ರಾಣೆಬೆನ್ನೂರು: ಸೊಳ್ಳೆಗಳ ನಿಯಂತ್ರಣದಿಂದ ಮಾತ್ರ ಮಲೇರಿಯ, ಡೆಂಗಿ, ಚಿಕೂನ್ ಗುನ್ಯಾ, ಮೆದುಳು ಜ್ವರ, ಆನೆ ಕಾಲುರೋಗಗಳ ನಿಯಂತ್ರಣ ಸಾಧ್ಯ. ಮನೆಯ ಸುತ್ತಮುತ್ತ ಪರಿಸರ ಸ್ವಚ್ಚತೆ ಕಾಪಾಡಿಕೊಳ್ಳುವುದು ಎಲ್ಲ ಜವಾಬ್ದಾರಿ ಎಂದು ವೈದ್ಯಾಧಿಕಾರಿ ಡಾ. ವಿನಾಯಕ ಜಿ.ಕೆ ಹೇಳಿದರು.
ಮಾನವಿ ಕಂಪನಿ ಬಳಿ ಇರುವ ಅಮೃತಂ ಆಸ್ಪತ್ರೆ ಸಭಾಂಗಣದಲ್ಲಿ ಸೋಮವಾರ ತಾಲ್ಲೂಕು ಆರೋಗ್ಯ ಇಲಾಖೆ, ಎನ್‌ಐಎಂಎ ತಾಲ್ಲೂಕು ಘಟಕದ ಹಾಗೂ ಎಂ.ಕೆ. ಪವಾರ ಮೆಮೋರಿಯಲ್ ಸೊಸೈಟಿ ಆಶ್ರಯದಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ಏರ್ಪಡಿಸಿದ ಮಲೇರಿಯಾ ಕುರಿತು ಅಡವೋಕೇಸಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಮಲೇರಿಯಾ ಕಾಯಿಲೆ, ಡೆಂಗಿ ಜ್ವರ, ಚಿಕೂನ್ ಗುನ್ಯಾ, ಮೆದುಳು ಜ್ವರ ಹಾಗೂ ಆನೆಕಾಲು ರೋಗಗಳ ಲಕ್ಷಣಗಳು ಹರಡುವಿಕೆ, ಮುಂಜಾಗೃತಾ ಕ್ರಮಗಳು ಹಾಗೂ ಚಿಕಿತ್ಸಾ ಕ್ರಮಗಳ ಬಗ್ಗೆ 60ಕ್ಕೂ ಹೆಚ್ಚು ಸ್ಲೈಡ್‌ಗಳ ಮೂಲಕ ವಿವರವಾದ ಮಾಹಿತಿಯನ್ನು ಪಿಪಿಟಿ ಮೂಲಕ ವಿವರಿಸಿದರು.
ಮಲೇರಿಯಾ ರೋಗ ಸಾಂಕ್ರಾಮಿಕ ರೋಗವಾಗಿದ್ದು, ಪ್ಲಾಸ್ಮೋಡಿಯಾ ಎಂಬ ಪರಾವಲಂಬಿ ಸೂಕ್ಷ್ಮಾಣು ಜೀವಿಯಾದ ಸೊಳ್ಳೆಯಿಂದ ಬರುವ ರೋಗವನ್ನು ತಡೆಗಟ್ಟಲು ಸೊಳ್ಳೆಗಳ ನಿಯಂತ್ರ ಅಗತ್ಯವಾಗಿದೆ. ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳಿಂದ ಬರುವ ರೋಗ ಇದಾಗಿರುವುದರಿಂದ ಅವುಗಳ ನಾಶಕ್ಕೆ ಕೈಗೊಳ್ಳುವ ಮುಂಜಾಗೃತೆಯಿಂದ ರೋಗ ಹರಡುವುದನ್ನು ತಪ್ಪಿಸಬಹುದು ಎಂದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ನಾಗರಾಜ ಕುಡುಪಲಿ ಮಾತನಾಡಿ, ಕಾರ್ಯಾಗಾರದಲ್ಲಿ ಲಾರ್ವ ಹಾಗೂ ಲಾರ್ವಾಹಾರಿ ಮೀನುಗಳಾದ ಗಪ್ಪಿ ಮತ್ತು ಗ್ಯಾಂಬುಸಿಯಾ ಪ್ರಾತ್ಯಕ್ಷಿಕೆಯನ್ನು ತೋರಿಸಿದರು. ನಂತರ ಸೊಳ್ಳೆಗಳಿಂದ ಹರಡುವ ರೋಗಗಳ ಉಪಯುಕ್ತ ಮಾಹಿತಿ ಕೈಪಿಡಿಯನ್ನು ವಿತರಣೆ ಮಾಡಿದರು.
ಡಾ. ನಾರಾಯಣ ಪವಾರ, ಡಾ.ಶ್ರೀಕಾಂತ ಕಳಸದ, ಡಾ.ಶಿವಾನಂದ ಹಿತ್ತಲಮನಿ ಮತ್ತು ವ್ಯವಸ್ಥಾಪಕ ಸಂಗಮೇಶ ಹಾಗೂ ಆಯುರ್ವೇದ ಮತ್ತು ಹೊಮಿಯೋಪತಿ ವೈದ್ಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.