ADVERTISEMENT

ಅತಿವೃಷ್ಟಿ ಪೀಡಿತ ಪಟ್ಟಿಗೆ ಸೇರದ ಸವಣೂರು

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣನವರ ಅಧಿಕಾರಿಗಳ ವಿರುದ್ಧ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 2:31 IST
Last Updated 20 ಸೆಪ್ಟೆಂಬರ್ 2020, 2:31 IST
ಸವಣೂರ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣನವರ ಮಾತನಾಡಿದರು
ಸವಣೂರ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣನವರ ಮಾತನಾಡಿದರು   

ಸವಣೂರ: ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮಳೆ ಸವಣೂರ ತಾಲ್ಲೂಕಿನಲ್ಲಿ ಆಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೂ ತಾಲ್ಲೂಕನ್ನು ಅತಿವೃಷ್ಟಿ ಹಾನಿ ಪಟ್ಟಿಯಲ್ಲಿ ಏಕೆ ಸೇರಿಸಿಲ್ಲ? ಕೃಷಿ ಇಲಾಖೆ ನಿಷ್ಕಾಳಜಿ ಇದಕ್ಕೆ ಕಾರಣ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣನವರ ಕೃಷಿ ಇಲಾಖೆ ಅಧಿಕಾರಿ ಬಸನಗೌಡ ಪಾಟೀಲ ಅವರನ್ನು ತರಾಟೆಗೆ ತೆಗೆದುಕೊಂಡರು.

ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಜುಲೈ ಮತ್ತು ಅಗಸ್ಟ್‌ ತಿಂಗಳಿನಲ್ಲಿ ಅತಿ ಹೆಚ್ಚು ಮಳೆ ತಾಲ್ಲೂಕಿನಾದ್ಯಂತ ಸುರಿದಿದೆ. ಇದರಿಂದ ಸಾಕಷ್ಟು ರೈತರ ಕೃಷಿ ಜಮೀನಿನಲ್ಲಿ ನೀರು ನಿಂತು ಬೆಳೆ ಹಾಳಾಗಿ ಸಂಕಷ್ಟಕ್ಕೆ ಸಿಲುಕುವಂತೆ ಆಗಿದೆ. ಹೀಗಿದ್ದರು ಕೂಡ ತಾಲ್ಲೂಕನ್ನು ಅತಿವೃಷ್ಟಿ ಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲಿ ಕೈಬಿಟ್ಟಿರುವುದಕ್ಕೆ ಅಧಿಕಾರಿಗಳೇ ಹೊಣೆ ಎಂದು ಹರಿಹಾಯ್ದರು.

ಅಧಿಕಾರಿ ಮಾತನಾಡಿ, ಅತಿವೃಷ್ಟಿ ಹಾನಿಯ ಮಾಹಿತಿಯನ್ನು ಸರ್ಕಾರ ಇಲಾಖೆಯಿಂದ ತೆಗೆದುಕೊಂಡಿಲ್ಲ. ಈ ಬಗ್ಗೆ ರಾಜ್ಯಮಟ್ಟದಲ್ಲಿಯೇ ನಿರ್ಧಾರ ಕೈಗೊಳ್ಳಲಾಗಿದೆ. ಇದರಲ್ಲಿ ಇಲಾಖೆ ಹಸ್ತಕ್ಷೇಪ ಏನು ಇಲ್ಲ ಎಂದು ಸ್ಪಷ್ಟನೆ ನೀಡಿದರು.

ADVERTISEMENT

ಕಳೆದ ಸಾಲಿನ ಬೆಳೆ ಪರಿಹಾರ ಹಾಗೂ ಗೋವಿನಜೋಳ ಬೆಳೆಯ ಸಹಾಯ ಧನವನ್ನು ರೈತರಿಗೆ ನೀಡುವಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದಾರೆ. ಕೆಲ ರೈತರಿಗೆ ಮಾತ್ರ ಸಹಾಯ ಧನ ಸಿಕ್ಕಿದೆ ಎಂದರು.

ಅಧಿಕಾರಿ ಮಾತನಾಡಿ, ಸರ್ಕಾರದ ನಿರ್ದೇಶನದ ಮೇರೆಗೆ ಅರ್ಜಿ ಸಲ್ಲಿಸಿ, 29 ಸಾವಿರ ಹೆಕ್ಟೇರ್‌ ಕೃಷಿಭೂಮಿಗೆ ಪರಿಹಾರಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು ಎಂದರು.

ಸದಸ್ಯ ಬಸವರಾಜ ಕೋಳಿವಾಡ ಎಷ್ಟು ಬೇಡಿಕೆ ಸಲ್ಲಿಸಲಾಗಿತ್ತು ಎಂಬುದರೊಂದಿಗೆ ಎಷ್ಟು ಪರಿಹಾರ ನೀಡಿದ್ದಿರಿ ಎಂಬುದನ್ನು ಸಹ ತಿಳಿಸಿ ಎಂದು ಆಕ್ರೋಷ ವ್ಯಕ್ತಪಡಿಸಿದರು. ಸಮಗ್ರ ವರದಿ ಪಡೆದು ರೈತರಿಗೆ ಪರಿಹಾರ ನೀಡಲು ಸಭೆ ನಿರ್ಧರಿಸಿತು.

ವಲಯ ಅರಣ್ಯ ಇಲಾಖೆ ಅಧಿಕಾರಿಗಳು ನೆಡತೋಪು ಯೋಜನೆಯಡಿ ಕಳೆದ ಮೂರು ವರ್ಷಗಳಿಂದ ನೆಟ್ಟಿರುವ ಸಸಿಗಳ ಆಧಾರದಲ್ಲಿ ಬಿಲ್ ಮಾಡುತ್ತಿದ್ದಾರೆ ಎಂದು ತಿಪ್ಪಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ದುಂಡಸಿ ವಲಯ ಅರಣ್ಯ ಇಲಾಖೆ ಆರ್‌ಎಫ್‌ಒ ವೈ.ಆರ್.ನದಾಫ್‌ ಮಾತನಾಡಿ, ಯೋಜನೆಯಡಿ ತಯಾರಿಸಿರುವ ಕ್ರಿಯಾ ಯೋಜನೆಯಂತೆ ಪ್ರತಿ ವರ್ಷ ಸಸಿಗಳನ್ನು ನೆಟ್ಟು, ಪೋಷಣೆ ಮಾಡಲಾಗುತ್ತಿದೆ ಎಂದರು. ಸಸಿಗಳನ್ನು ನೆಟ್ಟಿರುವ ಕುರಿತು ಒಂದು ವಾರದೊಳಗೆ ಮಾಹಿತಿ ನೀಡುವಂತೆ ಸದಸ್ಯರು ಒತ್ತಾಯಿಸಿದರು. ಬಿಇಒ ಐ.ಬಿ.ಬೆನಕೊಪ್ಪ ಮಾತನಾಡಿ, ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆ ನಡೆಯಲಿದೆ. ಪಟ್ಟಣದ ವಿದ್ಯಾಭಾರತಿ ಪ್ರೌಢಶಾಲೆ ಹಾಗೂ ಎಸ್ಎಫ್ಎಸ್ ಪ್ರೌಢ ಶಾಲೆಯಲ್ಲಿ (2) ಪರೀಕ್ಷೆ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಒಟ್ಟು 599 ಮಕ್ಕಳು ಪರೀಕ್ಷೆಗೆ ಹಾಜರಾಗುತ್ತಿದ್ದು, ಈಗಾಗಲೇ ಪರೀಕ್ಷಾ ಕಾರ್ಯಕ್ಕೆ ಎಲ್ಲ ಅಧಿಕಾರಿಗಳ ನೇಮಕ ಮಾಡಲಾಗಿದೆ. ಒಂದು ಕಾಯ್ದಿರಿಸಿದ ಪರೀಕ್ಷಾ ಕೇಂದ್ರವನ್ನು ಗುರುತಿಸಲಾಗಿದೆ ಎಂದರು.

ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ, ಇಒ ಮುನಿಯಪ್ಪ ಪಿ., ಎಡಿಎಸ್ ಅಮರಾಪೂರ, ಸ್ಥಾಯಿ ಸಮಿತಿ ಅಧ್ಯಕ್ಷೆ ರತ್ನಾ ವಗ್ಗನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.