ADVERTISEMENT

ರಟ್ಟೀಹಳ್ಳಿ | ಹಿಂಗಾರು ಮಳೆ: ಬೀಜ ಖರೀದಿಗೆ ರೈತರ ಒಲವು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2023, 5:34 IST
Last Updated 9 ನವೆಂಬರ್ 2023, 5:34 IST
ರಟ್ಟೀಹಳ್ಳಿ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆಬೀಜ ಖರೀದಿಸಲು ಮುಗಿಬಿದ್ದ ರೈತರು
ರಟ್ಟೀಹಳ್ಳಿ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆಬೀಜ ಖರೀದಿಸಲು ಮುಗಿಬಿದ್ದ ರೈತರು   

ರಟ್ಟೀಹಳ್ಳಿ: ಎರಡು ದಿನಗಳಿಂದ ಸುರಿದ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಹಿಂಗಾರು ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಆದ್ದರಿಂದ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ಖರೀದಿಗೆ ರೈತರು ಮುಗಿಬಿದ್ದಿದ್ದಾರೆ.

ತಾಲ್ಲೂಕಿನಲ್ಲಿ ಮಳೆಯಾಶ್ರಿತ ಮತ್ತು ನೀರಾವರಿ ಸೇರಿ ಒಟ್ಟು 9 ಸಾವಿರ ಹೆಕ್ಟೇರ್‌ನಲ್ಲಿ ಹಿಂಗಾರು ಬೆಳೆ ಬೆಳೆಯಲಾಗುತ್ತಿದೆ. ಈ ಬಾರಿಯ ಮುಂಗಾರು ಮಳೆ ಕೈಕೊಟ್ಟ ಕಾರಣ ರೈತರು ಬೆಳೆಗಳನ್ನು ನಾಶ ಮಾಡಿ ಹಿಂಗಾರು ಬಿತ್ತನೆ ಕಾರ್ಯಕ್ಕೆ ಭೂಮಿ ಹದ ಮಾಡಿಕೊಂಡಿದ್ದರು. ಇದೀಗ ಉತ್ತಮ ಮಳೆಯಾಗಿದ್ದು, ಮಳೆಯಾಶ್ರಿತ ಭೂಮಿಯಲ್ಲಿ ಜೋಳ, ಕುಸುಬೆ, ಅಲಸಂದೆ, ಕಡಲೆ ಬೆಳೆ ಹೆಚ್ಚಾಗಿ ಬೆಳೆಯಲಾಗುತ್ತಿದೆ. ನೀರಾವರಿ ಭೂಮಿಯಲ್ಲಿ ಸೂರ್ಯಕಾಂತಿ ಮತ್ತು ಮೆಕ್ಕೆಜೋಳ ಬೆಳೆಯಲು ರೈತರು ಮುಂದಾಗಿದ್ದಾರೆ.

ಬಿತ್ತನೆಗಾಗಿ ಕಾಯುತ್ತಿದ್ದ ರೈತರಿಗೆ ಎರಡು ದಿನ ಸುರಿದ ಮಳೆ ಖುಷಿ ತಂದಿದೆ. ಕಳೆದ ವಾರದವರೆಗೂ ಬಣಗುಡುತ್ತಿದ್ದ ರೈತ ಸಂಪರ್ಕ ಕೇಂದ್ರ ಈಗ ಜನಜಂಗುಳಿಯಿಂದ ತುಂಬಿ ಹೋಗಿದೆ. ತುಂಗಾ ಮೇಲ್ದಂಡೆ ಕಾಲುವೆ ನೀರು ಮತ್ತು ಕುಮದ್ವತಿ ನದಿಯ ನೀರು ತಾಲ್ಲೂಕಿನ ರೈತರಿಗೆ ವರದಾನವಾಗಿದೆ. ತುಂಗಾ ಮೇಲ್ದಂಡೆ ಮುಖ್ಯ ಕಾಲುವೆಗೆ ನೀರು ಹರಿಸುವುದನ್ನು ಅಧಿಕಾರಿಗಳು ಮುಂದುವರೆಸಿ ರೈತರಿಗೆ ನೆರವಾಗಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ADVERTISEMENT

‘ಬಿತ್ತನೆ ಬೀಜಗಳ ದಾಸ್ತಾನು ಹೇರಳವಾಗಿದೆ’ ಎಂದು ಪಟ್ಟಣದ ಕೃಷಿ ಅಧಿಕಾರಿ ನಾಗರಾಜ ಕಾತರಕಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.