ADVERTISEMENT

‘ಪುರುಷರಿಗೆ ಮಣೆ; ಮಹಿಳೆಗೆ ಸಿಗದ ಮನ್ನಣೆ’

ಕಸಾಪ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಸರಸ್ವತಿ ಚಿಮ್ಮಲಗಿ ಬೇಸರ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 15:13 IST
Last Updated 18 ಏಪ್ರಿಲ್ 2021, 15:13 IST
ಡಾ.ಸರಸ್ವತಿ ಚಿಮ್ಮಲಗಿ 
ಡಾ.ಸರಸ್ವತಿ ಚಿಮ್ಮಲಗಿ    

ಹಾವೇರಿ: ‘ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ‌ ಇದುವರೆಗೂ 25 ಪುರುಷರು ಸೇವೆ ಸಲ್ಲಿಸಿದ್ದಾರೆ. ಈ ಸಂಸ್ಥೆಗೆ 105 ವರ್ಷಗಳು ತುಂಬಿದ್ದರೂ, ಒಬ್ಬ ಮಹಿಳೆಯೂ ಅಧ್ಯಕ್ಷರಾಗಿ ಪರಿಷತ್ತಿನ ಗದ್ದುಗೆ ಏರದಿರುವುದು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ’ ಎಂದು ಕಸಾಪ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಡಾ.ಸರಸ್ವತಿ ಚಿಮ್ಮಲಗಿ ಬೇಸರ ವ್ಯಕ್ತಪಡಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮೈಸೂರು ಅರಸರು ದೇಶದಲ್ಲಿ ಸಮಾನತೆಯೆಡೆಗೆ ಒಂದು ಹೆಜ್ಜೆಯೆಂಬಂತೆ ಪ್ರಪ್ರಥಮವಾಗಿ ಕನ್ನಡ ನಾಡಿನಲ್ಲಿ ಮೀಸಲಾತಿಯ ಬೀಜ ಬಿತ್ತಿದರು. ಆದರೆ, ನಾಲ್ವಡಿ ಕೃಷ್ಣರಾಜ ಒಡೆಯರು ಹುಟ್ಟುಹಾಕಿದ ಕಸಾಪ ಸಂಸ್ಥೆಯಲ್ಲಿ ಮಹಿಳೆಯರು ಅಧ್ಯಕ್ಷರಾಗಿ ಆಯ್ಕೆಯಾಗದಿರುವುದು ವಿಪರ್ಯಾಸ ಎಂದರು.

12ನೇ ಶತಮಾನದ ಅನುಭವ ಮಂಟಪದಲ್ಲಿ ಮಹಿಳೆಗೆ ಸ್ಥಾನ ಕಲ್ಪಿಸಿದ ಹೆಗ್ಗಳಿಕೆ ಬಸವಾದಿ ಶರಣರಿಗೆ ಸಲ್ಲುತ್ತದೆ. ಅದರಂತೆ ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ಮಹಿಳೆಗೆ ಸಂವಿಧಾನಾತ್ಮಕ ಹಕ್ಕುಗಳನ್ನು ದೊರಕಿಸಿಕೊಟ್ಟಿದ್ದರಿಂದ ಪ್ರಧಾನಿ, ರಾಷ್ಟ್ರಪತಿ ಸ್ಥಾನಗಳನ್ನು ಮಹಿಳೆಯರು ಅಲಂಕರಿಸುವಂತಾಯಿತು. ಲಿಂಗ ತಾರತಮ್ಯ ಹೋಗಲಾಡಿಸುವ ಮಹತ್ತರವಾದ ಹೊಣೆಗಾರಿಕೆ ಇಂದಿನ ಮತದಾರರ ಮೇಲಿದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಈ ಬಾರಿ ಸ್ಪರ್ಧಿಸಿರುವ 21 ಅಭ್ಯರ್ಥಿಗಳಲ್ಲಿ ಏಕೈಕ ಮಹಿಳಾ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸಿದ್ದೇನೆ. ಕೇವಲ ಮಹಿಳೆ ಎಂಬ ಅನುಕಂಪದಿಂದ ಮಾತ್ರವಲ್ಲ, ನನ್ನ ಸಾಹಿತ್ಯ ಸಾಧನೆ, ರಂಗಭೂಮಿ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ, ಸಾಮಾಜಿಕ ಸೇವೆ ನೋಡಿ ನನ್ನನ್ನು ಬೆಂಬಲಿಸಲಿ. ಆಕಾಶವಾಣಿ, ದೂರದರ್ಶನ ಹಾಗೂ ರಂಗಭೂಮಿಯ 100ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಲ್ಲದೆ, ಮಹಿಳಾ ನಾಟಕ ತಂಡ ಕಟ್ಟಿ ಹಲವಾರು ನಾಟಕಗಳನ್ನು ನಿರ್ದೇಶಿಸಿದ್ದೇನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿಶ್ವನಾಥ, ಅಶ್ವಿನಿ, ಸಿ.ಎಂ. ಕೋರಿಶೆಟ್ಟರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.