ರಟ್ಟೀಹಳ್ಳಿ: ಬಿಜೆಪಿ ಅಧಿಕಾರಾವಧಿಯಲ್ಲಿ ನಾವು ರಟ್ಟೀಹಳ್ಳಿ ಪಟ್ಟಣದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದು ಮಾಜಿ ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಅವರು ಶನಿವಾರ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.
ನಮ್ಮ ಅಧಿಕಾರ ಅವಧಿಯಲ್ಲಿ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ಸರ್ಕಾರಿ ವಿಜ್ಞಾನ ಕಾಲೇಜು, ತೋಟಗಂಟೆ ರಟ್ಟೀಹಳ್ಳಿ ನಡುವೆ ಬಾಂದಾರ ನಿರ್ಮಾಣ, ಮಳಗಿ ಗ್ರಾಮಕ್ಕೆ ಬ್ರಿಡ್ಜ್ ನಿರ್ಮಾಣ, ಪಟ್ಟಣದಲ್ಲಿ ಸುಸಜ್ಜಿತ ದ್ವಿಪಥ ರಸ್ತೆ ನಿರ್ಮಾಣ ಮಾಡಲಾಯಿತು. ರಟ್ಟೀಹಳ್ಳಿಯನ್ನು ಗ್ರಾಮ ಪಂಚಾಯಿತಿಯಿಂದ, ಪಟ್ಟಣ ಪಂಚಾಯಿತಿ ಹಾಗೂ ತಾಲ್ಲೂಕು ಕೇಂದ್ರವಾಗಿ ಮಾರ್ಪಾಡು ಮಾಡಲಾಯಿತು ಎಂದರು.
ಮುಖಂಡರಾದ ದೇವರಾಜ ನಾಗಣ್ಣನವರ, ಶಂಭಣ್ಣ ಗೂಳಪ್ಪನವರ, ಡಿ.ಎಂ.ಸಾಲಿ, ಪಾಲಾಕ್ಷಗೌಡ ಪಾಟೀಲ, ಗಣೇಶ ವೇರ್ಣೇಕರ, ಹುನುಮಂತಪ್ಪ ಗಾಜೇರ, ಸಂದೀಪ ಪಾಟೀಲ, ಲಿಂಗರಾಜ ವಾಲಿ, ಇದ್ದರು.
ಕಾಂಗ್ರೆಸ್ ಅಭ್ಯರ್ಥಿಗಳ ಪ್ರಚಾರ: ಪಟ್ಟಣದ ವಿವಿಧ ವಾರ್ಡಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಶಾಸಕ ಯು.ಬಿ.ಬಣಕಾರ ನೇತೃತ್ವದಲ್ಲಿ ಶನಿವಾರ ಪ್ರಚಾರ ಕಾರ್ಯಕೈಗೊಂಡರು.
ಕಾಂಗ್ರೆಸ್ ಸರ್ಕಾರ ಸದಾ ಬಡವರ, ದೀನದಲಿತರ, ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡುತ್ತಿದೆ. ಪಂಚ ಗ್ಯಾರಂಟಿಗಳು ಬಡವರ, ಕೂಲಿ ಕಾರ್ಮಿಕರ ಬದುಕಿಗೆ ಆಸರೆಯಾಗಿವೆ. ಅಭಿವೃದ್ಧಿ ಕಾರ್ಯಗಳಲ್ಲೂ ನಾವು ಹಿಂದೆ ಬಿದ್ದಿಲ್ಲ. ಸರ್ಕಾರದ ಈ ಯೋಜನೆಗಳೇ ನಮ್ಮ ಪಕ್ಷದ ಅಭ್ಯರ್ಥಿಗಳ ಕೈಹಿಡಿಯಲಿವೆ ಎಂದರು.
ಮುಖಂಡರಾದ ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ಪಿ.ಡಿ. ಬಸನಗೌಡ್ರ, ವಸಂತ ದ್ಯಾವಕ್ಕಳವರ, ವೀರನಗೌಡ ಪ್ಯಾಟೀಗೌಡ್ರ, ಕಪಿಲ ಪೂಜಾರ, ಮಂಜು ಆಸ್ವಾಲಿ, ಇದ್ದರು.
ಆಮ್ ಆದ್ಮಿ ಪಕ್ಷದಿಂದ ಪ್ರಚಾರ ಭರಾಟೆ: ಪ್ರಮುಖ ರಾಷ್ಟ್ರೀಯ ಪಕ್ಷ ಬಿಜೆಪಿ ಹಾಗೂ ಕಾಂಗ್ರೆಸ್ ಆಡಳಿತದಿಂದ ಜನತೆ ನಿರಸಗೊಂಡಿದ್ದಾರೆ. ಹೊಸ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಉತ್ಸುಕರಾಗಿದ್ದಾರೆ. ಇದು ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ವರವಾಗಿ ಪರಿಣಮಿಸಲಿದೆ. ಗೆಲುವಿಗೆ ಉತ್ತಮ ವಾತಾವರಣವಿದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಹನುಮಂತಪ್ಪ ಕಬ್ಬಾರ ತಿಳಿಸಿದರು.
ಮುಖಂಡರಾದ ಪರೀದ ನದಾಫ್, ಮಂಜುನಾಥ ಸಂಬೋಜಿ, ರಾಜೇಶ ಅಂಗಡಿ, ಮಹ್ಮದಗೌಸ ಮೇಡ್ಲೇರಿ, ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.