ADVERTISEMENT

ನೂಲ ಹುಣ್ಣಿಮೆ: ದೇವರಗುಡ್ಡದ ಮಾಲತೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ

ರಾಖಿಯ ಶ್ರೀರಕ್ಷೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 4:54 IST
Last Updated 10 ಆಗಸ್ಟ್ 2025, 4:54 IST
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡದ ಮಾಲತೇಶ ದೇವಸ್ಥಾನದಲ್ಲಿ ನೂಲ ಹುಣ್ಣಿಮೆ ನಿಮಿತ್ತ ಭಕ್ತರು ಶನಿವಾರ ದೇವರ ಚಾಕರಿ ಮಾಡಿದರು 
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡದ ಮಾಲತೇಶ ದೇವಸ್ಥಾನದಲ್ಲಿ ನೂಲ ಹುಣ್ಣಿಮೆ ನಿಮಿತ್ತ ಭಕ್ತರು ಶನಿವಾರ ದೇವರ ಚಾಕರಿ ಮಾಡಿದರು     

ಹಾವೇರಿ: ಜಿಲ್ಲೆಯಾದ್ಯಂತ ನೂಲ ಹುಣ್ಣಿಮೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿದ್ಯಾರ್ಥಿನಿಯರು, ಯುವತಿಯರು ಹಾಗೂ ಮಹಿಳೆಯರು, ತಮ್ಮ ಸಹೋದರರಿಗೆ ರಾಖಿ ಕಟ್ಟಿದರು.

ಬೆಳಿಗ್ಗೆಯಿಂದಲೇ ಮನೆಗಳಲ್ಲಿ ಸಹೋದರರಿಗೆ ರಾಖಿ ಕಟ್ಟಲಾಯಿತು. ನಂತರ, ಪರಿಚಯಸ್ಥರ ಮನೆಗಳಲ್ಲಿ, ಶಾಲಾ–ಕಾಲೇಜುಗಳಲ್ಲಿ, ದೇವಸ್ಥಾನಗಳಲ್ಲಿ ಹಾಗೂ ಕೆಲಸದ ಸ್ಥಳದಲ್ಲಿ ರಾಖಿ ಕಟ್ಟಿ ಸಿಹಿ ತಿನ್ನಿಸಿದರು. ರಾಖಿ ಕಟ್ಟಿಸಿಕೊಂಡ ಸಹೋದರರು ಪ್ರತಿಯಾಗಿ ಉಡುಗೊರೆ ನೀಡಿದರು.

ಹಾವೇರಿ, ರಾಣೆಬೆನ್ನೂರು, ಹಾನಗಲ್, ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ, ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕಿನಲ್ಲೂ ರಾಖಿ ಹಬ್ಬವನ್ನು ಆಚರಿಸಲಾಯಿತು.

ADVERTISEMENT

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ), ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್ಎಫ್ಐ) ಹಾಗೂ ಇತರೆ ಸಂಘಟನೆ ನೇತೃತ್ವದಲ್ಲಿಯೂ ರಕ್ಷಾ ಬಂಧನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಮಾಲತೇಶ ದೇವಸ್ಥಾನ: ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡದ ಮಾಲತೇಶ ದೇವಸ್ಥಾನದಲ್ಲಿ ನೂಲ ಹುಣ್ಣಿಮೆ ನಿಮಿತ್ತ ಶನಿವಾರ ವಿಶೇಷ ಪೂಜೆ ನಡೆಯಿತು.

ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ಬಂದಿದ್ದ ಭಕ್ತರು, ಸರದಿಯಲ್ಲಿ ನಿಂತು ದೇವರ ದರುಶನ ಪಡೆದುಕೊಂಡರು.

ದೇವಸ್ಥಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಧಾರ್ಮಿಕ ಪದ್ಧತಿಯಂತೆ ಭಕ್ತರು, ದೀವಟಗಿ ಹಚ್ಚಿ ದೇವರ ಸೇವೆ ಮಾಡಿದರು.

ಮಾಲತೇಶ ದೇವರಿಗೆ ಬೆಳಿಗ್ಗೆಯಿಂದಲೇ ಅಭಿಷೇಕ ಹಾಗೂ ವಿಶೇಷ ಪೂಜೆ ನಡೆಯಿತು. ದೇವರಿಗೆ ಹೂವಿನ ಅಲಂಕಾರ, ಬಂಡಾರ ಸೇವೆ ನಡೆಯಿತು.

ಕಾಲಿಗೆ ಗೆಜ್ಜೆ ಕಟ್ಟಿ ಚಾಟಿ ಹಿಡಿದಿದ್ದ ಭಕ್ತರು, ಕುದುರೆಕಾರರಾಗಿ ಹೆಜ್ಜೆ ಹಾಕಿ ದೇವರ ಹೆಸರಿನಲ್ಲಿ ಚಾಕರಿ ಮಾಡಿದರು.

ʻಏಳು ಕೋಟಿ ಏಳು ಕೋಟಿ ಏಳು ಕೋಟಿಗೊ ಚಾಂಗಮಲೋʼ ಘೋಷಣೆ ಕೂಗುತ್ತ ದೇವರ ನೆನೆದರು. ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು. ಗೆಜ್ಜೆ ಕುಣಿತ, ಬಾರ ಕೋಲು, ಚಾವಟಿ ಮತ್ತು ಹರಕೆ, ಭಂಡಾರ, ಹಣ್ಣು ತುಪ್ಪ ಸೇವೆಯನ್ನು ಭಕ್ತರು ಮಾಡಿದರು. ಭಕ್ತರ ವೇಷಭೂಷಣವೂ ಗಮನ ಸೆಳೆಯಿತು.

ಕೋಣನತಂಬಗಿ ತೆಪ್ಪೊತ್ಸವ: ಹಾವೇರಿ ತಾಲ್ಲೂಕಿನ ಕೋಣನತಂಬಗಿ ಗ್ರಾಮದಲ್ಲಿ ಸಿದ್ಧಾರೂಢರ ತೆಪ್ಪೊತ್ಸವವನ್ನು ಅದ್ಧೂರಿಯಾಗಿ ನಡೆಸಲಾಯಿತು. ತೆಪ್ಪಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ತೆಪೊತ್ಸವದಲ್ಲಿ ದೇವರ ದರುಶನ ಪಡೆದರು. ಡೊಳ್ಳು, ಕೋಲಾಟ ತೆಪ್ಪೊತ್ಸವಕ್ಕೆ ಮೆರುಗು ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.