ADVERTISEMENT

ಹದಗೆಟ್ಟ ಯಕಲಾಸಪುರ-ಮೇಡ್ಲೇರಿ ರಸ್ತೆ: ದುರಸ್ತಿಗೆ ಸಾರ್ವಜನಿಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2024, 4:40 IST
Last Updated 30 ಡಿಸೆಂಬರ್ 2024, 4:40 IST
ರಾಣೆಬೆನ್ನೂರು ತಾಲ್ಲೂಕಿನ ಯಕಲಾಸಪುರ ರಸ್ತೆಯಿಂದ ಮೇಡ್ಲೇರಿಗೆ ಹೋಗುವ ರಸ್ತೆ ತೆಗ್ಗುಗುಂಡಿಗಳಿಂದ ಕೂಡಿದ್ದು ರಸ್ತೆ ಸಂಪೂರ್ಣ ಹದಗೆಟ್ಟಿದೆ
ರಾಣೆಬೆನ್ನೂರು ತಾಲ್ಲೂಕಿನ ಯಕಲಾಸಪುರ ರಸ್ತೆಯಿಂದ ಮೇಡ್ಲೇರಿಗೆ ಹೋಗುವ ರಸ್ತೆ ತೆಗ್ಗುಗುಂಡಿಗಳಿಂದ ಕೂಡಿದ್ದು ರಸ್ತೆ ಸಂಪೂರ್ಣ ಹದಗೆಟ್ಟಿದೆ   

ರಾಣೆಬೆನ್ನೂರು: ಗ್ರಾಮೀಣ ಭಾಗದಲ್ಲಿರುವ ರಸ್ತೆಗಳು ಕೆಸರು ಗದ್ದೆಗಳಂತಾಗಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ರಸ್ತೆಗಳು ಮತ್ತಷ್ಟು ಹಾಳಾಗಿ ಹೋಗಿವೆ. ರಸ್ತೆ ದುರಸ್ತಿ ಮಾಡುವಂತೆ ಹಲವು ಬಾರಿ ಕೇಳಿಕೊಂಡರೂ ಜನರ ಕೂಗಿಗೆ ಸ್ಪಂದನೆ ಸಿಕ್ಕಿಲ್ಲ.

ಗ್ರಾಮೀಣ ಭಾಗದ ರಸ್ತೆಗಳು ತೆಗ್ಗುಗುಂಡಿಗಳಿಂದ ಕೂಡಿವೆ. ಕಳೆದ ತಿಂಗಳು ಸತತವಾಗಿ ಸುರಿದ ಬಾರಿ ಮಳೆಗೆ ಹೆಚ್ಚಿನ ಕಡೆ ನೀರು ನಿಂತಿದ್ದರಿಂದ ದೊಡ್ಡ ಹೊಂಡಗಳಾಗಿದ್ದರೆ, ಮಳೆ ರಭಸಕ್ಕೆ ಕಲ್ಲುಗಳು ಕಿತ್ತು ರಸ್ತೆ ಕೊರೆತ ಉಂಟಾಗಿವೆ.

ಮಳೆಗಾಲದಲ್ಲಿ ರಸ್ತೆಯ ಮೇಲಿನ ನೀರು ಹೊಲ ಗದ್ದೆಗಳಿಗೆ ನುಗ್ಗುತ್ತದೆ. ಇದರಿಂದ ಬೆಳೆಗಳು ತೇವಾಂಶ ಹೆಚ್ಚಾಗಿ ಬೆಳೆ ಹಾನಿಗೊಳ್ಳುತ್ತವೆ. ರಸ್ತೆಯ ಎರಡೂ ಬದಿಗೆ ನೀರು ಸರಾಗವಾಗಿ ಹರಿದು ಹೊಗುವಂತೆ ಮಾಡಬೇಕು. ರಾತ್ರಿ ಹೊತ್ತು ಬೈಕ್‌ಗಳ ಮೇಲೆ ಜಮೀನುಗಳಿಗೆ ಅಡಿಕೆ, ಕಬ್ಬು, ತೆಂಗು ಮುಂತಾದ ಬೆಳೆಗಳಿಗೆ ನೀರು ಕಟ್ಟಲು ಹೋಗುವಾಗ ಗುಂಡಿಗಳಲ್ಲಿ ಬಿದ್ದು ಕೈಕಾಲುಗಳಿಗೆ ಪೆಟ್ಟಾದ ಘಟನೆ ನಡೆದಿವೆ.

ADVERTISEMENT

ಒಂದು ಗೊಬ್ಬರ ಚೀಲ ತೆಗೆದುಕೊಂಡು ಹೋಗಲು ಮತ್ತು ಬೀಜ ಬಿತ್ತನೆಗೆ ಹೋಗಲು ಪ್ರಯಾಸ ಪಡುವಂತಾಗಿದೆ. ಹೊಲದಲ್ಲಿ ಬೆಳೆದ ಎಲೆಬಳ್ಳಿ, ಬೆಳ್ಳುಳ್ಳಿ, ಈರುಳ್ಳಿ, ಮೆಕ್ಕೆಜೋಳ ಮತ್ತು ತರಕಾರಿ ಸೇರಿದಂತೆ ಇತರೆ ಬೆಳೆಗಳನ್ನು ಕಟಾವು ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಅನಾನುಕೂಲವಾಗಿದೆ. ಟ್ರ್ಯಾಕ್ಟರ್‌ನಲ್ಲಿ ಕಬ್ಬನ್ನು ಹೇರಿಕೊಂಡು ಹರಿಹರ ಕಾರ್ಖಾನೆಗೆ, ಪೈರನ್ನು ಹೇರಿಕೊಂಡು ಹೋಗಲು ಪರದಾಡುವಂತಾಗಿದೆ ಎಂದು ಯಕಲಾಸಪುರ ಗ್ರಾಮದ ಯುವ ರೈತ ಶಿವಕುಮಾರ ಓಲೇಕಾರ ದೂರಿದರು.

ತಾಲ್ಲೂಕಿನ ಯಕಲಾಸಪುರ ಗ್ರಾಮದಿಂದ ಮೇಡ್ಲೇರಿಗೆ ತೆರಳುವ 4 ಕಿಮೀ ರಸ್ತೆ ಸಂಪೂರ್ಣ ಗುಂಡಿ ಗೊಟರುಗಳಿಂದ ಕೂಡಿದ್ದು, ಇದರಿಂದ ವಾಹನಗಳು ಪ್ರತಿ ದಿನ ಜಖಂಗೊಳ್ಳುತ್ತಿವೆ. ಸಂಚಾರಕ್ಕೆ ತೀವ್ರ ತೊಂದರೆ ಎದುರಾಗಿವೆ.

ಇಂತಹ ದುಸ್ಥಿತಿಯಿದ್ದರೂ ಕೂಡ ರಸ್ತೆ ದುರಸ್ತಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುಂದಾಗಿಲ್ಲ. ಆರೇಮಲ್ಲಾಪುರ ಮುಖ್ಯ ರಸ್ತೆಯಿಂದ ಯಕಲಾಸಪುರ ಮಾರ್ಗವಾಗಿ ಮೇಡ್ಲೇರಿಗೆ ಗ್ರಾಮಕ್ಕೆ ತೆರಳುವ ರಸ್ತೆ ಹಾಳಾಗಿ ಅನೇಕ ವರ್ಷಗಳೆ ಕಳೆದಿವೆ. ಅನೇಕ ಬಾರಿ ರಸ್ತೆ ದುರಸ್ತಿಗೆ ಆಗ್ರಹಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಶಾಸಕರಿಗೆ ಮನವಿ ಮಾಡಿದರೂ ಕೂಡ ಯಾರು ಸ್ಪಂದಿಸುತ್ತಿಲ್ಲ ಗ್ರಾಮಸ್ಥರು ದೂರಿದ್ದಾರೆ.

ರಾಣೆಬೆನ್ನೂರು ತಾಲ್ಲೂಕಿನ ಯಕಲಾಸಪುರ ರಸ್ತೆಯಿಂದ ಮೇಡ್ಲೇರಿಗೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. 
ಯಕಲಾಸಪುರ ರಸ್ತೆ ದುರಸ್ತಿ ಬಗ್ಗೆ ಗ್ರಾಮಸ್ಥರು ಗಮನಕ್ಕೆ ತಂದಿದ್ದಾರೆ. ಸದ್ಯಕ್ಕೆ ಓಡಾಡಲು ಅನುಕೂಲವಾಗುವಂತೆ ಪ್ಯಾಚ್‌ ವರ್ಕ್‌ ಮಾಡಿಸಲಾಗುವುದು. ಅನುದಾನ ಬಂದ ಮೇಲೆ ಸಂಪೂರ್ಣ ರಸ್ತೆ ದುರಸ್ತಿ ಪಡಿಸಲಾಗುವುದು
–ಮರಿಸ್ವಾಮಿ ಎಚ್‌.ವಿ. ಲೊಕೋಪಯೋಗಿ ಇಲಾಖೆ ಎಂಜಿನಿಯರ್‌
ಯಕಲಾಸಪುರದಿಂದ ಮೇಡ್ಲೇರಿ ರಸ್ತೆ ಸಮಸ್ಯೆ ಬಗ್ಗೆ ಶಾಸಕರ ಗಮನಕ್ಕೂ ತಂದಿದ್ದೇವೆ. ಇದುವರೆಗೂ ಕಾಮಗಾರಿ ಕೈಗೊಂಡಿಲ್ಲ. ಕೂಡಲೇ ರಸ್ತೆ ದುರಸ್ತಿಗೆ ಅಧಿಕಾರಿಗಳು ಮುಂದಾಗಬೇಕು
–ದಿಳ್ಳೆಪ್ಪ ಅಣ್ಣೇರ ಮೇಡ್ಲೇರಿ ದುರ್ಗಾದೇವಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ
‘ದುರ್ಗಾದೇವಿ ಜಾತ್ರೆಗೆ ಅನುಕೂಲ ಕಲ್ಪಿಸಿ’
ಜ.6 ರಿಂದ 10ರ ವರೆಗೆ ಮೇಡ್ಲೇರಿಯಲ್ಲಿ ದುರ್ಗಾದೇವಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರು ಆಗಮಿಸುತ್ತಾರೆ. ಇದೇ ಯಕಲಾಸಪುರ ಮಾರ್ಗವಾಗಿ ದಾವಣಗೆರೆ ಹರಿಹರ ಶಿವಮೊಗ್ಗ ಜಿಲ್ಲೆಯಿಂದ ಜನತೆ ಅಡ್ಡಾಡುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಮೇಡ್ಲೆರಿ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ರಸ್ತೆ ಗುಂಡಿಗಳನ್ನು ಮುಚ್ಚಬೇಕು ಎಂದು ಜಾತ್ರಾ ಮಹೋತ್ಸವದ ಅಧ್ಯಕ್ಷ ಮೇಡ್ಲೇರಿಯ ದಿಳ್ಳೆಪ್ಪ ಅಣ್ಣೇರ ಹಾಗೂ ರಮೇಶ ಭಜಂತ್ರಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.