ಹಾವೇರಿ: ಕೋವಿಡ್ ಲಾಕ್‌ಡೌನ್ ತೆರವಾದ ನಂತರ ಕೆಲವು ರೈಲುಗಳು ಸಂಚಾರ ಆರಂಭಿಸಿವೆ. ಆದರೆ, ‘ಮಾಸಿಕ ಪಾಸ್’ ಮತ್ತು ಕೌಂಟರ್‌ಗಳಲ್ಲಿ ‘ಜನರಲ್ ಟಿಕೆಟ್’ ಸಿಗದೆ ನಿತ್ಯ ಸಂಚರಿಸುವ ನೌಕರರು ಪರದಾಡುವಂತಾಗಿದೆ.
ಹಾವೇರಿಯಿಂದ ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಕಡೂರು, ಅರಸೀಕೆರೆವರೆಗೆ ನಿತ್ಯ 300ಕ್ಕೂ ಹೆಚ್ಚು ಸರ್ಕಾರಿ ಮತ್ತು ಖಾಸಗಿ ಕಂಪನಿಗಳ ನೌಕರರು ಹಾಗೂ ಕೂಲಿ ಕಾರ್ಮಿಕರು ಪ್ರಯಾಣ ಮಾಡುತ್ತಾರೆ.ಇವರೆಲ್ಲರೂ ನಿತ್ಯ ಆನ್‌ಲೈನ್ ಮೂಲಕ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಿಕೊಂಡು ಹೋಗಬೇಕಾದ ಪರಿಸ್ಥಿತಿ ಬಂದಿದೆ.
ಧಾರವಾಡದಿಂದ ಬೆಳಿಗ್ಗೆ 5.15ಕ್ಕೆ ಹೊರಡುವ ‘ಸಿದ್ಧಗಂಗಾ ಇಂಟರ್‌ಸಿಟಿ ರೈಲು’ ಹಾವೇರಿ ಮಹದೇವಪ್ಪ ಮೈಲಾರ ರೈಲ್ವೆ ನಿಲ್ದಾಣಕ್ಕೆ ಬೆಳಿಗ್ಗೆ 7.05ಕ್ಕೆ ಬರುತ್ತದೆ. ಇಲ್ಲಿಂದ ಹೊರಟು ಬೆಳಿಗ್ಗೆ 8.20ಕ್ಕೆ ದಾವಣಗೆರೆ, ಬೆಳಿಗ್ಗೆ 9ಕ್ಕೆ ಚಿಕ್ಕಜಾಜೂರು, ಬೆಳಿಗ್ಗೆ 10ಕ್ಕೆ ಬೀರೂರು ರೈಲ್ವೆ ನಿಲ್ದಾಣ ತಲುಪುತ್ತದೆ. ಉದ್ಯೋಗ ಮತ್ತು ಕೂಲಿ ಕೆಲಸಕ್ಕೆ ಹೋಗುವವರು ಬಹುತೇಕ ಇದೇ ರೈಲನ್ನು ಅವಲಂಬಿಸಿದ್ದಾರೆ.
ನಿತ್ಯ ಬುಕ್ಕಿಂಗ್ ಕಷ್ಟ:‘ಕೋವಿಡ್ ಬರುವ ಮುನ್ನ, ಮಾಸಿಕ ಪಾಸ್ ದರ ₹600 ಪಾವತಿಸಿ,ಹಾವೇರಿಯಿಂದ ದಾವಣಗೆರೆಗೆ ಸಿದ್ಧಗಂಗಾ ಇಂಟರ್‌ಸಿಟಿ ರೈಲಿನಲ್ಲಿ ಆರಾಮಾಗಿ ಪ್ರಯಾಣ ಮಾಡುತ್ತಿದ್ದೆವು. ಕೊರೊನಾ ಸೋಂಕು ಎಂಬ ಕಾರಣ ಹೇಳಿ ಒಂದೂವರೆ ವರ್ಷದಿಂದ ‘ಮಾಸಿಕ ಪಾಸ್’ ನೀಡುತ್ತಿಲ್ಲ. ಜತೆಗೆ ರೈಲ್ವೆ ನಿಲ್ದಾಣದ ಕೌಂಟರ್‌ಗಳಲ್ಲಿ ‘ಜನರಲ್ ಟಿಕೆಟ್’ ಸಿಗುತ್ತಿಲ್ಲ. ನಿತ್ಯ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿ ಸಂಚಾರ ಮಾಡುವುದು ತುಂಬಾ ಕಷ್ಟ’ ಎನ್ನುತ್ತಾರೆ ಹಾವೇರಿಯ ಖಾಸಗಿ ಕಂಪನಿ ನೌಕರ ಲಿಂಗರಾಜ ಪಾಟೀಲ.
ಬಸ್ ದರ ಹೆಚ್ಚು: ‘ರೈಲಿನಲ್ಲಿ ಹಾವೇರಿಯಿಂದ 70 ಕಿ.ಮೀ. ದೂರದ ದಾವಣಗೆರೆಗೆ ಒಂದೂವರೆ ತಾಸು ಪ್ರಯಾಣ. ಬಸ್‌ಗಳು ಅಲ್ಲಲ್ಲಿ ನಿಲ್ಲಿಸಿಕೊಂಡು ಹೋಗುವುದರಿಂದ ಹಾಗೂ ತಿಂಡಿಗೆ ನಿಲ್ಲಿಸುವುದರಿಂದ ಎರಡೂವರೆ ಗಂಟೆ ಹಿಡಿಯುತ್ತದೆ. ಸಾರಿಗೆ ಸಂಸ್ಥೆಯಲ್ಲಿ ಮಾಸಿಕ ಪಾಸ್ ₹2,650 ದರವಿದೆ. ರೈಲಿಗೆ ಹೋಲಿಸಿದರೆ ನಾಲ್ಕು ಪಟ್ಟು ಹೆಚ್ಚಿನ ದರ ಪಾವತಿಸಬೇಕು. ಹೀಗಾಗಿ, ನಾವು ನಿತ್ಯ ಪ್ರಯಾಣಕ್ಕೆ ಇಂಟರ್‌ಸಿಟಿ ರೈಲನ್ನೇ ಅವಲಂಬಿಸಿದ್ದೇವೆ’ ಎನ್ನುತ್ತಾರೆ ಪ್ರಯಾಣಿಕರಾದ ಬಸವರಾಜ ಅಕ್ಕಿ ಮತ್ತು ಫಕ್ಕೀರೇಶ ಕಡಕೋಳ.
ಜೀವನ ನಿರ್ವಹಣೆಗೂ ತೊಂದರೆ:‘ನಾವು ರೈಲಿನಲ್ಲಿ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು ಪ್ರಯಾಣ ಮಾಡಲು ಸಿದ್ಧವಿದ್ದೇವೆ. ಮಾಸ್ಕ್ ಧರಿಸದವರಿಗೆ ಟಿ.ಸಿ.ಗಳು ದಂಡ ಹಾಕಲಿ. ಕೋವಿಡ್ ನೆಪ ಹೇಳಿಕೊಂಡು ಮಾಸಿಕ್ ಪಾಸ್ ನೀಡದೆ ನಮ್ಮನ್ನು ಪರದಾಡುವಂತೆ ಮಾಡಿರುವುದು ಸರಿಯಲ್ಲ.ಕೋವಿಡ್ ಸಂಕಷ್ಟದಿಂದ ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಭದ್ರತೆ ಇಲ್ಲ, ಸಂಬಳ ಕಡಿತವಾಗಿದೆ’ ಎಂದು ಖಾಸಗಿ ಕಂಪನಿಗಳ ನೌಕರರು ಸಮಸ್ಯೆ ತೋಡಿಕೊಂಡರು.
ಪ್ಯಾಸೆಂಜರ್ ರೈಲು ಆರಂಭಿಸಿದರೆ ಗೌಂಡಿಗಳಿಗೆ ಅನುಕೂಲವಾಗುತ್ತದೆ. ಸಮಸ್ಯೆಗಳನ್ನು ರೈಲ್ವೆ ಜನರಲ್ ಮ್ಯಾನೇಜರ್ ಗಮನಕ್ಕೆ ತಂದಿದ್ದೇವೆ
– ದೀಪಕ್ ಲಾಲ್, ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ, ಹುಬ್ಬಳ್ಳಿ ನೈರುತ್ಯ ರೈಲ್ವೆ
ಹೆಚ್ಚುವರಿ ಶುಲ್ಕದ ಹೊರೆ
‘ನಿತ್ಯ ಆನ್‌ಲೈನ್ ಬುಕ್ಕಿಂಗ್ ಮಾಡಿದರೆ ₹17 ಹೆಚ್ಚುವರಿ ಶುಲ್ಕ ಪಾವತಿಸಬೇಕು. ಗ್ರಾಮೀಣ ಪ್ರದೇಶದಿಂದ ಬರುವ ನಮ್ಮ ಬಳಿ ಸ್ಮಾರ್ಟ್‌ಫೋನ್‌ಗಳಿಲ್ಲ. ಹೀಗಾಗಿ, ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಮಾಡಲು ಹಾವೇರಿ ನಗರಕ್ಕೆ ಬರಬೇಕು. ಮುಂಜಾನೆ ವೇಳಗೆ ಕಂಪ್ಯೂಟರ್ ಸೆಂಟರ್‌ಗಳು ತೆರೆದಿರುವುದಿಲ್ಲ. ದಯಮಾಡಿ ಕೌಂಟರ್‌ಗಳಲ್ಲಿ ಜನರಲ್ ಟಿಕೆಟ್ ಕೊಡಿಸಿ’ ಎಂದು ಕೂಲಿಕಾರ್ಮಿಕರು ಅಳಲು ತೋಡಿಕೊಂಡರು.
‘ಆದೇಶ ಬಂದ ತಕ್ಷಣ ಮಾಸಿಕ ಪಾಸ್’
ಕೋವಿಡ್ ಒಂದನೇ ಅಲೆ ಆರಂಭವಾದ ನಂತರ ‘ಮಾಸಿಕ ಪಾಸ್’ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ. ಮುಖ್ಯ ರೈಲ್ವೆ ನಿಲ್ದಾಣಗಳ ಕೌಂಟರ್‌ಗಳಲ್ಲಿ ಮಾತ್ರ ‘ಅನ್‌ರಿಸರ್ವಡ್ ಕೋಚ್’ಗಳಿಗೆ ಜನರಲ್ ಟಿಕೆಟ್ ನೀಡುತ್ತಿದ್ದೇವೆ. ರೈಲ್ವೆ ಸಚಿವಾಲಯದಿಂದ ಆದೇಶ ಬಂದ ಕೂಡಲೇ ಮಾಸಿಕ ಪಾಸ್ ನೀಡುತ್ತೇವೆ. ಈಗ ಶೇ 60ರಿಂದ 70ರಷ್ಟು ರೈಲುಗಳು ಸಂಚರಿಸುತ್ತಿವೆ.ಸೆಪ್ಟೆಂಬರ್ ವೇಳೆಗೆ ಎಲ್ಲ ರೈಲುಗಳು ಸಂಚಾರ ಆರಂಭಿಸುವ ನಿರೀಕ್ಷೆಯಿದೆ’ ಎನ್ನುತ್ತಾರೆ ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್ ಹೆಗಡೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.