ADVERTISEMENT

ರಾಣೆಬೆನ್ನೂರು | ‘ಮುಳ್ಳು ಸಜ್ಜೆ ಹತೋಟಿಗೆ ಬೆಳೆ ಪರಿವರ್ತನೆ’

ಮೆಕ್ಕೆಜೋಳದಲ್ಲಿ ಮುಳ್ಳುಸಜ್ಜೆ ಕಳೆ ನಿರ್ವಹಣೆಯ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 2:52 IST
Last Updated 19 ಜುಲೈ 2025, 2:52 IST
ರಾಣೆಬೆನ್ನೂರು ತಾಲ್ಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮೆಕ್ಕೆಜೋಳ ಬೆಳೆಯುವ ಜಿಲ್ಲೆಯ ರೈತರಿಗೆ ಏರ್ಪಡಿಸಿದ ಮೆಕ್ಕೆಜೋಳದಲ್ಲಿ ಮುಳ್ಳುಸಜ್ಜೆ ಕಳೆ ನಿರ್ವಹಣೆಯ ಕಾರ್ಯಾಗಾರ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪಿ. ಎಲ್. ಪಾಟೀಲ ಮಾತನಾಡಿದರು.
ರಾಣೆಬೆನ್ನೂರು ತಾಲ್ಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮೆಕ್ಕೆಜೋಳ ಬೆಳೆಯುವ ಜಿಲ್ಲೆಯ ರೈತರಿಗೆ ಏರ್ಪಡಿಸಿದ ಮೆಕ್ಕೆಜೋಳದಲ್ಲಿ ಮುಳ್ಳುಸಜ್ಜೆ ಕಳೆ ನಿರ್ವಹಣೆಯ ಕಾರ್ಯಾಗಾರ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪಿ. ಎಲ್. ಪಾಟೀಲ ಮಾತನಾಡಿದರು.   

ರಾಣೆಬೆನ್ನೂರು: ‘ಜಿಲ್ಲೆಯಲ್ಲಿ ಮೆಕ್ಕೆಜೋಳವನ್ನು ಏಕಬೆಳೆ ಪದ್ಧತಿಯಾಗಿ ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಕಾಲದಲ್ಲಿ ಬೆಳೆಯುತ್ತಿದ್ದು, ಇದರಿಂದ ಮುಳ್ಳುಸಜ್ಜೆ ಕಳೆಯ ಹಾವಳಿ ಹೆಚ್ಚಾಗಿದೆ. ಮುಳ್ಳು ಸಜ್ಜೆ ಹತೋಟಿ ಮಾಡಲು ರೈತರು ಬೆಳೆ ಪರಿವರ್ತನೆಯನ್ನು ಅಳವಡಿಸಿಕೊಳ್ಳಬೇಕು’ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪಿ.ಎಲ್.ಪಾಟೀಲ ಹೇಳಿದರು.

ತಾಲ್ಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಶುಕ್ರವಾರ ಹನುಮನಮಟ್ಟಿಯ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಕಾಲೇಜು, ಧಾರವಾಡ ಅಖಿಲ ಭಾರತ ಸಮನ್ವಯ ಸಂಶೋಧನಾ ಯೋಜನೆ (ಮೆಕ್ಕೆಜೋಳ) ಆಶ್ರಯದಲ್ಲಿ ಶುಕ್ರವಾರ ಜಿಲ್ಲೆಯ ಮೆಕ್ಕೆಜೋಳ ಬೆಳೆಯುವ ರೈತರಿಗೆ ಏರ್ಪಡಿಸಿದ ಮೆಕ್ಕೆಜೋಳದಲ್ಲಿ ಮುಳ್ಳುಸಜ್ಜೆ ಕಳೆ ನಿರ್ವಹಣೆಯ ಕಾರ್ಯಾಗಾರದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರೈತರು ಮುಂಗಾರಿನಲ್ಲಿ ಸೋಯಾಅವರೆ ಬೆಳೆದು ಹಿಂಗಾರಿನಲ್ಲಿ ಮೆಕ್ಕೆಜೋಳ ಬೆಳೆಯುವುದರಿಂದ ಮುಳ್ಳುಸಜ್ಜೆಯನ್ನು ಕಾಲಕ್ರಮೇಣ ನಿಯಂತ್ರಣ ಮಾಡಬಹುದು ಎಂದರು.

ADVERTISEMENT

ಹಿರೆಕೆರೂರು ಶಾಸಕ ಯು.ಬಿ. ಬಣಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಾವೇರಿ ಜಿಲ್ಲೆಯಲ್ಲಿ ಮೊದಲು ಅತೀ ಹೆಚ್ಚು ಮೆಣಸಿನಕಾಯಿ ಬೆಳೆಯುತ್ತಿದ್ದರು. ಮುಟೂರು ರೋಗದ ಹಾವಳಿಯಿಂದ ರೈತರು ಮೆಣಸಿನಕಾಯಿ ಬೆಳೆ ಬೆಳೆಯುವುದನ್ನು ಬಿಟ್ಟರು. ಈಗ ಮೆಕ್ಕೆಜೋಳವನ್ನು ಬೆಳೆಯುತ್ತಿದ್ದು, ಇದರಲ್ಲಿ ಮುಳ್ಳುಸಜ್ಜೆ ಕಳೆಯ ಹಾವಳಿಯು ಹೆಚ್ಚಾಗಿದ್ದು, ರೈತರು ತೊಂದರೆ ಅನುಭವಿಸುತ್ತಿದ್ದಾರೆ. ರೈತರು ಕಾರ್ಯಾಗಾರ ಸದುಪಯೋಗ ಪಡಿಸಿಕೊಂಡು ಸಫಲತೆಯನ್ನು ಪಡೆದುಕೊಳ್ಳಬೇಕು ಎಂದರು.

ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಎಂ.ವಿ.ಮಂಜುನಾಥ ಅವರು ಮಾತನಾಡಿ, ಮುಳ್ಳುಸಜ್ಜೆ ಕಳೆಯಿಂದ ಮೆಕ್ಕೆಜೋಳದಲ್ಲಿ ಶೇ 35 ರಿಂದ 40 ರಷ್ಟು ಇಳುವರಿ ಕುಂಠಿತವಾಗುತ್ತದೆ. ಮುಳ್ಳುಸಜ್ಜೆ ಕಳೆಯು ಇತರೆ ಕಳೆಗಳಿಗಿಂತ ಹೆಚ್ಚು ಬೀಜಗಳನ್ನು ಉತ್ಪಾದಿಸುತ್ತದೆ. ಒಂದು ಮುಳ್ಳುಸಜ್ಜೆ ಕಳೆಯು ಸುಮಾರು 2000-16000ಕ್ಕೂ ಹೆಚ್ಚು ಬೀಜಗಳನ್ನು ಉತ್ಪಾದಿಸುತ್ತದೆ. ನಿಗದಿತ ಸಮಯದಲ್ಲಿ ಕೈಗಳೆ ಮತ್ತು ಮಧ್ಯಂತರ ಬೇಸಾಯ ಅಳವಡಿಸಿಕೊಂಡು ಮುಳ್ಳುಸಜ್ಜೆಯನ್ನು ಹತೋಟಿ ಮಾಡಬೇಕು. ಯಾವುದೇ ಗೊಬ್ಬರ, ಕೀಟನಾಶಕ ಹಾಗೂ ಕಳೆನಾಶಕ ಉಪಯೋಗಿಸುವ ಮೊದಲು ಕೃಷಿ ವಿಜ್ಞಾನಿಗಳು ಅಥವಾ ಕೃಷಿ ಅಧಿಕಾರಿಗಳ ಜೊತೆ ಮಾಹಿತಿಯನ್ನು ಪಡೆಯಬೇಕು ಎಂದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಬಿ.ಡಿ.ಬಿರಾದಾರ ಮಾತನಾಡಿ, ಒಂದು ಸಲ ಕಳೆ ಬೀಜವಾದರೆ ಭೂಮಿಯಲ್ಲಿ 7 ವರ್ಷಗಳ ಕಾಲದವೆರೆಗೆ ಇರುತ್ತದೆ. ಆದ್ದರಿಂದ ಕಳೆಗಳು ಹೂವಾಡುವ ಮೊದಲು ಕಿತ್ತು ನಾಶಪಡಿಸಬೇಕು. ಬೆಳೆ ಪರಿವರ್ತನೆ ಮಾಡುವುದುರಿಂದ ಮೆಕ್ಕೆಜೋಳ ಬೆಳೆಗೆ ಹೊಂದಿಕೊಂಡಿರುವಂತಹ ಮುಳ್ಳುಸಜ್ಜೆ ಕೆಳೆಯನ್ನು ನಿಯಂತ್ರಣ ಮಾಡಬಹುದು ಎಂದರು.

ಪ್ರಾಧ್ಯಾಪಕ ಎಸ್.ಆರ್.ಸಲಕಿನಕೊಪ್ಪ ಅವರು ಗೋವಿನಜೋಳ ಬೆಳೆಯಲ್ಲಿ ಮುಳ್ಳುಸಜ್ಜೆ ಕಳೆಯ ಸಮಗ್ರ ನಿರ್ವಹಣೆಯ ಬಗ್ಗೆ ತಾಂತ್ರಿಕ ಮಾಹಿತಿ ನೀಡಿದರು. ಕೇಂದ್ರದ ಹಿರಿಯ ವಿಜ್ಞಾನಿ ಎ.ಎಚ್.ಬಿರಾದಾರ, ಸಂತೋಷ ಎಚ್. ಎಂ, ಎ.ಜಿ. ಕೊಪ್ಪದ, ಮಲ್ಲಿಕಾರ್ಜುನ ಕೆ. ಕರಿಯಲ್ಲಪ್ಪ.ಡಿ.ಕೆ ಹಾಗೂ ಕೃಷಿ ಅಧಿಕಾರಿಗಳು, ವಿಜ್ಞಾನಿಗಳು, ಮೆಕ್ಕೆಜೋಳ ಬೆಳೆಯುವ 200ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

- ಸಾವಯವ ಕೃಷಿಯಲ್ಲಿ ಕಳೆ ನಿಯಂತ್ರಣ ಕಷ್ಟ ಕೃಷಿ ಕಾರ್ಮಿಕರ ಕೊರತೆಯಿಂದಾಗಿ ಕೈಗಳೆ ಇಲ್ಲ ಕಳೆ ಬೀಜ 7 ವರ್ಷ ಜೀವಂತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.