ADVERTISEMENT

ರಟ್ಟೀಹಳ್ಳಿ: ನಾಯಿ ಹಾವಳಿ ತಡೆಗೆ ಕ್ರಮ ಎಂದು?

ಸಮುದಾಯ ಆರೋಗ್ಯ ಕೇಂದ್ರದಲ್ಲಿ ವರ್ಷಕ್ಕೆ 300 ಪ್ರಕರಣ

ಪ್ರದೀಪ ಕುಲಕರ್ಣಿ
Published 30 ಜನವರಿ 2026, 4:43 IST
Last Updated 30 ಜನವರಿ 2026, 4:43 IST
ರಟ್ಟೀಹಳ್ಳಿ ಪಟ್ಟಣದ ಭಗತಸಿಂಗ್ ವೃತ್ತದಲ್ಲಿ ಕಂಡು ಬಂದ ಬೀದಿನಾಯಿಗಳ ಹಿಂಡು
ರಟ್ಟೀಹಳ್ಳಿ ಪಟ್ಟಣದ ಭಗತಸಿಂಗ್ ವೃತ್ತದಲ್ಲಿ ಕಂಡು ಬಂದ ಬೀದಿನಾಯಿಗಳ ಹಿಂಡು   

ರಟ್ಟೀಹಳ್ಳಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಬೀದಿನಾಯಿಗಳ ಹಾವಳಿಯಿಂದ ನಿತ್ಯ ಸಾರ್ವಜನಿಕರು ತೊಂದರೆಗೆ ಒಳಗಾಗುತ್ತಿದ್ದರೂ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಬೀದಿನಾಯಿಗಳ ಹಾವಳಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ.

ಬೀದಿನಾಯಿಗಳ ಹಾವಳಿ ತಡೆಗೆ ಸುಪ್ರೀಂ ಕೋರ್ಟ್ ಈಗಾಗಲೇ ಸ್ಥಳೀಯ ಸಂಸ್ಥೆಗಳಿಗೆ ಸೂಕ್ತ ನಿರ್ದೇಶನ ನೀಡಿದ್ದರೂ ಈ ಬಗ್ಗೆ ಅಧಿಕಾರಿಯಾಗಲಿ, ಚುನಾಯಿತ ಜನಪ್ರತಿನಿಧಿಗಳಾಗಲಿ ಗಮನಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಬೇಕರಿ, ಎಗ್ ರೈಸ್, ಚಿಕನ್ ಸೆಂಟರ್, ಮಾಂಸದಂಗಡಿ, ಡಾಬಾ ಎದುರು ನೂರಾರು ಬೀದಿನಾಯಿಗಳು ಗುಂಪುಗುಂಪಾಗಿ ಇರುತ್ತವೆ. ಇಲ್ಲಿ ಸಂಚರಿಸುವವರ ಮೇಲೆ ಎರಗಿ ಕಚ್ಚಿ ಗಾಯಗೊಳಿಸುತ್ತಿವೆ. 

ADVERTISEMENT

ರಟ್ಟೀಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ 2025ರ ಜುಲೈ ತಿಂಗಳಲ್ಲಿ 20, ಅಗಸ್ಟ್ 26, ಸೆಪ್ಟಂಬರ್ 32, ಅಕ್ಟೋಬರ್ 21, ನವೆಂಬರ್ 19, ಡಿಸೆಂಬರ್ 30 ಹಾಗೂ 2026ರ ಜನೆವರಿಯಲ್ಲಿ 19 ನಾಯಿ ಕಡಿತದ ಪ್ರಕರಣಗಳು ದಾಖಲಾಗಿವೆ. ವರ್ಷಕ್ಕೆ ಕನಿಷ್ಠ 200-300 ಪ್ರಕರಣಗಳು ದಾಖಲಾಗುತ್ತಿವೆ.

‘ತಿಂಗಳಿಗೆ ಕನಿಷ್ಠ 30ಕ್ಕೂ ಹೆಚ್ಚು ಜನರು ನಾಯಿ ಕಡಿತಕ್ಕೆ ಒಳಗಾಗಿ ಚಿಕಿತ್ಸೆಗೆ ದಾಖಲಾಗುತ್ತಿದ್ದಾರೆ. ಔಷಧ ಆಸ್ಪತ್ರೆಗಳಲ್ಲಿ ಲಭ್ಯವಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಕಡಿತಕ್ಕೊಳಗಾದವರಿಗೆ 3, 5, 7 ದಿನಗಳಿಗೆ ಕನಿಷ್ಠ 4 ಡೋಸ್‌ನಂತೆ ಆ್ಯಂಟಿ ರೇಬೀಸ್ ಚುಚ್ಚುಮದ್ದು ನೀಡಲಾಗುತ್ತಿದೆ’ ಎನ್ನುತ್ತಾರೆ ರಟ್ಟೀಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ವೈದಾಧಿಕಾರಿ ಡಾ. ಹೊನ್ನಪ್ಪ.

‘ಇಲ್ಲಿಯ ಭಗತಸಿಂಗ್ ವೃತ್ತ, ಹಳೇ ಬಸ್ ನಿಲ್ದಾಣ ವೃತ್ತ, ಹೊಸ ಬಸ್ ನಿಲ್ದಾಣ ವೃತ್ತ, ತುಮ್ಮಿನಕಟ್ಟಿ ರಸ್ತೆ ಸೇರಿದಂತೆ ಪಟ್ಟಣದ ವಿವಿಧೆಡೆ ಬೀದಿನಾಯಿಗಳು ಹಾವಳಿ ಹೆಚ್ಚಾಗಿ ಕಂಡು ಬರುತ್ತಿದೆ. ನಿತ್ಯ ಈ ಮಾರ್ಗಗಳಲ್ಲಿ ಸಂಚರಿಸುವ ಸಾರ್ವಜನಿಕರು, ಮಕ್ಕಳು, ಮಹಿಳೆಯರು ಆತಂಕ ಎದುರಿಸುವಂತಾಗಿದೆ. ವಾಹನ ಸವಾರರು ನಾಯಿಗಳ ದಾಳಿಯಿಂದ ಗಾಡಿಯಿಂದ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಕೂಡಲೇ ಬೀದಿನಾಯಿಗಳ ದಾಳಿ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಪಟ್ಟಣದ ನಿವಾಸಿ ಹೇಮಣ್ಣ ನಿಂಬೆಗೊಂದಿ ಒತ್ತಾಯಿಸಿದ್ದಾರೆ.

ನುರಿತ ವೈದ್ಯರ ಕೊರತೆ ‘ಬೀದಿನಾಯಿಗಳ ಸಂತಾನ ಶಕ್ತಿ ಹರಣ ಚಿಕಿತ್ಸೆಗೆ ಪಟ್ಟಣದ ತಾವರಗಿ ರಸ್ತೆಯಲ್ಲಿ ಪಟ್ಟಣ ಪಂಚಾಯಿತಿಯಿಂದ ₹ 5 ಲಕ್ಷ ವೆಚ್ಚದಲ್ಲಿ ಕೊಠಡಿ ನಿರ್ಮಾಣ ಸೇರಿದಂತೆ ವಿವಿಧ ಮೂಲ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗಿದೆ. ಆದರೆ ಪಶುವೈದ್ಯ ಇಲಾಖೆಯಿಂದ ಚಿಕಿತ್ಸೆ ನಡೆಸಲು ನುರಿತ ವೈದ್ಯರ ಕೊರತೆ ಇದೆ. ಇಲಾಖೆಯಿಂದ ಜೌಷಧ ಲಭ್ಯತೆ ಇಲ್ಲ ಎನ್ನುತ್ತಿದ್ದಾರೆ. ಶೀಘ್ರದಲ್ಲಿ ಬೀದಿನಾಯಿಗಳ ಸಂತಾನ ಶಕ್ತಿ ಹರಣ ಚಿಕಿತ್ಸೆ ಕೈಗೊಳ್ಳಲು ಕ್ರಮ ವಹಿಸುತ್ತೇವೆ’ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.