ಹಾವೇರಿ: ಮಳೆ ಬಂದರೆ ಕೆಳಸೇತುವೆಯಲ್ಲಿ ಹರಿಯುವ ಕೊಳಚೆ ನೀರು. ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಕೆಳಸೇತುವೆ ದಾಟುವ ಜನರು. ಹೂಳು ತುಂಬಿಕೊಂಡ ಕಾಲುವೆಯಿಂದ ಉಕ್ಕಿ ಹರಿದು ಮನೆಗಳಿಗೆ ನುಗ್ಗುವ ನೀರು. ಮಳೆಗಾಲ ಬಂತೆಂದರೆ, ಯಾವಾಗ ? ಏನಾಗುತ್ತದೆ ? ಎಂದು ನಿತ್ಯವೂ ಯಾತನೆ ಅನುಭವಿಸುವ ಜನರು...
ನಗರದ ನಾಗೇಂದ್ರನಮಟ್ಟಿ, ಕುಂಬಾರ ಗುಂಡಿ ಪ್ರದೇಶದ ದುಸ್ಥಿತಿಯಿದು. ಪಟ್ಟಣದ ಹೊರವಲಯದಲ್ಲಿರುವ ನಾಗೇಂದ್ರನಮಟ್ಟಿ ಹಲವು ವರ್ಷಗಳಿಂದ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ನಗರದ ಮಧ್ಯಭಾಗದಲ್ಲಿರುವ ಕುಂಬಾರ ಗುಂಡಿ ಪ್ರದೇಶ ಮಾತ್ರ, ನಗರದೊಳಗಿನ ಕೊಳಚೆ ಪ್ರದೇಶವಾಗಿಯೇ ಉಳಿದುಕೊಂಡಿದೆ. ಎರಡೂ ಪ್ರದೇಶಗಳಲ್ಲಿ ವಾಸಿಸುವ ಜನರು, ನಗರಸಭೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಲೇ ಜೀವನ ದೂಡುತ್ತಿದ್ದಾರೆ.
ಹಾವೇರಿಯ ಮೈಲಾರ ಮಹದೇವಪ್ಪ ರೈಲ್ವೆ ನಿಲ್ದಾಣಕ್ಕೆ ಹೊಂದಿಕೊಂಡಿರುವ ನಾಗೇಂದ್ರನಮಟ್ಟಿಯಲ್ಲಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನರು ಜನರು ಹೆಚ್ಚಾಗಿ ವಾಸವಿದ್ದಾರೆ. ಪೂರ್ವಜರ ಕಾಲದಿಂದಲೂ ಇದೇ ಸ್ಥಳದಲ್ಲಿ ನೆಲೆಸಿರುವ ಜನರೂ ಇದ್ದಾರೆ. ತೀರಾ ಬಡವರು, ಕಾರ್ಮಿಕರು, ದುಡಿಯುವ ವರ್ಗದ ಜನರು ಇಲ್ಲಿ ನೆಲೆಸಿದ್ದಾರೆ.
‘ನಗರದಲ್ಲಿ ಬಾಡಿಗೆ ಮನೆ ಮಾಡಿದರೆ ಹೆಚ್ಚು ಹಣ ಬೇಕಾಗುತ್ತದೆ’ ಎಂದು ತಿಳಿದ ಹಲವು ಕಾರ್ಮಿಕರು, ಕಡಿಮೆ ಬಾಡಿಗೆ ಎಂಬ ಕಾರಣಕ್ಕೆ ನಾಗೇಂದ್ರನಮಟ್ಟಿಯಲ್ಲಿ ವಾಸವಿದ್ದಾರೆ. ನಾಗೇಂದ್ರನಮಟ್ಟಿಯ ಕೆಲ ಭಾಗಗಳಲ್ಲಿ ಮಾತ್ರ ನಿರಂತರವಾಗಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು, ಬಹುತೇಕ ಭಾಗಗಳನ್ನು ಕಡೆಗಣಿಸಿರುವ ಆರೋಪವಿದೆ.
ನಾಗೇಂದ್ರನಮಟ್ಟಿಯ ಹಲವು ಮನೆಗಳು ತಗ್ಗು ಪ್ರದೇಶದಲ್ಲಿವೆ. ಕಡಿಮೆ ಹಣವೆಂಬ ಕಾರಣಕ್ಕೆ ‘ಅಕ್ರಮ–ಸಕ್ರಮ’ ಮೂಲಕ ಜನರು ಮನೆ ಕಟ್ಟಿಕೊಂಡಿದ್ದಾರೆ. ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನೂ ನೀಡಲಾಗಿದೆ. ಈ ಭಾಗದಲ್ಲಿರುವ ಕಾಲುವೆ ಹೂಳು ತುಂಬಿಕೊಂಡಿದ್ದರಿಂದ, ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ಹಾಗೂ ಇತರೆ ಸ್ಥಳಗಳಿಗೆ ನೀರು ನುಗ್ಗುವುದು ಸಾಮಾನ್ಯವಾಗಿದೆ.
ನಗರದಲ್ಲಿ ಮಳೆ ಶುರುವಾಗುತ್ತಿದ್ದಂತೆ ನಾಗೇಂದ್ರನಮಟ್ಟಿ ಜನರನ್ನು, ನಡುಕ ಶುರುವಾಗುತ್ತದೆ. ಜೋರು ಮಳೆಯಾದರೆ, ಅದೇ ನೀರು ಕಾಲುವೆಗಳ ಮೂಲಕ ಮನೆಗೆ ನುಗ್ಗುತ್ತದೆಂಬ ಭಯವೂ ಕಾಡುತ್ತದೆ. ಹಲವು ವರ್ಷಗಳಿಂದ ನಿತ್ಯವೂ ಯಾತನೆ ಅನುಭವಿಸುತ್ತಿರುವ ಜನರು, ತಮ್ಮ ಸಮಸ್ಯೆಗೆ ಯಾವಾಗ ಮುಕ್ತಿ ಸಿಗುತ್ತದೆಂದು ಕಾಯುತ್ತಿದ್ದಾರೆ.
ಅವೈಜ್ಞಾನಿಕ ಕಾಲುವೆ, ಮೇಲ್ಸೇತುವೆಗೆ ಆಗ್ರಹ:
ಸಿಂದಗಿ ಮಠದ ಮೂಲಕ ನಾಗೇಂದ್ರನಮಟ್ಟಿಗೆ ಸಂಪರ್ಕ ಕಲ್ಪಿಸಲು ರೈಲ್ವೆ ಹಳಿಗೆ ಕೆಳಗಿನ ರಸ್ತೆಯಲ್ಲಿ ಸೇತುವೆ ನಿರ್ಮಿಸಲಾಗಿದೆ. ಹಲವು ವರ್ಷಗಳ ಹಿಂದೆ ನಿರ್ಮಿಸಿದ ಈ ಸೇತುವೆ ಶಿಥಿಲಾವಸ್ಥೆ ತಲುಪಿದೆ. ಹಾವೇರಿಯ ಹಲವು ಪ್ರದೇಶಗಳ ಕೊಳಚೆ ನೀರನ್ನು ನೇರವಾಗಿ ಕೆಳಸೇತುವೆಗೆ ಬಿಡಲಾಗುತ್ತಿದ್ದು, ಇದರಿಂದಾಗಿ ಕೆಳಸೇತುವೆ ಮತ್ತಷ್ಟು ಹದಗೆಟ್ಟಿದೆ.
ಮಳೆ ಬರುವ ಸಂದರ್ಭದಲ್ಲಿ ಕೆಳಸೇತುವೆಗೆ ಕೊಳಚೆ ನೀರು ನುಗ್ಗುತ್ತಿದೆ. ಎರಡದಿಂದ ನಾಲ್ಕು ಅಡಿಯಷ್ಟು ನೀರು ಹರಿಯುತ್ತಿದೆ. ಕೆಳಸೇತುವೆಯನ್ನೇ ನಂಬಿರುವ ಹಲವು ಜನರು, ಅದೇ ನೀರಿನಲ್ಲಿಯೇ ಸಂಚರಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಕೆಲವರು, ವಾಹನ ಸಮೇತ ನೀರಿನಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ.
ಕೆಲ ತಿಂಗಳ ಹಿಂದೆಯಷ್ಟೇ ಇದೇ ನೀರಿನಲ್ಲಿಯೇ ಆಟೊವೊಂದು ಕೊಚ್ಚಿಕೊಂಡು ಹೋಗಿತ್ತು. ಚಾಲಕ ಆಟೊದಿಂದ ಜಿಗಿದು ನೀರಿನಲ್ಲಿ ಈಜಿ ದಡ ತಲುಪಿ ಪ್ರಾಣಾಪಾಯದಿಂದ ಪಾರಾಗಿದ್ದ. ಪ್ರತಿ ಬಾರಿ ಮಳೆ ಬಂದಾಗಲೂ ಇಂಥ ಘಟನೆಗಳು ಮರುಕಳಿಸುತ್ತಿವೆ. ‘ಕೆಳಸೇತುವೆ ದುರಸ್ತಿಪಡಿಸಬೇಕು. ಕೊಳಚೆ ನೀರು ಸೇರದಂತೆ ಕ್ರಮ ಕೈಗೊಳ್ಳಬೇಕು’ ಎಂಬ ಆಗ್ರಹಗಳು ಕೇವಲ ಮಳೆಗಾಲಕ್ಕಷ್ಟೇ ಸೀಮಿತವಾಗುತ್ತಿವೆ. ಮಳೆ ಹೋದ ನಂತರ, ಈ ವಿಷಯದ ಬಗ್ಗೆ ಯಾರೊಬ್ಬರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಸದ್ಯದಲ್ಲೇ ಮಳೆಗಾಲ ಶುರುವಾಗುತ್ತಿದ್ದು, ಈ ವರ್ಷವೂ ಸಮಸ್ಯೆ ತಪ್ಪಿದಲ್ಲವೆಂದು ಜನರು ಅಳಲು ತೋಡಿಕೊಳ್ಳುತ್ತಿದ್ದಾರೆ.
‘ನನ್ನ ತಂದೆ ಕಾಲದಿಂದಲೂ ಕೆಳ ಸೇತುವೆಯಿದೆ. ಪ್ರತಿ ಬಾರಿ ಮಳೆ ಬಂದಾಗ, ಕೆಳಸೇತುವೆಯಲ್ಲಿಯೇ ನೀರು ಹರಿಯುತ್ತದೆ. ಇದರಿಂದ ಸ್ಥಳೀಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆಗಿಂತಲೂ ಕೆಳಗಡೆ ಜಾಗದಲ್ಲಿ ಕೆಳಸೇತುವೆ ಇರುವುದರಿಂದ ಈ ಸಮಸ್ಯೆಯಾಗುತ್ತಿದೆ. ಈ ಭಾಗದಲ್ಲಿ ಮೇಲ್ಸೇತುವೆ ನಿರ್ಮಿಸಿದರೆ, ಸ್ಥಳೀಯರು ನೆಮ್ಮದಿಯಿಂದ ಓಡಾಡಲಿದ್ದಾರೆ’ ಎಂದು ಸ್ಥಳೀಯ ನಿವಾಸಿ ಆನಂದ ಹೇಳಿದರು.
ಸಣ್ಣದಾದ ಕಾಲುವೆ:
ನಾಗೇಂದ್ರನಮಟ್ಟಿಯ ಕೆಳಸೇತುವೆಗೆ ಹೊಂದಿಕೊಂಡು ಗುತ್ತಲ ರಸ್ತೆಯವರೆಗೂ ದೊಡ್ಡ ಕಾಲುವೆಯಿದೆ. ಆದರೆ, ವರ್ಷ ಕಳೆದಂತೆ ಹೂಳು ತುಂಬಿಕೊಂಡು ಕಾಲುವೆ ಗಾತ್ರವೂ ಸಣ್ಣದಾಗಿದೆ. ಇದೇ ಕಾರಣಕ್ಕೆ ಕಾಲುವೆಯಲ್ಲಿ ಹರಿಬೇಕಿದ್ದ ನೀರು, ರಸ್ತೆಗೆ ಹರಿದು ಅಕ್ಕ–ಪಕ್ಕದ ಮನೆಗಳಿಗೆ ನುಗ್ಗುತ್ತಿದೆ.
ಕೆಳಸೇತುವೆ ಮೂಲಕ ಹಾಗೂ ನಾಗೇಂದ್ರನಮಟ್ಟಿಯ ಮೇಲ್ಮಟ್ಟದ ಪ್ರದೇಶಗಳಿಂದ ಬರುವ ನೀರು, ಕಾಲುವೆ ಸೇರುತ್ತಿದೆ. ಅದೇ ನೀರು ಕಾಲುವೆಯಿಂದ ಹೊರಕ್ಕೆ ಹರಿದು, ತಗ್ಗು ಪ್ರದೇಶದತ್ತ ನುಗುತ್ತಿದೆ. ಜೋರು ಮಳೆ ಬಂದ ಸಂದರ್ಭದಲ್ಲಿ ಮನೆಗಳಿಗೆ ನೀರು ನುಗ್ಗುವುದು ಸಾಮಾನ್ಯವಾಗಿದ್ದು, ನಿವಾಸಿಗಳು ಭಯದಲ್ಲ ಜೀವನ ನಡೆಸುತ್ತಿದ್ದಾರೆ.
‘ರೈಲ್ವೆ ಹಳಿಯ ಪಕ್ಕದಲ್ಲಿರುವ ಕಾಲುವೆಯನ್ನು ಹೂಳು ತೆಗೆಯಬೇಕು. ನೀರು ಸರಾಗವಾಗಿ ಹರಿದು ಮುಂದಕ್ಕೆ ಹೋಗಲು ದಾರಿ ಮಾಡಬೇಕು. ಅವಾಗಲೇ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ’ ಎಂದು ಸ್ಥಳೀಯರು ಹೇಳಿದರು.
ತ್ವರಿತವಾಗಿ ಮೇಲ್ಸೇತುವೆ ಆಗಬೇಕು. ಕಾಲುವೆ ಹೂಳೆತ್ತಿ ನೀರು ಹರಿದುಹೋಗಲು ದಾರಿ ಮಾಬೇಕುಶಂಕರ ನಾಗೇಂದ್ರನಮಟ್ಟಿ ನಿವಾಸಿ
ನಾಗೇಂದ್ರನಮಟ್ಟಿ ಬ್ಯಾಡಗಿ ಕಾಕೋಳ ಸೇರಿ ಹಲವೆಡೆ ರೈಲ್ವೆ ಮೇಲ್ಸೇತುವೆಗಳ ಅವಶ್ಯವಿದ್ದು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಾಗಿದೆಬಸವರಾಜ ಬೊಮ್ಮಾಯಿ ಸಂಸದ
ವೃದ್ಧಾಶ್ರಮಕ್ಕೆ ನುಗ್ಗಿದ್ದ ನೀರು
ಕಾಲುವೆ ಸಮೀಪದ ಪ್ರದೇಶದಲ್ಲಿ ಶಕ್ತಿ ವೃದ್ಧಾಶ್ರಮವಿದೆ. ಕಳೆದ ಬಾರಿ ಜೋರು ಮಳೆ ಸುರಿದ ಸಂದರ್ಭದಲ್ಲಿ ವೃದ್ಧಾಶ್ರಮಕ್ಕೂ ನೀರು ನುಗ್ಗಿತ್ತು. ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಹಾಗೂ ಜಿಲ್ಲಾಡಳಿತ 17 ಹಿರಿಯ ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದರು. ಇದೇ ಪ್ರದೇಶದಲ್ಲಿದ್ದ ಉರ್ದು ಶಾಲೆಯ ಕಟ್ಟಡಕ್ಕೂ ನೀರು ನುಗ್ಗಿತ್ತು. ಶಾಲೆಗೆ ರಜೆ ಇದ್ದಿದ್ದರಿಂದ ಸಮಸ್ಯೆ ಆಗಿರಲಿಲ್ಲ. ಮಳೆಗಾಲ ಶುರುವಾಗುತ್ತಿದ್ದಂತೆ ಶಾಲೆಯೂ ಆರಂಭವಾಗಲಿದೆ. ಮಕ್ಕಳು ಶಾಲೆಯಲ್ಲಿದ್ದ ಸಂದರ್ಭದಲ್ಲಿ ಮಳೆಯಾಗಿ ಏನಾದರೂ ಅನಾಹುತವಾದರೆ ಯಾರು ಹೊಣೆ ? ಎಂದು ಜನರು ಪ್ರಶ್ನಿಸುತ್ತಿದ್ದಾರೆ.
‘ಕೊಳಚೆ ನೀರಿನ ಮಧ್ಯೆ ಕುಂಬಾರ ಗುಂಡಿ‘
ಮಣ್ಣಿನಿಂದ ಮಡಿಕೆ ಹಾಗೂ ಇತರೆ ವಸ್ತುಗಳನ್ನು ತಯಾರಿಸಿ ಮಾರುತ್ತಿರುವ ಕುಂಬಾರರು ಗುತ್ತಲ ರಸ್ತೆಯಲ್ಲಿರುವ ಜಾಗದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಆದರೆ ಇವರು ವಾಸವಿರುವ ಪ್ರದೇಶದ ಪಕ್ಕದಲ್ಲಿಯೇ ಬೃಹತ್ ಕಾಲುವೆಯಿದೆ. ಮಳೆಗಾಲದ ಸಂದರ್ಭದಲ್ಲಿ ಕಾಲುವೆ ನೀರು ಮನೆಗಳಿಗೆ ನುಗ್ಗುತ್ತಿದ್ದು ಮಳೆಗಾಲದ ದಿನಗಳು ಕುಂಬಾರರಿಗೆ ಭಯ ಹುಟ್ಟಿಸುತ್ತಿವೆ. ‘ಶಿವಲಿಂಗನಗರದಲ್ಲಿರುವ ಕುಂಬಾರ ಗುಂಡಿ ಕೊಳಚೆ ಪ್ರದೇಶ ವಾಸವಿದ್ದೇವೆ. ನಮ್ಮ ವೃತ್ತಿ ಮೂಲಕವೇ ಕಾಯಕ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಆದರೆ ಮಳೆಗಾಲದಲ್ಲಿ ನೀರು ಮನೆಗಳಿಗೆ ನುಗ್ಗಿ ಸಮಸ್ಯೆಯಾಗುತ್ತಿದೆ. ನಮ್ಮ ಸಮಸ್ಯೆಗೆ ಶಾಶ್ವರ ಪರಿಹಾರ ಸೂಚಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ’ ಎಂದು ನಿವಾಸಿಗಳು ದೂರಿದರು.
‘ಎಚ್ಚೆತ್ತುಕೊಳ್ಳದಿದ್ದರೆ ಅನಾಹುತ’
ನಾಗೇಂದ್ರನಮಟ್ಟಿ ಕುಂಬಾರ ಗುಂಡಿ ಮಾತ್ರವಲ್ಲದೇ ಹಾವೇರಿ ನಗರ ಹಾಗೂ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಇಂದಿಗೂ ಜನರು ಭಯದಲ್ಲಿ ಜೀವನ ಮಾಡುತ್ತಿದ್ದಾರೆ. ಮಳೆಗಾಲ ಬಂತೆಂದರೆ ಅವರೆಲ್ಲರೂ ಆತಂಕಗೊಳ್ಳುತ್ತಿದ್ದಾರೆ. ಮಳೆಯಿಂದ ಮತ್ತೇನು ಅವಾಂತರ ಆಗುತ್ತದೆಂದು ಭೀತಿಯಲ್ಲಿದ್ದಾರೆ. ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಮನೆ ನೀರು ನುಗ್ಗುವ ಪ್ರದೇಶಗಳ ಅಭಿವೃದ್ಧಿಗೆ ಮುಂದಾಗಬೇಕಿದೆ. ಇಲ್ಲದಿದ್ದರೆ ಅನಾಹುತಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ‘ನಾಗೇಂದ್ರನಮಟ್ಟಿ ಕೆಳಸೇತುವೆ ಹಾಗೂ ಕಾಲುವೆ ಸಮಸ್ಯೆ ಬಗ್ಗೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಪ್ರತಿ ಬಾರಿಯೂ ಚರ್ಚೆ ಆಗುತ್ತದೆ. ಆದರೆ ಪರಿಹಾರ ಸಿಗುತ್ತಿಲ್ಲ. ಇತ್ತೀಚೆಗೆ ರೈಲ್ವೆ ನಿಲ್ದಾಣದಲ್ಲಿ ನಡೆದ ವಂದೇ ಭಾರತ್ ರೈಲು ನಿಲುಗಡೆ ಉದ್ಘಾಟನೆ ಸಮಾರಂಭದಲ್ಲೂ ನಾಗೇಂದ್ರನಮಟ್ಟಿ ಕೆಳಸೇತುವೆ ಪ್ರಸ್ತಾಪವಾಗಿದೆ. ಈ ಭಾಗದಲ್ಲಿ ಮೇಲ್ಸೇತುವೆ ನಿರ್ಮಿಸಬೇಕೆಂಬ ಒತ್ತಾಯವೂ ಇದೆ. ಈ ಕೆಲಸ ತ್ವರಿತವಾಗಿ ಆಗಬೇಕು’ ಎಂದು ಸ್ಥಳೀಯರು ಆಗ್ರಹಿಸಿದರು. ‘ನಾಗೇಂದ್ರನಮಟ್ಟಿಗೆ ಬಸವೇಶ್ವರ ನಗರ (ರೈಲ್ವೆ ಗೇಟ್) ಹಾಗೂ ಗುತ್ತಲ ರಸ್ತೆಯಿಂದ ಸಂಪರ್ಕ ಕಲ್ಪಿಸಲು ಪರ್ಯಾಯ ರಸ್ತೆಯಿದೆ. ಆದರೆ ಈ ರಸ್ತೆಗಳೂ ಹಾಳಾಗಿವೆ. ಜೊತೆಗೆ ನಿರ್ಜನ ಪ್ರದೇಶದಲ್ಲಿ ಈ ರಸ್ತೆಗಳಿವೆ. ರಾತ್ರಿ ಸಮಯದಲ್ಲಿ ಓಡಾಡಲು ಸಾಧ್ಯವಿಲ್ಲ. ಇದ್ದಿದ್ದರಲ್ಲಿ ಕೆಳಸೇತುವೆ ರಸ್ತೆಯೇ ಸುರಕ್ಷಿತ. ಆದರೆ ಕೊಳಚೆ ನೀರು ನುಗ್ಗುತ್ತಿರುವುದರಿಂದ ಹೆಚ್ಚು ಸಮಸ್ಯೆಯಾಗುತ್ತಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.