ರಟ್ಟೀಹಳ್ಳಿ: ಗ್ರಾಮ ಪಂಚಾಯ್ತಿಯಿಂದ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೊಂಡು ಸುಮಾರು 5 ವರ್ಷವಾದರೂ ಪಟ್ಟಣ ಪಂಚಾಯ್ತಿಗೆ ಚುನಾಯಿತ ಜನಪ್ರತಿನಿಧಿಗಳಿಲ್ಲದೆ ಪಟ್ಟಣದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಸಾರ್ವಜನಿಕ ವಲಯದ ಮಾತಾಗಿತ್ತು.
ತಹಶೀಲ್ದಾರ ಪಟ್ಟಣ ಪಂಚಾಯ್ತಿಯ ಆಡಳಿತಾಧಿಕಾರಿಯಾಗಿ ಮುಖ್ಯಾಧಿಕಾರಿಯೊಂದಿಗೆ ಕಳೆದ 5 ವರ್ಷಗಳಲ್ಲಿ ಪಟ್ಟಣ ಪಂಚಾಯ್ತಿ ಆಡಳಿತವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಇದೀಗ ರಾಜ್ಯ ಚುನಾವಣಾ ಆಯೋಗ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹಸಿರು ನಿಶಾನೆ ತೋರಿಸಿದ್ದು, ಚುನಾವಣಾ ದಿನಾಂಕವನ್ನು ನಿಗದಿಪಡಿಸುತ್ತಲೇ ಪಟ್ಟಣದಲ್ಲಿ ಚುನಾವಣಾ ರಂಗು ಕಾವೇರಿದೆ.
ಪಟ್ಟಣದಲ್ಲಿ 15 ವಾರ್ಡ್: ಗ್ರಾಮ ಪಂಚಾಯ್ತಿ ಅವಧಿಯಲ್ಲಿ 36 ಜನ ಸದಸ್ಯ ಬಲವನ್ನು ಹೊಂದಿತ್ತು. ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೆರಿರುವ ಕಾರಣ 15 ವಾರ್ಡ್‌ಗಳಾಗಿ ವಿಂಗಡನೆಗೊಂಡಿದೆ. ಅಲ್ಲದೇ ಈಗಾಗಲೇ ರಾಜ್ಯ ಚುನಾವಣಾ ಆಯೋಗ ನಿಗದಿತ 15 ವಾರ್ಡ್‌ಗಳ ಅಭ್ಯರ್ಥಿಗಳ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದೆ
ಚುನಾವಣೆ ವೇಳಾಪಟ್ಟಿ: ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸುವ ದಿನಾಂಕ: ಜುಲೈ 29, ನಾಮಪತ್ರ ಸಲ್ಲಿಸಲು ಕೊನೆಯ ದಿನ ಆಗಸ್ಟ್ 5, ನಾಮಪತ್ರ ಪರಿಶೀಲನೆ ಆ.6, ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಆ.8, ಮತದಾನ ಆ.17 (ಬೆಳಿಗ್ಗೆ 7 ರಿಂದ ಸಂಜೆ 5) ಮತಗಳ ಎಣಿಕೆ (ತಾಲ್ಲೂಕಿನ ಕೇಂದ್ರ ಸ್ಥಳದಲ್ಲಿ) ಆ.20ರಂದು ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ.
ರಾಜ್ಯ ಸರ್ಕಾರದ ಅಭಿವೃದ್ಧಿ ಹಿನ್ನೆಡೆ ಬಿ.ಸಿ.ಪಾಟೀಲರ ಕೊಡುಗೆ ಕಾರ್ಯಕರ್ತರ ಬಲದಿಂದ ಚುನಾವಣೆ ಎದುರಿಸುತ್ತೇವೆ. ಅಭಿವೃದ್ಧಿಯೇ ನಮ್ಮ ಮೂಲಮಂತ್ರ– ದೇವರಾಜ ನಾಗಣ್ಣನವರ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು ಅಭಿವೃದ್ಧಿ ಪ್ರತಿಷ್ಠೆಯ ದೃಷ್ಟಿಯಿಂದ ಎಲ್ಲ 15 ವಾರ್ಡ್‌ಗಳಿಗೆ ಅಭ್ಯರ್ಥಿ ನಿಲ್ಲಿಸುತ್ತಿವೆ. ಗ್ಯಾರಂಟಿ ಯೋಜನೆ ಕೈ ಹಿಡಿಯಲಿವೆ.– ಪಿ.ಡಿ.ಬಸನಗೌಡ್ರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ರಾಷ್ಟ್ರೀಯ ಪಕ್ಷಗಳ ಪ್ರಬಲ ಪೈಪೋಟಿ
ಮೊದಲ ಬಾರಿಗೆ ರಟ್ಟೀಹಳ್ಳಿಯಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣೆಗಳು ರಾಷ್ಟ್ರೀಯ ಪಕ್ಷಗಳ ಪಕ್ಷದ ಚಿನ್ಹೆಗಳ ಅಡಿ ನಡೆಯುತ್ತಿದ್ದು ಮೇಲ್ನೋಟಕ್ಕೆ ನೇರ ಹಣಾಹಣಿ ಎದ್ದು ಕಾಣುತ್ತಿದೆ. ಪಟ್ಟಣ ಪಂಚಾಯ್ತಿಯಾಗಿ ಮೊದಲ ಬಾರಿ ಚುನಾವಣಾ ನಡೆಯುತ್ತಿರುವುದರಿಂದ ಪ್ರಬಲ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ದೊಡ್ಡ ಪೈಪೋಟಿ ನಡೆಯುವ ಸಾಧ್ಯತೆಯಿದೆ ಎಂದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ. ಈ ನಡುವೆ ಪಕ್ಷಗಳ ನಡೆಯಿಂದ ಬೇಸತ್ತು ಅಥವಾ ಪಕ್ಷಗಳ ಟಿಕೆಟ್ ಹಂಚಿಕೆಯಲ್ಲಿ ವಂಚಿತಗೊಂಡರೆ ಪಕ್ಷೇತರ ಪ್ಯಾನಲ್ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ಚಳ್ಳೇಹಣ್ಣು ತಿನಿಸುವ ನಿಟ್ಟಿನಲ್ಲಿ ಕೂಡ ಸ್ಪರ್ಧಿಗಳು ರಣತಂತ್ರ ರೂಪಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.