ADVERTISEMENT

ರಂಜಾನ್: ಸಾಮೂಹಿಕ ಪ್ರಾರ್ಥನೆ ನಿಷೇಧ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2020, 13:44 IST
Last Updated 16 ಏಪ್ರಿಲ್ 2020, 13:44 IST
   

ಹಾವೇರಿ: ಕೋವಿಡ್-19 ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮೇ 3ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುವ ಕಾರಣ ಮುಸ್ಲಿಮರುಪವಿತ್ರ ರಂಜಾನ್ ತಿಂಗಳ ಉಪವಾಸ ಸಂದರ್ಭದಲ್ಲಿ ಸಾಮೂಹಿಕ ಪ್ರಾರ್ಥನೆ ಹಾಗೂ ಮಸೀದಿ, ದರ್ಗಾಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಿ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಮತ್ತು ಹಜ್ ಇಲಾಖೆ ಸರ್ಕಾರದ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ರಂಜಾನ್ ಮಾಸಾಚರಣೆ ವೇಳೆಯಲ್ಲಿ ಮಸೀದಿ ಹಾಗೂ ದರ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಬಾರದು ಹಾಗೂ ಧ್ವನಿವರ್ಧಕಗಳ ಮೂಲಕ ಪ್ರಾರ್ಥನೆಯ ಕುರಿತು ಸಾರ್ವಜನಿಕ ಮಾಹಿತಿ ನೀಡಬಾರದು. ಅದೇ ಧ್ವನಿವರ್ಧಕಗಳ ಮೂಲಕ ಅಜಾನ್ ಕೂಗುವುದು ಮತ್ತು ಉಪವಾಸ ವ್ರತ ಅಂತ್ಯ ಕುರಿತಂತೆ ಜೋರಾದ ಶಬ್ದದೊಂದಿಗೆ ಮಾಹಿತಿ ನೀಡಬಾರದು. ಹಾಗೆಯೇ ಸಾಮೂಹಿಕ ಪ್ರಾರ್ಥನೆ ವೇಳೆ ಧ್ವನಿವರ್ಧಕ ಬಳಿಸಿ ಪ್ರವಚನ ನೀಡಬಾರದು. ಇಫ್ತಾರ್ ಕೂಟಗಳು ಮತ್ತು ಸಾಮೂಹಿಕ ಭೋಜನ ಕೂಟ ಆಯೋಜಿಸುವಂತಿಲ್ಲ. ಮಸೀದಿ ಮತ್ತು ಮೊಹಲ್ಲಾಗಳಲ್ಲಿ ತಂಪು ಪಾನೀಯ, ಗಂಜಿ ವಿತರಿಸುವಂತಿಲ್ಲ. ಮಸೀದಿ ಮತ್ತು ದರ್ಗಾಗಳ ಸುತ್ತಮುತ್ತ ಉಪಾಹಾರ ಅಂಗಡಿಗಳನ್ನು ಹಾಕುವುದನ್ನು ನಿಷೇಧಿಸಲಾಗಿದೆ ಎಂದು ಹಾವೇರಿ ಉಪ ವಿಭಾಗಾಧಿಕಾರಿ ಡಾ.ದಿಲೀಷ್ ಶಶಿ ಅವರು ತಿಳಿಸಿದ್ದಾರೆ.

ರಂಜಾನ್ ನಮಾಜ್ ಹೆಸರಿನಲ್ಲಿ ಗುಂಪು ಸೇರುವಂತಿಲ್ಲ. ಅಂತರವನ್ನು ಕಾಯ್ದುಕೊಂಡು ನಮಾಜ್ ಮಾಡಬೇಕು. ಹೊರಗೆ ಓಡಾಡುವಾಗ ಮಾಸ್ಕ್ ಧರಿಸಬೇಕು, ಬಡವರಿಗೆ ಸಹಾಯ ಮಾಡುವ ಹೆಸರಿನಲ್ಲಿ ಗುಂಪು ಗುಂಪಾಗಿ ಸೇರಬಾರದು. ಮನೆಯಲ್ಲಿಯೇ ರಂಜಾನ್ ಹಬ್ಬವನ್ನು ಆಚರಿಸಬೇಕು ಹಾಗೂ ವೈದ್ಯಕೀಯ ಸಿಬ್ಬಂದಿಗಳೊಂದಿಗೆ ಸಹಕರಿಸಬೇಕು ಎಂದು ತಿಳಿಸಿದ್ದಾರೆ.

ADVERTISEMENT

ಅಬಕಾರಿ ಇಲಾಖೆಯಿಂದ 428 ದಾಳಿ

ಹಾವೇರಿ: ಕೊರೋನಾ ವೈರಸ್ ಸೋಂಕು ತಟೆಗಟ್ಟುವಿಕೆ ಹಿನ್ನೆಲೆಯಲ್ಲಿ ಜಾರಿಯಾದ ನಿಷೇಧಾಜ್ಞೆ ಸಮಯದಲ್ಲಿ ಅಬಕಾರಿ ಇಲಾಖೆಯಿಂದ 428 ದಾಳಿ ನಡೆಸಿ, 27 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅಬಕಾರಿ ಇಲಾಖೆ ಉಪ ಅಧೀಕ್ಷಕರು ತಿಳಿಸಿದ್ದಾರೆ.

ಮಾರ್ಚ್ 24ರಿಂದ ಏ.15ರವರೆಗೆ 428 ಕಡೆಗಳಲ್ಲಿ ತನಿಖಾ ದಾಳಿ ನಡೆಸಲಾಗಿದೆ. ಜಿಲ್ಲೆಯಲ್ಲಿ ಮೆಥನಾಲ್ ಬಳಸುವ ಎರಡು ಕೈಗಾರಿಕೆಗಳಿದ್ದು, ಸದರಿ ಕೈಗಾರಿಕೆಗಳಿಗೆ 29 ಬಾರಿ ಭೇಟಿ ಮತ್ತು ತಪಾಸಣೆ ನಡೆಸಲಾಗಿದೆ. ಈ ಹಿಂದಿನ ಹಳೆಯ ಕಳ್ಳಭಟ್ಟಿ ಕೇಂದ್ರಗಳಿಗೆ 277 ಸಲ ಭೇಟಿ ನೀಡಿ ತಪಾಸಣೆ ಮಾಡಲಾಗಿದೆ. ಒಟ್ಟು 27 ಪ್ರಕರಣಗಳನ್ನು ದಾಖಲಿಸಲಾಗಿದೆ ಹಾಗೂ 16 ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. 122.850 ಲೀಟರ್ ಮದ್ಯ, 36.300 ಲೀಟರ್ ಬಿಯರ್, 122 ಲೀಟರ್ ಕಳ್ಳಬಟ್ಟಿ ಸಾರಾಯಿ ವಶಪಡಿಸಿಕೊಳ್ಳಲಾಗಿದೆ. 1625 ಲೀಟರ್ ಕೊಳೆ ಅಥವಾ ರಸಾಯನ ವಶಪಡಿಸಿಕೊಂಡು ನಾಶಪಡಿಸಲಾಗಿದೆ ಹಾಗೂ ಐದು ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಭಾರಅಬಕಾರಿ ಉಪ ಅಧೀಕ್ಷಕ ಹೊನ್ನಪ್ಪ ಓಲೇಕಾರ ಮೊ: 94495 97099 ಅವರನ್ನು ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಅಬಕಾರಿ ಅಕ್ರಮಗಳು ಏನಾದರೂ ಕಂಡುಬಂದಲ್ಲಿ ಜಿಲ್ಲಾ ಮಟ್ಟದ ಕಂಟ್ರೋಲ್ ರೂಂ 08375-232902 ಅಥವಾ ಈ ಮೇಲ್ಕಂಡ ಅಧಿಕಾರಿಗಳಿಗೆ ಮಾಹಿತಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.