ADVERTISEMENT

ಹಾವೇರಿಯ ಸೇವೆ ಸ್ಮರಣೀಯ: ಕೃಷ್ಣ ಬಾಜಪೇಯಿ ಮನದಾಳದ ಮಾತು

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 15:40 IST
Last Updated 31 ಜುಲೈ 2020, 15:40 IST
ಹಾವೇರಿಯಲ್ಲಿ ಶುಕ್ರವಾರ ನಿರ್ಗಮಿತ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರನ್ನು ಜಿಲ್ಲಾಡಳಿತದಿಂದ ಬೀಳ್ಕೊಡಲಾಯಿತು. ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ, ಎಸ್ಪಿ ಕೆ.ಜಿ.ದೇವರಾಜು, ಸಿಇಒ ರಮೇಶ ದೇಸಾಯಿ, ಎಡಿಸಿ ಯೋಗೇಶ್ವರ ಇದ್ದಾರೆ
ಹಾವೇರಿಯಲ್ಲಿ ಶುಕ್ರವಾರ ನಿರ್ಗಮಿತ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರನ್ನು ಜಿಲ್ಲಾಡಳಿತದಿಂದ ಬೀಳ್ಕೊಡಲಾಯಿತು. ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ, ಎಸ್ಪಿ ಕೆ.ಜಿ.ದೇವರಾಜು, ಸಿಇಒ ರಮೇಶ ದೇಸಾಯಿ, ಎಡಿಸಿ ಯೋಗೇಶ್ವರ ಇದ್ದಾರೆ   

ಹಾವೇರಿ: ಜಿಲ್ಲೆಯಿಂದ ವರ್ಗಾವಣೆಗೊಂಡ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಅವರಿಗೆ ಆತ್ಮೀಯವಾಗಿ ಬೀಳ್ಕೊಡಲಾಯಿತು ಹಾಗೂ ನೂತನ ಜಿಲ್ಲಾಧಿಕಾರಿ ಸಂಜಯಶೆಟ್ಟಣ್ಣವರ ಅವರಿಗೆ ಸ್ವಾಗತಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿರ್ಗಮಿತ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ‘ಜಿಲ್ಲಾಧಿಕಾರಿಗಳ ವರ್ಗಾವಣೆ ಸಹಜವಾದುದು. ಹಾವೇರಿ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಾಗ ಲೋಕಸಭಾ ಚುನಾವಣೆ ಸಂದರ್ಭವಾಗಿತ್ತು. ವ್ಯವಸ್ಥಿತವಾಗಿ ಚುನಾವಣೆ ನಡೆಸಲು ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಿದರು. ಅದರಂತೆಯೇ ಚುನಾವಣೆಯನ್ನು ಯಶಸ್ವಿಯಾಗಿ ನಿಭಾಯಿಸಲಾಯಿತು, ನಂತರ ಜಿಲ್ಲೆಯಲ್ಲಿ ಪ್ರವಾಹ ಬಂದು ಸಾಕಷ್ಟು ತೊಂದರೆಯಾಯಿತು ಅದನ್ನು ಯಶಸ್ವಿಯಾಗಿ ನಿಭಾಯಿಸಲಾಯಿತು ಎಂದು ಸೇವೆಯ ಸಾರ್ಥಕತೆಯ ಬಗ್ಗೆ ಮನಬಿಚ್ಚಿ ಮಾತನಾಡಿದರು.

ನಂತರದಲ್ಲಿ ಪ್ರವಾಹದಿಂದ ಬೆಳೆ ಹಾನಿ, ಮನೆ ಹಾನಿ ಪರಿಹಾರ ಕಾರ್ಯದ ಜೊತೆಗೆ ಅನಿರೀಕ್ಷಿತವಾಗಿ ಕೋವಿಡ್ ವೈರಾಣು ಎದುರಾಯಿತು. ಈ ಎಲ್ಲವನ್ನು ಜಿಲ್ಲಾಡಳಿತದಿಂದ ಸಾಧ್ಯವಾದಷ್ಟೂ ನಿಯಂತ್ರಣ ಮಾಡಲಾಗಿದೆ. ಇಲ್ಲಿಯವರೆಗಿನ ಸೇವಾ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಆಧುನಿಕ ಆಡಳಿತ ಹಾಗೂ ಅಭಿವೃದ್ಧಿಯಲ್ಲಿ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದೆ. ವಿಶೇಷವಾಗಿ ಹಾವೇರಿಯಲ್ಲಿ ಕಲಿಕೆಗೆ ಸಾಕಷ್ಟು ಅವಕಾಶಗಳು ದೊರೆತವು ಎಂದರು.

ADVERTISEMENT

ನೂತನ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣನವರ ಅವರು ಶುಭ ಹಾರೈಸಿದರು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ಜಿ ದೇವರಾಜ, ಜಿಲ್ಲಾ ಪಂಚಾಯಿತಿ ಸಿಇಒ ರಮೇಶ ದೇಸಾಯಿ, ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ ಮತ್ತು ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.