ಬಂಜಾರ ಸಮುದಾಯದ ಜನರ ಪ್ರದರ್ಶನ
ತಡಸ (ಮಮದಾಪುರ): ‘ಬಂಜಾರ ಸಮುದಾಯದ ಕಲೆ ಸಂಸ್ಕೃತಿ ಆಚಾರ, ವಿಚಾರಗಳು ಉಡುಗೆ,ತೊಡುಗೆ ಮುಂದಿನ ತಲೆಮಾರಿಗೆ ಪರಿಚಯಿಸುವ ಕಾರ್ಯವನ್ನು ಅಕಾಡೆಮಿ ಹಾಗೂ ಜಾನಪದ ವಿಶ್ವವಿದ್ಯಾಲಯ ಮಾಡುತ್ತಿದೆ’ ಎಂದು ಜಾನಪದ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಶಹಜಹಾನ ಮುದಕವಿ ಹೇಳಿದರು.
ಮಮದಾಪುರ ಗ್ರಾಮದಲ್ಲಿ ಬಂಜಾರ ಸಂಸ್ಕೃತಿ ಹಾಗೂ ಭಾಷಾ ಅಕಾಡೆಮಿಯು ಬುಧವಾರ ಆಯೋಜಿಸಿದ್ದ ಅಕಾಡೆಮಿಯ ನಡೆ ತಾಂಡಾದ ಕಡೆ, ಬಂಜಾರ ಸಾಹಿತ್ಯ, ಸಂಸ್ಕೃತಿ ಕಲೆ ಹಾಗೂ ಶಿಕ್ಷಣದ ಕುರಿತು ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಹಳ್ಳಿಯ ಸೊಗಸಾದ ಜೀವನ ಆಚಾರ, ವಿಚಾರ ನಶಿಸಿ ಹೋಗದಂತೆ ಯುವಜನರು ಜಾಗೃತರಾಗಿ ಸಂಸ್ಕೃತಿ, ಭಾಷೆ ಕಲೆಯ ಉಳಿವಿಗೆ ಮುಂದಾಗಬೇಕು’ ಎಂದರು.
ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಸದಸ್ಯ ಕೆ.ಎಚ್. ಉತ್ತಮ, ‘ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯು ಬಂಜಾರ ಸಮಾಜದ ನಿರುದ್ಯೋಗಿ ಯುವಕ– ಯುವತಿಯರಿಗೆ ಆರ್ಥಿಕ ಸ್ವಾವಲಂಬಿಗಳಾಗಲು ನಿರಂತರವಾಗಿ ವೃತ್ತಿ ತರಬೇತಿ ಕಾರ್ಯಾಗಾರವನ್ನು ರಾಜ್ಯದ ತುಂಬಾ ಹಮ್ಮಿಕೊಳ್ಳುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮಣ ಬೆಂಡಲಗಟ್ಟಿ, ಗ್ರಾಮದ ಕಲಾವಿದರಿಗೆ ಮಾಶಾಸನ ಹಾಗೂ ಕಲೆಗೆ ಸಂಬಂಧಿಸಿದ ಪ್ರಮುಖ ವಸ್ತುಗಳನ್ನು ಅಕಾಡೆಮಿಯು ತಾಂಡಗಳಿಗೆ ನೀಡುವ ಕಾರ್ಯ ಮಾಡಬೇಕು’ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ದೇವಣ್ಣ ಚವಾಣ್, ಕೃಷ್ಣಪ್ಪ ನಾಯ್ಕ, ಹನುಮಂತಪ್ಪ ಕಾರಬಾರಿ, ಕಂಟೆಪ್ಪ ಲಮಾಣಿ, ಎಗಪ್ಪ ಚವ್ಹಾಣ, ಶೇಕಪ್ಪ ರಾಠೋಡ, ಎಸ್‌ಡಿಎಂಸಿ ಅಧ್ಯಕ್ಷ ಈಶ್ವರ ಲಮಾಣಿ, ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.