ADVERTISEMENT

ಹಾವೇರಿ ಜಿಲ್ಲೆಯಲ್ಲಿ ಗುಡುಗು–ಸಿಡಿಲು ಸಹಿತ ಮಳೆ: ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 14:10 IST
Last Updated 16 ಅಕ್ಟೋಬರ್ 2018, 14:10 IST
ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದ ಬಳಿ ಬಸ್ ನಿಲ್ದಾಣ ದ್ವಾರದ ಪಿ.ಬಿ.ರಸ್ತೆಯಲ್ಲಿ ನೀರು ನಿಂತು ಸಂಚಾರ ಸ್ಥಗಿತಗೊಂಡಿತ್ತು 
ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದ ಬಳಿ ಬಸ್ ನಿಲ್ದಾಣ ದ್ವಾರದ ಪಿ.ಬಿ.ರಸ್ತೆಯಲ್ಲಿ ನೀರು ನಿಂತು ಸಂಚಾರ ಸ್ಥಗಿತಗೊಂಡಿತ್ತು    

ಹಾವೇರಿ: ಜಿಲ್ಲೆಯಾದ್ಯಂತ ಮಂಗಳವಾರ ಗುಡುಗು–ಸಿಡಿಲು ಸಹಿತ ಉತ್ತಮ ಮಳೆಯಾಗಿದ್ದು, ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡ ಗ್ರಾಮದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಭದ್ರಾವತಿಯ ಶ್ರೀಕಾಂತ (38) ಎಂಬವರು ಮೃತಪಟ್ಟಿದ್ದಾರೆ. ಎರಡು ನಾಯಿಗಳೂ ತಂತಿ ತುಳಿದು ಸತ್ತಿವೆ.

ಧಾರಾಕಾರ ಮಳೆ
ಬ್ಯಾಡಗಿ, ರಾಣೆಬೆನ್ನೂರು, ಹಿರೇಕೆರೂರ, ರಟ್ಟೀಹಳ್ಳಿ, ಶಿಗ್ಗಾವಿ, ಸವಣೂರ ತಾಲ್ಲೂಕುಗಳಲ್ಲಿ ಧಾರಾಕಾರ ಹಾಗೂ ಹಾನಗಲ್‌ನಲ್ಲಿ ತುಂತುರು ಮಳೆಯಾಗಿದೆ. ಸವಣೂರಿನ ಕೋರಿಪೇಟೆಯ ದೊಡ್ಡ ಗಟಾರ ಒಡೆದು ಸಮೀಪದ ಮನೆಗಳಿಗೆ ನೀರು ನುಗ್ಗಿದೆ.
ಹಾವೇರಿ ನಗರದಲ್ಲಿ ಗೂಗಿಕಟ್ಟೆ, ಬಸ್‌ ನಿಲ್ದಾಣ ಬಳಿ, ಪ್ರವಾಸಿ ಮಂದಿರ ಮುಂಭಾಗ, ನಾಗೇಂದ್ರನಮಟ್ಟಿ ರೈಲ್ವೆ ಕ್ರಾಸ್ ಸೇರಿದಂತೆ ವಿವಿಧೆಡೆ ನೀರು ನಿಂತು ಸಂಚಾರ ಅಸ್ತವ್ಯಸ್ತಗೊಂಡಿದೆ.

ಪಿ.ಬಿ.ರಸ್ತೆಯಲ್ಲಿ ನೀರು ತುಂಬಿದ ಪರಿಣಾಮ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ. ಜನತೆ ಮೇಲ್‌ ಸೇತುವೆ ಬಳಸಿಕೊಂಡು ಹೋಗುವಂತಾಗಿದೆ. ಗೂಗಿಕಟ್ಟಿಯ ವಾಣಿಜ್ಯ ಮಳಿಗೆಯ ಮುಂಭಾಗದಲ್ಲಿ ನೀರು ನಿಂತಿದೆ. ನಾಗೇಂದ್ರನಮಟ್ಟಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ರೈಲ್ವೆ ಕೆಳಸೇತುವೆಯಲ್ಲಿ ನೀರು ನಿಂತು ಸಂಚಾರ ಸ್ಥಗಿತಗೊಂಡಿದೆ.

ADVERTISEMENT

48.4 ಮಿ.ಮೀ ಮಳೆ
ಸೋಮವಾರ ಸಂಜೆಯೂ ಒಂದು ತಾಸು ಮಳೆಯಾಗಿದ್ದು, ಜಿಲ್ಲೆಯಲ್ಲಿ ಸರಾಸರಿ 18.3 ಮಿ.ಮೀ. ಸುರಿದಿದೆ.ಹಾವೇರಿಯಲ್ಲಿ 48.4 ಮಿ.ಮೀ. ಮಳೆ ಸುರಿದಿತ್ತು. ಉಳಿದಂತೆ ಶಿಗ್ಗಾವಿ– 38.6, ಬ್ಯಾಡಗಿ– 17.8, ಸವಣೂರ– 15.7, ಹಿರೇಕೆರೂರ –6.7 ಮಿ.ಮೀ. ಮಳೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.