ರಾಣೆಬೆನ್ನೂರು: ಇಲ್ಲಿನ ಚಳಗೇರಿ ಟೋಲ್‌ನಲ್ಲಿ ಟೋಲ್ ಸುತ್ತಮುತ್ತಲಿನ ಕಾರು ಮತ್ತು ಸಣ್ಣ ಗೂಡ್ಸ್ ವಾಹನಗಳಿಗೆ ಹೋಗಿ ಬರುವ ಎರಡೂ ಕಡೆ ಟೋಲ್ ವಸೂಲಿ ಮಾಡಬಾರದು. ಸುತ್ತಮುತ್ತಲಿನ ಗ್ರಾಮಗಳ ವಾಹನಗಳ ಮಾಲೀಕರಿಗೆ ಬಾರಿ ತೊಂದರೆಯಾಗುತ್ತಿದೆ. ಕೂಡಲೇ ಸುತ್ತಮುತ್ತಲಿನ ಗ್ರಾಮಗಳ ಕಾರು ಮತ್ತು ಗೂಡ್ಸ್ ವಾಹನಗಳಿಗೆ ಟೋಲ್ ಫ್ರೀ ಮಾಡಬೇಕೆಂದು ಒತ್ತಾಯಿಸಿ ಶನಿವಾರ ಪ್ರತಿಭಟನೆ ನಡೆಸಿ ಟೋಲ್ ವ್ಯವಸ್ಥಾಪಕ ಕೇಶವರಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಕೊಟ್ರೇಶ ಗುತ್ತೂರು ಮಾತನಾಡಿ, ಈ ಹಿಂದೆ ಇದ್ದ ಟೋಲ್ ಗುತ್ತಿಗೆದಾರರು ಚಳಗೇರಿ ಟೋಲ್ ಸುತ್ತಮುತ್ತಲಿನ ಗ್ರಾಮಗಳ ವಾಹನಗಳಿಗೆ ಟೋಲ್ ವಸೂಲಿ ಮಾಡುತ್ತಿದ್ದಿಲ್ಲ. ಈಗ ಬಂದಿರುವ ಗುತ್ತಿಗೆದಾರರು ಟೋಲ್ ವಸೂಲಿ ಮಾಡುತ್ತಿದ್ದಾರೆ.
ಇದರಿಂದ ಟೋಲ್ ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ತೊಂದರೆಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಗುತ್ತಿಗೆದಾರರ ಜೊತೆಗೆ ಚರ್ಚಿಸಿ ಸುತ್ತಮುತ್ತಲಿನ ಗ್ರಾಮಗಳ ಜನರ ವಾಹನಗಳಿಗೆ ಟೋಲ್ ಫ್ರೀ ಮಾಡಿಸಬೇಕು ಎಂದು ಒತ್ತಾಯಿಸಿದರು.
ಕುಮಾರಪಟ್ಟಣ, ಕವಲೆತ್ತು, ಕರೂರು, ನದೀಹಳಹಳ್ಳಿ, ಮಾಕನೂರು ಕ್ರಾಸ್‌ನಿಂದ ಸ್ವರಾಜ್ ಮಜ್ಡಾ ವಾಹನಗಳು ಇಟ್ಟಂಗಿ ತುಂಬಿಕೊಂಡು ರಾಣೆಬೆನ್ನೂರಿಗೆ ಹೋಗಿ ಬರಬೇಕಾದರೆ ₹325 ಟೋಲ್ ಹಣ ಕೊಡಬೇಕಾಗುತ್ತದೆ. ಒಂದು ಗಾಡಿಯ ಬಾಡಿಗೆ ₹ 2500 ಇದೆ. ಅದರಲ್ಲಿ ₹ 800 ಡಿಸೇಲ್, ಹಮಾಲಿ, ಡ್ರೈವರ್ ಪಗಾರ ₹ 300, ಗಾಡಿ ಸವಕಳಿ ₹ 500 ಸೇರಿ ಒಟ್ಟು ₹ 2400 ಖರ್ಚು ಬರುತ್ತದೆ.
ಟೋಲ್‌ಗೆ ₹ 325 ಹಣ ಕೊಟ್ಟರೆ ಮಾಲೀಕರು ಬರಿ ಗೈಲಿ ಮನೆಗೆ ಹೋಗಬೇಕಾಗುತ್ತದೆ. ಟೋಲ್ ಸುತ್ತಮುತ್ತಲಿನ ಗ್ರಾಮಗಳ ವಾಹನಗಳಿಗೆ ಉಚಿತವಾಗಿ ಸಂಚರಿಸಲು ಬಿಡಬೇಕು ಎಂದು ಮನವಿ ಮಾಡಿದರು.
ಮೃತ್ಯುಂಜಯ ಎಂಎನ್‌ಬಿ, ಪುಟ್ಟಪ್ಪ ಕವಲೆತ್ತು, ಮಂಜಣ್ಣ ಬೇವಿನಮರದ, ಹನುಮಂತಪ್ಪ ಮೇಡ್ಲೇರಿ, ಅನಿಲ್ ಹೆಗ್ಗಪ್ಪನವರ, ಬಿ.ಪಿ. ಚಂದ್ರಶೇಖರ, ರಾಜೇಶ ಹರಿಹರ, ಪ್ರದೀದ ಹೆಗ್ಗಪ್ಪನವರ, ಫಯಾಜ್ ಹರಿಹರ, ಕುಮಾರ ಮಾಳಿಗೇರ, ಉಮೇಶ ಎರೇಶಿಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.