ರಾಣೆಬೆನ್ನೂರು: ಹಾವೇರಿ ಜಿಲ್ಲೆಯ ದೊಡ್ಡ ಪಟ್ಟಣವಾಗಿರುವ ರಾಣೆಬೆನ್ನೂರಿನಲ್ಲಿರುವ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಹಲವು ಸೌಕರ್ಯಗಳಿಂದ ವಂಚಿತವಾಗಿದ್ದು, ಇದರ ಪರಿಣಾಮ ಗುಣಮಟ್ಟದ ಸೇವೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ನಿತ್ಯವೂ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಬೆಡ್‌ಗಳ ಸಮಸ್ಯೆ ಕಾಡುತ್ತಿದೆ. ವೈದ್ಯರು, ರೋಗಿಗಳನ್ನು ಜಿಲ್ಲಾಸ್ಪತ್ರೆ ಹಾಗೂ ಇತರೆ ಆಸ್ಪತ್ರೆಗೆ ಕಳುಹಿಸಿ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ.
ಹಲಗೇರಿ ರಸ್ತೆಯಲ್ಲಿರುವ ಆಸ್ಪತ್ರೆಯಲ್ಲಿ ಸದ್ಯ 100 ಬೆಡ್‌ಗಳು ಮಾತ್ರ ಲಭ್ಯವಿದ್ದು, ಸದ್ಯದ ಜನಸಂಖ್ಯೆಗೆ ತಕ್ಕಂತೆ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ 300 ಬೆಡ್ ಮಾಡಬೇಕೆಂಬ ಒತ್ತಾಯಗಳು ಹಲವು ವರ್ಷಗಳಿಂದ ಕೇಳಿರುತ್ತಿದೆ.
ರಾಣೆಬೆನ್ನೂರು, ಅಕ್ಕ–ಪಕ್ಕದ ತಾಲ್ಲೂಕಿನವರು ಹಾಗೂ ನೆರೆ ಜಿಲ್ಲೆಗಳ ಜನರೂ ಈ ಆಸ್ಪತ್ರೆಗೆ ಬರುತ್ತಿದ್ದಾರೆ. ನಿತ್ಯವೂ 400ರಿಂದ 500 ಹೊರ ರೋಗಿಗಳು ಚೀಟಿ ಮಾಡಿಸಿಕೊಂಡು ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ದಿನದಲ್ಲಿ 40ರಿಂದ 50 ಮಂದಿ ಒಳರೋಗಿಗಳಾಗಿ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನೆಲ ಮಹಡಿ, ಮೊದಲ ಮಹಡಿ ಹಾಗೂ ಎರಡನೇ ಮಹಡಿ ಹೊಂದಿರುವ ಕಟ್ಟಡದಲ್ಲಿ ಹಲವು ಆರೋಗ್ಯ ಸೇವೆ ವಿಭಾಗಗಳಿವೆ. ಡೆಂಗಿ, ಜ್ವರ ಹಾಗೂ ಇತರೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಆಸ್ಪತ್ರೆಗೆ ಬರುತ್ತಿರುವ ಜನರ ಸಂಖ್ಯೆ ದ್ವಿಗುಣಗೊಂಡಿದೆ. ಜಾಗದ ಸಮಸ್ಯೆ, ನೈರ್ಮಲ್ಯ ಹಾಗೂ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.
ಆಸ್ಪತ್ರೆಯ ಮುಂಭಾಗದಲ್ಲಿಯೇ ಸಾರ್ವಜನಿಕರು ಅಡ್ಡಾದಿಡ್ಡಿಯಾಗಿ ಬೈಕ್‌ಗಳನ್ನು ನಿಲ್ಲಿಸುತ್ತಿದ್ದಾರೆ. ಇದರಿಂದಾಗಿ ರೋಗಿಗಳು ಮತ್ತು ವೈದ್ಯರ ಓಡಾಟಕ್ಕೆ ತೊಂದರೆ ಆಗಿದೆ. ಆಂಬುಲೆನ್ಸ್ ಸಂಚಾರಕ್ಕೂ ಅಡ್ಡಿಯಾಗಿದೆ. ಬೈಕ್‌ಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡುವಂತೆ ಜನರು ಒತ್ತಾಯಿಸುತ್ತಿದ್ದಾರೆ.
ಆಸ್ಪತ್ರೆಯ ಮುಂಭಾಗದಲ್ಲಿ ನೋಂದಣಿ ಕೇಂದ್ರವಿದೆ. ಚೀಟಿ ಮಾಡಿಸಲು ಜನರು ಗಂಟೆಗಟ್ಟಲೇ ಸರದಿಯಲ್ಲಿ ನಿಲ್ಲುತ್ತಿದ್ದಾರೆ. ನಿತ್ಯವೂ ಆಸ್ಪತ್ರೆ ಎದುರು ಜನ ಜಂಗುಳಿ ಕಂಡುಬರುತ್ತಿದೆ.
ಕಟ್ಟಡದಲ್ಲಿರುವ ಕೊಠಡಿಗಳು ಚಿಕ್ಕದಾಗಿದ್ದು, ಅದೇ ಸ್ಥಳದಲ್ಲಿಯೇ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಇದರಿಂದಾಗಿ ಕೊಠಡಿಯ ಹೊರಗೆಯೂ ಜನರು ತಪಾಸಣೆಗೆಂದು ಕಾಯುವ ಸ್ಥಿತಿ ಇದೆ. ಮಹಿಳೆಯರು, ಮಕ್ಕಳು ಮತ್ತು ವೃದ್ದರು ಚಿಕಿತ್ಸೆ ಪಡೆಯಲು ಪರದಾಡುತ್ತಿದ್ದಾರೆ.
ಆಸ್ಪತ್ರೆಯ ಆವರಣ ಹಾಗೂ ಒಳಭಾಗದ ಕೆಲವು ಕಡೆಗಳಲ್ಲಿ ಸ್ವಚ್ಛತೆ ಸಮಸ್ಯೆ ಕಾಡುತ್ತಿದೆ. ರೋಗಿಗಳ ಸಂಬಂಧಿಕರು, ಎಲೆ–ಅಡಿಕೆ ಹಾಗೂ ಗುಟ್ಕಾ ತಿಂದು ಎಲ್ಲೆಂದರಲ್ಲಿ ಉಗುಳುತ್ತಿದ್ದಾರೆ. ಎಳನೀರು ಕುಡಿದು ಎಲ್ಲೆಂದರಲ್ಲಿ ಬಿಸಾಕುತ್ತಿದ್ದಾರೆ. ಕಟ್ಟಡದ ಹೊರ ಭಾಗದಲ್ಲಿ ಸ್ವಚ್ಛತೆಯೇ ಇಲ್ಲದಂತಾಗಿದೆ.
‘ರಾಣೆಬೆನ್ನೂರು ಜಿಲ್ಲೆಯ ಅತೀ ದೊಡ್ಡ ಪಟ್ಟಣ. ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಸದ್ಯದ ಆಸ್ಪತ್ರೆಯಲ್ಲಿ 100 ಬೆಡ್ ಮಾತ್ರವಿದೆ. ಇದು ಯಾವುದಕ್ಕೂ ಸಾಕಾಗುತ್ತಿಲ್ಲ. ಹೆಚ್ಚುವರಿ ಜನರು ಬಂದರೆ, ಅವರನ್ನು ಬೇರೆ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಬೇಕಾದ ಅನಿವಾರ್ಯತೆ ಇದೆ. 300 ಬೆಡ್ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಿದರೆ ಜನರಿಗೆ ಅನುಕೂಲವಾಗುತ್ತದೆ‘ ಎಂದು ಜನರು ಒತ್ತಾಯಿಸಿದರು.
'ತೀವ್ರ ಜ್ವರದಿಂದ ಬಳಲುತ್ತಿದ್ದ ಕಾರಣ ಆಸ್ಪತ್ರೆಗೆ ಬಂದಿದ್ದೇನೆ. ಇಲ್ಲಿಯ ವೈದ್ಯರು ಆರೋಗ್ಯ ತಪಾಸಣೆ ಮಾಡಿದರು. ಮೂರು ದಿನ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದಾರೆ’ ಎಂದು ಚಳಗೇರಿ ಗ್ರಾಮ ಭವಾನಿ ಹೇಳಿದರು.
300 ಬೆಡ್ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವ ಕಳಿಸಿದಾಗ ಸೂಕ್ತ ಜಾಗ ಯಾವುದೆಂದು ಸರ್ಕಾರ ಪ್ರಶ್ನಿಸಿತ್ತು. ಕೈಗಾರಿಕೆ ವಲಯದ ಬಳಿ 10 ಎಕರೆ ಜಾಗ ತೋರಿಸಲಾಗಿದೆ. ಅದೇ ಜಾಗದಲ್ಲಿ ಆಸ್ಪತ್ರೆ ನಿರ್ಮಾಣವಾಗುವ ಸಾಧ್ಯತೆ ಇದೆಡಾ.ರಾಜು ಶಿರೂರ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ
ಆಸ್ಪತ್ರೆಯ ಪ್ರಯೋಗಾಲಯದಲ್ಲಿ ರಕ್ತ ತಪಾಸಣೆ ವೇಳೆ ಸಿಬ್ಬಂದಿ ಎಡವಟ್ಟು ಮಾಡುತ್ತಿದ್ದಾರೆ. ಅವರಿಗೆ ಸೂಕ್ತ ತಿಳಿವಳಿಕೆ ನೀಡಬೇಕು. ಜನಸಂಖ್ಯೆಗೆ ತಕ್ಕಂತೆ ಮೂಲ ಸೌಕರ್ಯ ಅಭಿವೃದ್ಧಿ ಪಡಿಸಬೇಕುಪವನ ಚಂದ್ರಶೇಖರ ನಂದೀಹಳ್ಳಿ ಶ್ರೀರಾಮನಗರ ರಾಣೆಬೆನ್ನೂರು
ಮಕ್ಕಳು–ಮಹಿಳೆಯರ ಆಸ್ಪತ್ರೆಯಲ್ಲೂ ಸೌಕರ್ಯ ಕೊರತೆ ಸಾರ್ವಜನಿಕ ಆಸ್ಪತ್ರೆ ಮತ್ತು ಮಕ್ಕಳು–ಮಹಿಳೆಯರ ಹೆರಿಗೆ ಆಸ್ಪತ್ರೆ ಎರಡೂ ಒಂದೇ ಇದ್ದವು. ಈಗ ಎರಡೂ ಪ್ರತ್ಯೇಕವಾಗಿವೆ. ಹೆರಿಗೆ ಆಸ್ಪತ್ರೆಗೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬರುತ್ತಿದ್ದು ಇದರಿಂದ ಸೌಕರ್ಯಗಳ ಕೊರತೆ ಕಾಣಿಸಿಕೊಳ್ಳುತ್ತಿದೆ. ‘ಹೆರಿಗೆ ಆಸ್ಪತ್ರೆಯಲ್ಲಿ ಒಂದು ರೋಗಿಯೊಂದಿಗೆ ನಾಲ್ಕೈದು ಜನ ಬರುತ್ತಾರೆ. ಸ್ವಚ್ಛ ಮಾಡಲು ತೊಂದರೆಯಾಗುತ್ತದೆ. ಮೂಲ ಸೌಕರ್ಯ ಕೊರತೆ ಹೊರತುಪಡಿಸಿದರೆ ಚಿಕಿತ್ಸೆಯ ಗುಣಮಟ್ಟ ಕಾಯ್ದುಕೊಂಡಿದ್ದೇವೆ‘ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ರಾಜು ಶಿರೂರು ಹೇಳಿದರು. ‘300 ಹಾಸಿಗೆ ಸೌಲಭ್ಯ ಸರ್ಕಾರದಿಂದ ಅನುಮೋದನೆಯಾಗಬೇಕಾಗಿದೆ’ ಎಂದರು. ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿನ ಔಷಧಿ ಕೊಠಡಿ ಮುಚ್ಚಿದೆ. ಇದರಿಂದ ಆಸ್ಪತ್ರೆಗೆ ಬರುವ ಜನರಿಗೆ ಔಷಧಿ ಸಿಗುತ್ತಿಲ್ಲ. ಪ್ರಯೋಗಾಲಯದ ಕೊಠಡಿ ಚಿಕ್ಕದಾಗಿದ್ದು ರಕ್ತ ತಪಾಸಣೆಗೆ ಅಡಚಣೆಯಾಗುತ್ತಿದೆ. ವೈದ್ಯರು ಹೆಚ್ಚಿನ ಪ್ರಮಾಣದಲ್ಲಿ ಹೊರಗಿನ ಔಷಧಿಗಳನ್ನು ಬರೆದುಕೊಡುತ್ತಿರುವುದಕ್ಕೆ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.