ADVERTISEMENT

ಹಾವೇರಿ: ಮುಖ್ಯಶಿಕ್ಷಕರ ಅಮಾನತಿಗೆ ಎಸ್‌ಎಫ್‌ಐ ಆಗ್ರಹ

30 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸಿಗದ ‘ಪ್ರವೇಶ ಪತ್ರ’: ಡಿಡಿಪಿಐಗೆ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 13:53 IST
Last Updated 14 ಜುಲೈ 2021, 13:53 IST
ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರವೇಶ ಪತ್ರ ಸಿಗದೆ ಕಂಗಾಲಾಗಿರುವ 30 ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಎಸ್‌ಎಫ್‌ಐ ಕಾರ್ಯಕರ್ತರು ಹಾವೇರಿ ಜಿಲ್ಲಾಡಳಿತ ಭವನದ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿ, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು
ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರವೇಶ ಪತ್ರ ಸಿಗದೆ ಕಂಗಾಲಾಗಿರುವ 30 ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಎಸ್‌ಎಫ್‌ಐ ಕಾರ್ಯಕರ್ತರು ಹಾವೇರಿ ಜಿಲ್ಲಾಡಳಿತ ಭವನದ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿ, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು   

ಹಾವೇರಿ: ಹಿರೇಕೆರೂರುತಾಲ್ಲೂಕಿನ ಚಿಕ್ಕೇರೂರಿನ ಅನುದಾನಿತ ಮಹಾತ್ಮಗಾಂಧಿ ಪ್ರೌಢಶಾಲೆಯಲ್ಲಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಿಂದ ವಂಚಿತರಾದ 30 ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಬೇಕು ಹಾಗೂ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದ ಮುಖ್ಯಶಿಕ್ಷಕ ಮತ್ತು ಗುಮಾಸ್ತರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.

ದೇವಗಿರಿ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನಾ ಧರಣಿ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಮತ್ತು ಡಿಡಿಪಿಐ ಕಚೇರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಮಾತನಾಡಿ, ‘ಶಿಕ್ಷಕರ ಯಡವಟ್ಟಿನಿಂದಾಗಿ ಮಕ್ಕಳು ಶಿಕ್ಷೆ ಅನುಭವಿಸುವಂತಾಗಿದ್ದು, ವಿದ್ಯಾರ್ಥಿಗಳ ಶಿಕ್ಷಣದ ಹಕ್ಕನ್ನು ಕಸಿದಿದ್ದಾರೆ. ಕೋವಿಡ್-19 ಪರಿಣಾಮದಿಂದ ಈ ವರ್ಷದ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಸಮರ್ಪಕವಾಗಿ ನಡೆಯದೆ ರಾಜ್ಯ ಸರ್ಕಾರವು ಹಾಜರಾತಿ ಕಡ್ಡಾಯ ಮಾಡಿಲ್ಲ. ಹೀಗಿದ್ದರೂ, ಗೈರು ಹಾಜರಿ ನೆಪ ಹೇಳಿ ‘ಪ್ರವೇಶ ಪತ್ರ’ ಕೊಡದೇ ಇರುವುದು ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಎಸ್ಎಫ್ಐ ಮುಖಂಡ ಪ್ರತೀಕ್ ಮಾತನಾಡಿ, ಒಟ್ಟು 64 ವಿದ್ಯಾರ್ಥಿಗಳಲ್ಲಿ 34 ವಿದ್ಯಾರ್ಥಿಗಳಿಗೆ ಜುಲೈ 19 ಮತ್ತು 22ರಂದು ನಡೆಯುವ ವಾರ್ಷಿಕ ಪರೀಕ್ಷೆ ಬರೆಯಲು ಪ್ರವೇಶ ಪತ್ರಗಳು ಬಂದಿವೆ. ಆದರೆ ಇನ್ನೂ ಉಳಿದ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ಸಿಗದಿರುವುದು ಆತಂಕಕಾರಿಯಾಗಿದೆ. ಪರೀಕ್ಷೆ ಅರ್ಜಿ ನಮೂನೆ ತುಂಬುವ ಬಗ್ಗೆ ಶಿಕ್ಷಕರು ಮಾಹಿತಿಯನ್ನೇ ಕೊಟ್ಟಿರಲಿಲ್ಲ. ಕೆಲ ವಿದ್ಯಾರ್ಥಿಗಳು ಅರ್ಜಿ ಶುಲ್ಕವನ್ನು ಕಟ್ಟಿದ್ದರೂ ಈ ವಿದ್ಯಾರ್ಥಿಗಳಿಗೂ ಪ್ರವೇಶ ಪತ್ರಗಳು ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಂಚಿತ ವಿದ್ಯಾರ್ಥಿಗಳ ಪಾಲಕರಾದ ಶಂಕರ ಕೆ. ವಂಟಿಕರ್ ಮಾತನಾಡಿ, ‘ಶಿಕ್ಷಕರು ಹೇಳಿದ ಎಲ್ಲ ಹೋಂವರ್ಕ್ ಮಾಡಿ ಪರೀಕ್ಷೆ ಶುಲ್ಕಗಳನ್ನು ನೀಡಿದ್ದೇವೆ.ಆದರೂ ಶಾಲೆಯಲ್ಲಿ ಪರೀಕ್ಷಾ ಮಂಡಳಿಗೆ ಶುಲ್ಕ ತುಂಬದೇ ಹಾಗೇ ಇಟ್ಟುಕೊಂಡಿದ್ದಾರೆ. ಈಗ ಪರೀಕ್ಷೆ ಬರೆಯಲು ಅವಕಾಶ ಸಿಗದೆ ನಮ್ಮ ಮಕ್ಕಳ ಆತಂಕಕ್ಕೆ ಒಳಗಾಗಿದ್ದಾರೆ’ ಎಂದು ತಮ್ಮ ಅಳಲು ತೊಡಿಕೊಂಡರು.

ಎಸ್ಎಫ್ಐ ಮುಖಂಡರಾದ ಕಿರಣ್ಣ ಎಂ, ಅಭಿ ಕೆ.ಎಚ್, ಕೃಷ್ಣ ಕಡಕೋಳ, ವಿದ್ಯಾರ್ಥಿಗಳಾದ ಮಹಮ್ಮದ್‌ ಫರಾನ್‌, ಭುವನ್ ವಂಟಿಕರ್, ಮಹ್ಮದ ಮುಸ್ತಫ ದಾವಣಗೆರೆ, ಶಾನಬಾಜ ಸೊರಬದ, ದುಲಶಾನ ತವನಂದಿ, ನಿಖಿತಾ ಪಾಟೀಲ್, ದಸ್ತಗೀರಿ ಕೊಂಡವಾಡಿ, ಉಮರ್ ಶರಬ್, ಅಲ್ಲಾಬಕ್ಷ್‌ ದಾವಣಗೆರೆ, ಇನಾಯತ್ ನಯಕೊಡಿ, ಫಯಾಜ್ ತವನಂದಿ, ಜಿಕ್ರಿಯಾ ಬಳ್ಳಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.