ಹಿರೇಕೆರೂರ ತಾಲ್ಲೂಕಿನ ದೂದಿಹಳ್ಳಿ ಗ್ರಾಮದಲ್ಲಿರುವ ಮಿನಿ ಅಂಬೇಡ್ಕರ್ ಭವನ
ಹಿರೇಕೆರೂರ: ತಾಲ್ಲೂಕಿನ ಚನ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೂದಿಹಳ್ಳಿ ಗ್ರಾಮದಲ್ಲಿನ ಮಿನಿ ಅಂಬೇಡ್ಕರ್ ಭವನ ಪಾಳುಬಿದ್ದಿದೆ.
2005–06ನೇ ಸಾಲಿನಲ್ಲಿ ಈ ಭವನವನ್ನು ನಿರ್ಮಿಸಲಾಗಿತ್ತು. ಸಾರ್ವಜನಿಕರ ಹಣದಿಂದ ನಿರ್ಮಿಸಿದ ಭವನದ ರಕ್ಷಣೆಗೆ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿಲ್ಲ. ಇದರಿಂದಾಗಿ, ಸ್ವಚ್ಛತೆ ಇಲ್ಲದೆ, ಬಣ್ಣ ಕಾಣದೆ ಭವನ ಸೊರಗಿದೆ. ಕಿಟಕಿಯ ಗಾಜುಗಳು ಒಡೆದಿದ್ದು, ಭದ್ರತೆಯೇ ಇಲ್ಲದಂತಾಗಿದೆ.
ಮಿನಿ ಅಂಬೇಡ್ಕರ್ ಭವನವು ಯಾವುದೇ ಉಪಯುಕ್ತ ಕೆಲಸಗಳಿಗೆ ಬಳಕೆಯಾಗುತ್ತಿಲ್ಲ. ಇದು ಗೋದಾಮಿನಂತಾಗಿದೆ. ದನ–ಕರುಗಳನ್ನು ಇಲ್ಲಿಯೇ ಕಟ್ಟಲಾಗುತ್ತಿದೆ. ಶಿಥಿಲಾವಸ್ಥೆಯಲ್ಲಿರುವ ಭವನವನ್ನು ಅಭಿವೃದ್ಧಿ ಮಾಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
‘ಮಿನಿ ಅಂಬೇಡ್ಕರ್ ಭವನದ ಅಭಿವೃದ್ಧಿ ಬಗ್ಗೆ ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿದರೆ, ಅನುದಾನವಿಲ್ಲವೆಂದು ಕಾರಣ ಹೇಳುತ್ತಾರೆ. ಭವನವನ್ನು ಅಭಿವೃದ್ಧಿಪಡಿಸಿದರೆ ಸಾರ್ವಜನಿಕರಿಗೆ ಉಪಯೋಗವಾಗುತ್ತದೆ’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಗಂಗಾಧರ ಬೋಗೆರ ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯಿಂದ ಮಿನಿ ಅಂಬೇಡ್ಕರ್ ಭವನ ನಿರ್ಮಿಸಿದ್ದು ಅದರ ನಿರ್ವಹಣೆಯು ಗ್ರಾಮ ಪಂಚಾಯಿತಿಯ ಹೊಣೆ.ಮಹಬೂಬ್ ಸಾಬ್ ನದಾಫ್, ಗ್ರೇಡ್ 2 ಸಹಾಯಕ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.