ADVERTISEMENT

ಹಾವೇರಿ | ವಿದ್ಯಾರ್ಥಿನಿ ಮೇಲೆ ದೌರ್ಜನ್ಯ: ಶಿಕ್ಷಕ ಅಮಾನತು

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 4:15 IST
Last Updated 22 ನವೆಂಬರ್ 2025, 4:15 IST
<div class="paragraphs"><p>ಅಮಾನತು</p></div>

ಅಮಾನತು

   

ಹಾವೇರಿ: ಜಿಲ್ಲೆಯ ರಾಣೆಬೆನ್ನೂರಿನಲ್ಲಿರುವ ಪ್ರತಿಷ್ಠಿತ ಶಾಲೆಯೊಂದರ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಕೃತ್ಯ ಎಸಗಿರುವ ಆರೋಪದಡಿ ಅದೇ ಶಾಲೆಯ ಇಂಗ್ಲಿಷ್ ಶಿಕ್ಷಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆರೋಪಿತ ಶಿಕ್ಷಕನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ವಿದ್ಯಾರ್ಥಿನಿಯ ಪೋಷಕರು ಹಾಗೂ ಶಾಲೆಯ ಮುಖ್ಯಶಿಕ್ಷಕರು ನೀಡಿರುವ ಹೇಳಿಕೆ ಆಧರಿಸಿ ಆರೋಪಿತ ಶಿಕ್ಷಕನ ವಿರುದ್ಧ ರಾಣೆಬೆನ್ನೂರು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಹ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೋಷಕರು ಹಾಗೂ ಶಾಲೆಯವರ ಹೇಳಿಕೆ ಸಹ ಪಡೆದುಕೊಂಡಿದ್ದಾರೆ.

ADVERTISEMENT

‘ರಾಣೆಬೆನ್ನೂರಿನಲ್ಲಿರುವ ಶಾಲೆಯೊಂದರಲ್ಲಿ ನ. 16ರಂದು ನಡೆದಿರುವ ಘಟನೆ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಡಿ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿತ ಶಿಕ್ಷಕ ನ. 16ರಿಂದಲೇ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ವಿಶೇಷ ತರಗತಿಗೆ ಬಂದಿದ್ದ ಸಂತ್ರಸ್ತೆ: ‘ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಭಾನುವಾರ ವಿಶೇಷ ತರಗತಿ ಏರ್ಪಡಿಸಲಾಗಿತ್ತು. ಹೀಗಾಗಿ, ಸಂತ್ರಸ್ತ ಬಾಲಕಿ ಸೇರಿ ಹಲವು ವಿದ್ಯಾರ್ಥಿನಿಯರು ಶಾಲೆಗೆ ಬಂದಿದ್ದರು. ತರಗತಿ ಮುಗಿದ ನಂತರ, ಕೆಲ ವಿದ್ಯಾರ್ಥಿನಿಯರನ್ನು ಮಾತ್ರ ಶಿಕ್ಷಕ ಕೊಠಡಿಯಲ್ಲಿ ಉಳಿಸಿಕೊಂಡಿದ್ದ. ಮನೆಪಾಠದ ಪುಸ್ತಕ ಪರಿಶೀಲಿಸಬೇಕೆಂದು ಹೇಳಿ, ಬಾಲಕಿಯರನ್ನು ಕೊಠಡಿಯೊಂದಕ್ಕೆ ಕರೆದೊಯ್ದಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಪುಸ್ತಕ ಪರಿಶೀಲಿಸುವ ನೆಪದಲ್ಲಿ ಸಂತ್ರಸ್ತ ವಿದ್ಯಾರ್ಥಿನಿಯ ಮೈ–ಕೈ ಮುಟ್ಟಿದ್ದ ಆರೋಪಿ ಶಿಕ್ಷಕ, ಲೈಂಗಿಕ ದೌರ್ಜನ್ಯ ಎಸಗಿದ್ದ. ಇದರಿಂದ ಹೆದರಿದ್ದ ಇತರೆ ಬಾಲಕಿಯರು, ಕೊಠಡಿಯಿಂದ ಹೊರಗೆ ಓಡಿಬಂದಿದ್ದರು. ನಂತರ, ಸಂತ್ರಸ್ತ ವಿದ್ಯಾರ್ಥಿನಿಯು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಳು. ಪೋಷಕರಿಗೆ ವಿಷಯ ತಿಳಿಸಿದ್ದಳು’ ಎಂದು ಮೂಲಗಳು ಹೇಳಿವೆ.

‘ಸೋಮವಾರ ಶಾಲೆಗೆ ಬಂದಿದ್ದ ಪೋಷಕರು, ಶಿಕ್ಷಕನ ವರ್ತನೆಯನ್ನು ಖಂಡಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಶಾಲೆಯ ಆಡಳಿತ ಮಂಡಳಿಯವರು, ಶಿಕ್ಷಕನನ್ನು ಅಮಾನತು ಮಾಡಿದ್ದಾರೆ. ನಂತರವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಇದೊಂದು ಬಾಲಕಿಗೆ ಸಂಬಂಧಪಟ್ಟ ಪ್ರಕರಣ. ಹೀಗಾಗಿ, ಬಾಲಕಿಯ ಮಾಹಿತಿ ಸೇರಿ ಯಾವ ಮಾಹಿತಿಯನ್ನು ಬಹಿರಂಗಪಡಿಸಲಾಗದು’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.