ADVERTISEMENT

ರಟ್ಟೀಹಳ್ಳಿ ಚುನಾವಣೆ: ನಿಷೇಧಾಜ್ಞೆ ಜಾರಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 2:22 IST
Last Updated 13 ಆಗಸ್ಟ್ 2025, 2:22 IST
   

ಹಾವೇರಿ: ಜಿಲ್ಲೆಯ ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ ಸದಸ್ಯರ ಆಯ್ಕೆಗಾಗಿ ಆಗಸ್ಟ್ 17ರಂದು ಮತದಾನ ನಿಗದಿಯಾಗಿದೆ. ಆಗಸ್ಟ್ 15ರ ಸಂಜೆ 5 ಗಂಟೆಯಿಂದ ಆಗಸ್ಟ್ 17ರ ಸಂಜೆ 5 ಗಂಟೆಯವರೆಗೆ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಅವರು ಆದೇಶ ಹೊರಡಿಸಿದ್ದಾರೆ.

‘ಮತದಾನ ಮುಕ್ತಾಯಗೊಳ್ಳುವ ಅವಧಿಯ 48 ಗಂಟೆಗಳ ಪೂರ್ವದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಾಗೂ ಮತದಾನ ಸುಗಮವಾಗಿ ನಡೆಸುವ ಉದ್ದೇಶದಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

‘ಮತಗಟ್ಟೆಗಳ ಸುತ್ತಲಿನ 100 ಮೀಟರ್ ಅಂತರದಲ್ಲಿ ಪ್ರಚಾರದ ಸಲುವಾಗಿ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರಬಾರದು. ಮೆರವಣಿಗೆ ಅಥವಾ ಸಭೆ, ಸಮಾರಂಭ ಮಾಡಬಾರದು. ಚುನಾವಣಾ ಅಭ್ಯರ್ಥಿ, ಬೆಂಬಲಿಗರು ಮನೆ ಮನೆಗೆ ತೆರಳಿ ಮತಯಾಚನೆ ಮಾಡಬಹುದು. ಅಲ್ಲಿಯೂ ಐದಕ್ಕಿಂತ ಹೆಚ್ಚು ಜನರಿರಬಾರದು. ಶಸ್ತ್ರ, ಬಡಿಗೆ, ಭರ್ಚಿ, ಖಡ್ಗ, ಗದೆ, ಬಂದೂಕು, ಚೂರಿ, ಲಾಠಿ, ಡೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯ ಉಂಟು ಮಾಡುವ ಯಾವುದೇ ಆಯುಧವನ್ನು ಇಟ್ಟುಕೊಂಡು ಓಡಾಡಬಾರದು’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

‘ಬಹಿರಂಗವಾಗಿ ಘೋಷಣೆ ಮಾಡುವುದು, ಪದ ಹಾಡುವುದು, ವಾದ್ಯ ಬಾರಿಸುವುದು, ವ್ಯಾಖ್ಯಾನ ಕೊಡುವುದು, ಸನ್ನೆ ಅಥವಾ ನಕಲಿ ಪ್ರದರ್ಶನವನ್ನು ಹಾಗೂ ಸಾರ್ವಜನಿಕ ಸಭ್ಯತೆ ಅಥವಾ ನೀತಿಯನ್ನು ಆಕ್ರಮಿಸಬಹುದಾದ ಕೃತ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಶವ ಸಂಸ್ಕಾರಕ್ಕೆ ಅಥವಾ ಮದುವೆ ಮತ್ತು ಧಾರ್ಮಿಕ ಮೆರವಣಿಗೆಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ’ ಎಂದು ತಿಳಿಸಲಾಗಿದೆ.

ಮದ್ಯ ಮಾರಾಟ ನಿಷೇಧ; ಚುನಾವಣೆ ನಿಮಿತ್ತ ಆಗಸ್ಟ್ 16ರ ಸಂಜೆ 6 ಗಂಟೆಯಿಂದ ಆಗಸ್ಟ್ 18ರ ಸಂಜೆ 6 ಗಂಟೆಯವರೆಗೆ ಮದ್ಯ ಮಾರಾಟ ಹಾಗೂ ಮದ್ಯಪಾನ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

‘ನಿಗದಿಪಡಿಸಿದ ದಿನದಂದು ರಟ್ಟೀಹಳ್ಳಿಯಲ್ಲಿ ಮದ್ಯದ ಅಂಗಡಿಗಳು, ಬಿಯರ್ ಬಾರ್‌ಗಳು, ಕ್ಲಬ್‌ಗಳು ಮತ್ತು ಮದ್ಯದ ಡಿಪೊಗಳನ್ನು ಮುಚ್ಚಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.