ADVERTISEMENT

ಪ್ರಯೋಗಾಲಯಕ್ಕೆ 14 ಮಂದಿಯ ಗಂಟಲು ದ್ರವ ರವಾನೆ

ದೆಹಲಿ ಪ್ರವಾಸ ಕೈಗೊಂಡಿದ್ದ ವ್ಯಕ್ತಿಗಳ ಮೇಲೆ ನಿಗಾ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 10:34 IST
Last Updated 3 ಏಪ್ರಿಲ್ 2020, 10:34 IST

ಹಾವೇರಿ:ದೆಹಲಿಯ ನಿಜಾಮುದ್ದೀನ್‍ನಲ್ಲಿ ತಬ್ಲೀಗ್‌ ಎ ಜಮಾತ್ ಧಾರ್ಮಿಕ ಸಮಾವೇಶ ನಡೆಯುತ್ತಿದ್ದ ಸಂದರ್ಭದಲ್ಲೇ ದೆಹಲಿ ಪ್ರವಾಸಕ್ಕೆ ಹೋಗಿದ್ದ 13 ಜನ ಸೇರಿ ಒಟ್ಟು 14 ಜನರ ರಕ್ತ ಮತ್ತು ಗಂಟಲು ದ್ರವದ ಮಾದರಿಯನ್ನು ಗುರುವಾರ ಶಿವಮೊಗ್ಗ ವೈರಾಲಜಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಮಾರ್ಚ್ ಆರಂಭದಲ್ಲಿ ದೆಹಲಿಗೆ ತೆರಳಿದ್ದ 13 ಜನರನ್ನು ಬುಧವಾರ ಪೊಲೀಸ್‌ ಇಲಾಖೆ ಪತ್ತೆ ಮಾಡಿತ್ತು. ಆರೋಗ್ಯ ಇಲಾಖೆ ತಪಾಸಣೆ ಮಾಡಿತ್ತು. ಗುರುವಾರ ಮೊಬೈಲ್ ಕರೆ ಪರಿಶೀಲಿಸಿ ದೆಹಲಿಗೆ ತೆರಳಿದ್ದ ಇಬ್ಬರ ಪಟ್ಟಿಯನ್ನು ಬೆಂಗಳೂರಿನಿಂದ ಜಿಲ್ಲಾಡಳಿತಕ್ಕೆ ರವಾನಿಸಲಾಗಿದೆ. ಜಿಲ್ಲಾಡಳಿತ ಅವರನ್ನು ವಿಚಾರಣೆ ಮಾಡಿದಾಗ ಇನ್ನೂ 11 ಜನ ತಮ್ಮೊಂದಿಗೆ ಇರುವುದಾಗಿ ತಿಳಿಸಿದ್ದಾರೆ. ಹೀಗೆ ಒಟ್ಟು ಶಿಗ್ಗಾವಿಯ 12 ಜನ, ಹಾವೇರಿಯ ಒಬ್ಬ ದೆಹಲಿಗೆ ತೆರಳಿದ್ದು ದೃಢಪಟ್ಟಿದೆ. ಈ 13 ಹಾಗೂ ರಾಣಿಬೆನ್ನೂರಿನ ವ್ಯಕ್ತಿ ಸೇರಿದಂತೆ ಒಟ್ಟು 14 ಜನರ ರಕ್ತ, ಗಂಟಲು ದ್ರವದ ಮಾದರಿಗಳನ್ನು ಲ್ಯಾಬ್‍ಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

8ನೇ ಪ್ರಕರಣವೂ ನೆಗೆಟಿವ್‌:

ADVERTISEMENT

ಜಿಲ್ಲೆಯ 8ನೇ ಪ್ರಕರಣವಾದ ಮಡಿಕೇರಿಯಿಂದ ಸವಣೂರು ತಾಲ್ಲೂಕಿಗೆ ಬಂದಿದ್ದ ವ್ಯಕ್ತಿಯ ಗಂಟಲು ದ್ರವದ ವರದಿಯು ಶಿವಮೊಗ್ಗ ವೈರಾಲಜಿ ಪ್ರಯೋಗಾಲಯದಿಂದ ಗುರುವಾರ ಬಂದಿದ್ದು, ಅದು ಕೂಡ ನೆಗೆಟಿವ್‌ ಆಗಿದೆ.

ಜಿಲ್ಲೆಯಲ್ಲಿ ಒಟ್ಟು 191 ಮಂದಿಯ ಮೇಲೆ ನಿಗಾ ಇಡಲಾಗಿದೆ. 115 ಮಂದಿ ಗೃಹಬಂಧನದಲ್ಲಿದ್ದು, ಈಗಾಗಲೇ 76 ಮಂದಿ 28 ದಿನದ ಗೃಹಬಂಧನ ಮುಗಿಸಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಾಜೇಂದ್ರ ದೊಡ್ಡಮನಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.