿರುವ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವುದು ಅಸಮಾಧಾನ ತಂದಿದೆ ಎಂದು ರಾಣೆಬೆನ್ನೂರಿನ ಅನರ್ಹ ಶಾಸಕ ಆರ್.ಶಂಕರ್ ಹೇಳಿದರು.

ಬುಧವಾರ ಮಧ್ಯಾಹ್ನ ಬಿಜೆಪಿ ರಾಷ್ಟ್ರೀಯ ಪ್ರಧಾನ ‌ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಿದ ಬಳಿಕ‌ ಸುದ್ದಿಗಾರರೊಂದಿಗೆ ಮಾತನಾಡಿ, ಸುಪ್ರೀಂ ಕೋರ್ಟ್ ತೀರ್ಪು ತೀವ್ರ ಅಸಮಾಧಾನ ಉಂಟು ಮಾಡಿದೆ. ತೀರ್ಪು ಮರು ಪರಿಶೀಲನೆಗೆ ಮೇಲ್ಮನವಿ ಸಲ್ಲಿಸುವ ಮತ್ತು ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ವಕೀಲರೊಂದಿಗೆ ಚರ್ಚಿಸಿದ ಬಳಿಕ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.

'ನಮ್ಮ ಪಕ್ಷ ಕಾಂಗ್ರೆಸ್‌ನೊಂದಿಗೆ ವಿಲೀನವಾಗಿರಲಿಲ್ಲ. ಹಾಗಾಗಿ ನಾನು ಪಕ್ಷ‌ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿದ್ದೆ ಎಂಬುದಕ್ಕೆ ಅರ್ಥವಿಲ್ಲ. ಆದರೂ ನನ್ನನ್ನು ಸಂವಿಧಾನದ 10ನೇ‌ ಪರಿಚ್ಚೇದದ ಅಡಿ ಅನರ್ಹಗೊಳಿಸಲಾಗಿದೆ. ಇದನ್ನು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದೆ. ಆದರೂ ತೀರ್ಪು ಈ ರೀತಿ ಬಂದಿರುವುದು ಆಘಾತ‌ ಉಂಟುಮಾಡಿದೆ ಎಂದು ತಿಳಿಸಿದರು.

ADVERTISEMENT

ಎಲ್ಲ ಅನರ್ಹ ಶಾಸಕರು ಬಿಜೆಪಿಯ ಸಂತೋಷ್‌ ಅವರನ್ನು ಭೇಟಿ ಮಾಡಲು ಬಂದಿದ್ದರು.‌ ಅವರೊಂದಿಗೆ ನಾನೂ ಬಂದಿದ್ದೇನೆ. ಬಿಜೆಪಿ ಸೇರುವ‌ ಕುರಿತು ಇನ್ನೂ ನಿರ್ಧಾರ‌ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.